ಏಷ್ಯ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಪಡೆದ ಹಮ್ದಿ ಇಮ್ರಾನ್

ಚಿಕ್ಕಮಗಳೂರು: ನಗರದ ವಾಸವಿ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ, ಕಿರಿಯ ವರ್ಣಚಿತ್ರ ಕಲಾವಿದ ಹಮ್ದಿ ಇಮ್ರಾನ್ ಏಷ್ಯ ಬುಕ್ ಆಫ್ ರೆಕಾರ್ಡ್​ನಲ್ಲಿ ಸ್ಥಾನ ಗಳಿಸಿದ್ದಾನೆ.

ಬಾಲ್ಯದಲ್ಲಿಯೇ ಚಿತ್ರಕಲೆಯ ಆಸಕ್ತಿ ಮೈಗೂಡಿಸಿಕೊಂಡಿರುವ ಹಮ್ದಿ ಇದೇ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಕಾಫಿನಾಡಿಗೆ ಹೆಮ್ಮೆ ತಂದಿದೆ.

ವರ್ಣಚಿತ್ರ ಕಲಾವಿದರಲ್ಲಿ ಹಮ್ದಿ ಅತ್ಯಂತ ಚಿಕ್ಕ ವಯಸ್ಸಿನವನಾಗಿ ಸಾಧನೆ ಮಾಡಿದ್ದಾನೆ. ಕಳೆದ ವರ್ಷವಷ್ಟೇ ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ಅತ್ಯಂತ ಕಿರಿಯ ವರ್ಣಚಿತ್ರ ಕಲಾವಿದನೆಂದು ಗುರುತಿಸಿ ಪ್ರಮಾಣ ಪತ್ರ ನೀಡಲಾಗಿತ್ತು. ಒಂದು ವರ್ಷದ ಅಂತರದಲ್ಲಿ ಏಷ್ಯ ಬುಕ್​ಆಫ್ ರೆಕಾರ್ಡ್ ಗುರುತಿಸಿ ಪ್ರಮಾಣ ಪತ್ರ ನೀಡಿದೆ ಎಂದು ಹಮ್ದಿ ಇಮ್ರಾನ್ ತಾಯಿ ಶಾಯಿದಾ ಬಾನು ತಿಳಸಿದ್ದಾರೆ.

ನಾಲ್ಕು ವರ್ಷದವನಾಗಿದ್ದಾಗಲೆ ವರ್ಣಕಲೆಯಲ್ಲಿ ಆಸಕ್ತಿ ಹೊಂದಿದ್ದ ಈ ತನಕ ಅತ್ಯುತ್ತಮ 400ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ರಚಿಸಿದ್ದಾನೆ. ಕುಂಚ ಹಿಡಿದರೆ ಆತನ ಕೈಯಲ್ಲಿ ಸುಂದರ ಕಲಾಕೃತಿಗಳು ಅರಳುತ್ತವೆ. ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಕಲೆಯಲ್ಲಿ ಅಡಕ ಮಾಡುವುದು ಆತನ ವಿಶಿಷ್ಟ ಪ್ರತಿಭೆ. ಜಿಲ್ಲಾ, ರಾಜ್ಯ, ರಾಷ್ಟ್ರಮಟ್ಟದಲ್ಲಿ ನೂರಾರು ಪ್ರಶಸ್ತಿಗಳು ಲಭಿಸಿವೆ.

ಅಪೂರ್ವವಾದ ನವ್ಯ ಭಾವಚಿತ್ರಗಳು, ಸಾಂರ್ದಭಿಕ ಚಿತ್ರಗಳು, ಹಲವು ಮಾದರಿಯ ಯಥಾದರ್ಶನ ನೀತಿಯ ಚಿತ್ರಕಲೆಯನ್ನು ಇಮ್ರಾನ್ ಕರಗತ ಮಾಡಿಕೊಂಡಿದ್ದಾನೆ. ರಾಷ್ಟ್ರಮಟ್ಟದ ಪ್ರತಿಭಾ ಕಾರಂಜಿ ಸೇರಿ ಅನೇಕ ಪ್ರಶಸ್ತಿ, ಗೌರವಕ್ಕೆ ಭಾಜನನಾಗಿದ್ದಾನೆ. ಪಕಾಸೋ ಅಂತಾರಾಷ್ಟ್ರೀಯ ಸಂಸ್ಥೆ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವ ಆನ್​ಲೈನ್ ಸ್ಪರ್ಧೆಯಲ್ಲಿ ಭಾಗವಹಿಸಿ ಮನ್ನಣೆ ಗಳಿಸುತ್ತಿದ್ಧಾನೆ ಎಂದರು.

ಪೆನಿಲ್ ಸ್ಕೆಚಸ್, ಚಾರ್​ಕೋಲ್, ಕ್ರಯಾನ್ಸ್, ಪೇಸ್ಟಲ್ಸ್, ಅಕ್ರಿಲಿಕ್, ಆಯಿಲ್ ಸೇರಿ ವಾಟರ್ ಪೇಂಟ್​ಗಳಲ್ಲಿ ನೂರಾರು ಕಲಾಕೃತಿ ಗಮನ ಸೆಳೆಯುವ ಗಂಭೀರ ಕಲಾಕೃತಿ ರಚಿಸಿದ್ದಾನೆ ಎಂದು ಹೇಳಿದರು. ತಂದೆ ಖಾಲಿದ್ ಇಮ್ರಾನ್, ಚಿತ್ರಕಲಾ ಶಿಕ್ಷಕ ಕಟ್ಟಿಮನೆ ಸುದ್ದಿಗೋಷ್ಠಿಯಲ್ಲಿದ್ದರು.