ಬೆಂಗಳೂರು: ಕಳೆದ ಕೆಲವು ದಿನಗಳಿಂದಲೂ ಸ್ಯಾಂಡಲ್ವುಡ್ನಲ್ಲಿ ಪೈಲ್ವಾನ್ ಪೈರಸಿ ವಿಚಾರವಾಗಿ ಫ್ಯಾನ್ ವಾರ್ ನಡೆಯುತ್ತಿರುವ ಬೆನ್ನಲ್ಲೇ ನಿನ್ನೆಯಷ್ಟೇ ಪೈರಸಿ ಮಾಡಿದ್ದ ರಾಕೇಶ್ ಎನ್ನಲಾದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಫ್ಯಾನ್ ವಾರ್ನಿಂದ ಸ್ಟಾರ್ ವಾರ್ಗೆ ವೇದಿಕೆ ಮಾಡಿಕೊಟ್ಟಂತಾಗಿದೆ.
ಈ ಕುರಿತು ಟ್ವೀಟ್ ಮಾಡಿದ್ದ ಕಿಚ್ಚಾ ಸುದೀಪ್ ಅವರ ಪದ ಬಳಕೆ ಇದೀಗ ವಿವಾದವನ್ನು ಸೃಷ್ಟಿಸಿದೆ. ಬಳೆ ತೊಟ್ಟವರು ಶಕ್ತಿಹೀನರು, ಕಡಗ ತೊಟ್ಟವರು ಮಾತ್ರ ಪರಾಕ್ರಮಶಾಲಿಗಳು ಎನ್ನುವ ಅರ್ಥವನ್ನು ಸುದೀಪ್ ಟ್ವೀಟ್ ನೀಡುತ್ತಿದ್ದು, ಇದು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.
ಸ್ವಾಮಿ ನಿಮ್ಮ ಕೋಪ ಬೇಜಾರು ಸಕಾರಣವೇ ಇರಬಹುದು ಆದ್ರೆ ಸಿಟ್ಟಲ್ಲಿ ಏನೇನೋ ಬರೆದು ಅಭಾಸ ಮಾಡ್ಕೋಬೇಡಿ
ಕೈಗೆ ಬಳೆ ಹಾಕಿದೋರು ಅಂದ್ರೆ ಮಹಿಳೆಯರು ಅಶಕ್ತರು ಅನ್ನೋ ಪರೋಕ್ಷ ಟೀಕೆ ನಿಮ್ಮ ಮಾತಲ್ಲಿ ಇದೆ.
ಕೋಪ ಬೇಜಾರು ಶಕ್ತಿ ಇವೆಲ್ಲ ಗಂಡಸಿನ ಜೈವಿಕ ಗುರುತು ಮಾತ್ರ ಅಲ್ಲ
ಹೆಣ್ಣುಮಕ್ಕಳು ಗಂಡುಮಕ್ಕಳಿಗಿಂತ ಹೆಚ್ಚು ಸಮರ್ಥರು ಮರೆಯಬೇಡಿ— ಕೃಷಿಕ ಎವಿ/Krushika AV (@KrishKrushik) September 20, 2019
ನಾನು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ. ನನಗೆ ನನ್ನ ಸಿನಿಮಾ ಬಿಟ್ಟರೆ ಬೇರೇನೂ ಗೊತ್ತಿಲ್ಲ. ನನ್ನ ಮೌನ, ನನ್ನ ತಾಳ್ಮೆ ಎರಡನ್ನು ಪರೀಕ್ಷಿಸಿದ್ದಾರೆ. ಸಂಪೂರ್ಣ ಪೈಲ್ವಾನ್ ತಂಡದ ಶ್ರಮವನ್ನು ಹಾಳುಮಾಡಲು ತಮ್ಮ ಶಕ್ತಿಯನ್ನು ಹಾಕಿದ್ದಾರೆ. ಇದರ ಹಿಂದಿರುವ ವ್ಯಕ್ತಿಗಳ ನೆಮ್ಮದಿಯ ನಿದ್ರೆ ಇನ್ನು ಕೆಲವು ದಿನಗಳು ಮಾತ್ರ ಎಂದು ಸುದೀಪ್ ಬರೆದು ಟ್ವೀಟ್ ಮಾಡಿದ್ದರು.
ಈ ವಿಚಾರ ಅನೇಕರ ಸಿಟ್ಟಿಗೆ ಕಾರಣವಾಗಿದ್ದು, ನಟರಿಗೆ ಜೆಂಡರ್ ಸೆನ್ಸಿಟಿವಿಟಿ ಇರಬೇಕು. ಇವರೆಲ್ಲ ಸ್ಟೀರಿಯೋ ಟೈಪ್ಗಳಿಂದ ಹೊರಬರುವುದು ಯಾವಾಗ ಎಂದು ಮಹಿಳೆಯೊಬ್ಬರು ಪ್ರಶ್ನಿಸಿದ್ದಾರೆ.
ಡಾ. ರಾಜ್ಕುಮಾರ್ ಅಂತಾ ಒಬ್ಬ ಮಹಾನ್ ನಟರು ಇದ್ರು. ಅವರು ಈ ರೀತಿ ಪದಪ್ರಯೋಗ ಮಾಡಿದ ಉದಾಹರಣೆ ಇದೆಯಾ? ಅವರ ಎತ್ತರಕ್ಕೆ ಬೆಳೆಯೋಕ್ಕೆ ನೋಡಿ. ಆ ಎತ್ತರಕ್ಕೆ ಬೆಳೆಯೋದು ಅಂದ್ರೆ ಈ ರೀತಿ ಹೊಲಸು ಹೊಲಸಾಗಿ ನಡೆದುಕೊಳ್ಳೋದು ಅಂತಲ್ಲಾ. ಹಣ ಮಾತ್ರವಲ್ಲ ಗುಣದಲ್ಲೂ ಬೆಳೆದು ನಿಲ್ಲಿ. ಎಲ್ಲಾ ಸರಿಹೋಗುತ್ತೆ.
— Samuel Shine Soans? – ಸ್ಯಾಮ್ಯುವೆಲ್ ಶೈನ್ ಸೋನ್ಸ್? (@SoansShine) September 21, 2019
ಸ್ಯಾಂಡಲ್ವುಡ್ ನಟಿ ನೀತು ಶೆಟ್ಟಿ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ನಾವೇನು ಸೀರೆ ಉಟ್ಟಿಲ್ಲ, ಬಳೆ ತೊಟ್ಟಿಲ್ಲ, ಹೂವು ಮುಡ್ಕೊಂಡಿಲ್ಲ…. ಇದನ್ನೇ ಆಂಗ್ಲ ಭಾಷೆಯಲ್ಲಿ ಸೆಕ್ಸಿಸ್ಟ್ ಅನ್ನೋದು. ಶೌರ್ಯ ಪ್ರದರ್ಶನಕ್ಕೆ ಗಂಡು ಮಕ್ಕಳು ಹೇಳುವ ಕೆಲವು ಅರ್ಥವಿಲ್ಲದ ಅವಮಾನಕರ ವಾಕ್ಯಗಳು ಎಂದು ಕಿಡಿಕಾರಿದ್ದಾರೆ.
ನಟರು ಆಫ್ಟರಾಲ್ ನಟರು. ಅವರಿಗೆ ಜೆಂಡರ್ ಸೆನ್ಸಿಟಿವಿಟಿ ಇರಬೇಕು ಎಂದು ನಾವು ನಿರೀಕ್ಷಿಸಬಾರದು ಅಲ್ವಾ? ಬಳೆ ಹಾಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹಣ್ಮಕ್ಕಳು. ಅವರು ವೀಕ್ ಅಂತಾನಾ? ಈ ಸಮಾಜ ಇಂತಹ ಸ್ಟೀರಿಯೋಟೈಪ್ಗಳಿಂದ ಹೊರಬರುವುದು ಯಾವಾಗ? ಕೊನೆಪಕ್ಷ ಸೆಲೆಬ್ರಿಟಿಗಳು ಜವಾಬ್ದಾರಿಯಿಂದ ಮಾತನಾಡಲು ಕಲಿಯೋದು ಯಾವಾಗ? ಸಿನಿಮಾ ಡೈಲಾಗ್ ಆಗಿದ್ದಿದ್ರೆ ಪಾತ್ರದ ಅಗತ್ಯ ಅನ್ಬೋದಿತ್ತು. ಇದು ಸ್ವಂತದ ಸ್ಟೇಟ್ಮೆಂಟ್. ಸೀರಿಯಸ್ಲಿ ಇವರಿಗೆಲ್ಲ ಲಿಂಗಸಂವೇದನೆ ಮತ್ತು ಭಾಷೆ ಬಗ್ಗೆ ಒಂದು ವರ್ಕ್ ಶಾಪ್ ಅಗತ್ಯವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತೋರ್ವ ಬಳಕೆದಾರರು.
ಒಟ್ಟಿನಲ್ಲಿ ಪೈರಸಿ ವಿಚಾರವಾಗಿ ಫ್ಯಾನ್ ವಾರ್, ಸ್ಟಾರ್ ವಾರ್ಗಳ ಮಧ್ಯೆ ಪದಬಳಕೆಯೇ ಇದೀಗ ಸಮಸ್ಯೆಯಾಗಿ ಪರಿಣಮಿಸಿದ್ದು, ಕಿಚ್ಚ ಸುದೀಪ್ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುವಂತಾಗಿರುವುದು ದುರಂತ. (ದಿಗ್ವಿಜಯ ನ್ಯೂಸ್)