ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ಆತ್ಮಾಹುತಿ ದಳ ಸೇರಲು ಸಾರ್ವಜನಿಕರಿಗೆ ಪಾಕ್​ ಸೇನೆಯಿಂದ ಕುಮ್ಮಕ್ಕು

ನವದೆಹಲಿ: ಭಯೋತ್ಪಾದನೆ ಸಂಘಟನೆ ಸೇರಿಕೊಳ್ಳುವಂತೆ ಪಾಕಿಸ್ತಾನ ಸೇನೆ ಪಾಕ್​ ಆಕ್ರಮಿತ ಕಾಶ್ಮೀರದ ಜನರಿಗೆ ಕುಮ್ಮಕ್ಕು ಕೊಡುತ್ತಿರುವುದಾಗಿ ಪಿಒಕೆ ಮುಖಂಡರು ವಿಶ್ವಸಂಸ್ಥೆಯಲ್ಲಿ ದೂರಿದ್ದಾರೆ. ವಿಶ್ವಸಂಸ್ಥೆಯಲ್ಲಿ ಆಯೋಜನೆಗೊಂಡಿದ್ದ ವಿಶ್ವಸಂಸ್ಥೆ ಮಾನವಹಕ್ಕು ಆಯೋಗದ (ಯುಎನ್​ಎಚ್​ಆರ್​ಸಿ) 40ನೇ ಸಭೆಯಲ್ಲಿ ಪಾಕ್​ ಆಕ್ರಮಿತ ಕಾಶ್ಮೀರದ ಮಾನಹಕ್ಕು ರಕ್ಷಣೆಯ ಸಂಸ್ಥೆಗಳ ಪದಾಧಿಕಾರಿಗಳು ಈ ಆರೋಪ ಮಾಡಿದರು ಎನ್ನಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್​ಪಿಎಫ್​ ಯೋಧರಿದ್ದ ವಾಹನದ ಮೇಲಿನ ಉಗ್ರನ ಆತ್ಮಾಹುತಿ ದಾಳಿಯನ್ನು ಪಿಒಕೆ ಮಾನವಹಕ್ಕು ರಕ್ಷಣೆ ಸಂಸ್ಥೆಗಳ ಪದಾಧಿಕಾರಿಗಳು ಖಂಡಿಸಿದರು. ಇಂತಹ ದಾಳಿಗಳನ್ನು ಸಂಘಟಿಸಲು ಉಗ್ರರ ಆತ್ಮಾಹುತಿ ದಳ ಸೇರಿಕೊಳ್ಳುವಂತೆ ಪಾಕ್​ ಸೇನಾಪಡೆ ಜನರ ಮೇಲೆ ಒತ್ತಡ ಹೇರುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಯುನೈಟೆಡ್​ ಕಾಶ್ಮೀರ್​ ಪೀಪಲ್ಸ್​ ನ್ಯಾಷನಲ್​ ಪಾರ್ಟಿ ಅಧ್ಯಕ್ಷ ಎಸ್​. ಆಲಿ ಕಳವಳ ವ್ಯಕ್ತಪಡಿಸಿದರು.

ಪಾಕಿಸ್ತಾನ ಮತ್ತು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರಿಂದಾಗಿ ಸ್ಥಳೀಯರು ಅಷ್ಟೇ ಅಲ್ಲ, ಜಾಗತಿಕವಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ, ಉಗ್ರರ ಭಯೋತ್ಪಾದನೆ ನಿಗ್ರಹಕ್ಕೆ ಮತ್ತು ಉಗ್ರರ ನೆಲೆಗಳನ್ನು ಸಂಪೂರ್ಣವಾಗಿ ನಾಶಪಡಿಸುವ ಕುರಿತು ಪಾಕ್​ ಸರ್ಕಾರ ಜವಾಬ್ದಾರಿ ವಹಿಸಿಕೊಳ್ಳಲು ಇದು ಸಕಾಲವಾಗಿದೆ ಎಂದು ಪಿಒಕೆಯ ಮಾನವಹಕ್ಕು ರಕ್ಷಣೆ ಸಂಸ್ಥೆಯ ಕಾರ್ಯಕರ್ತ ಎಂ. ಹಸನ್​ ಅಭಿಪ್ರಾಯಪಟ್ಟರು. (ಏಜೆನ್ಸೀಸ್​)