ಬೆಂಗಳೂರಲ್ಲೇ ಪೈಲ್ವಾನ್ ಆಡಿಯೋ ಹಬ್ಬ

ಬೆಂಗಳೂರು: ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಆಗಾಗ ಮುಂದೂಡಿಕೆ ಆಗುತ್ತಲೇ ಬರುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಜುಲೈ ಕೊನೇ ವಾರದಲ್ಲೇ ಹಾಡುಗಳು ಬಿಡುಗಡೆ ಆಗಬೇಕಿತ್ತು. ಕಾರಣಾಂತರಗಳಿಂದ ಆ.9ಕ್ಕೆ ಮುಂದೂಡಲಾಯಿತು. ಚಿತ್ರದುರ್ಗದಲ್ಲಿ ಬೃಹತ್ ವೇದಿಕೆ ನಿರ್ವಿುಸಿ ಕಾರ್ಯಕ್ರಮ ಮಾಡುವುದು ಚಿತ್ರತಂಡದ ಪ್ಲಾ್ಯನ್ ಆಗಿತ್ತು. ಆದರೆ ಅದರಲ್ಲಿ ಈಗ ಬದಲಾವಣೆ ಆಗಿದೆ. ರಾಜ್ಯದೆಲ್ಲೆಡೆ ಪ್ರವಾಹ ಇರುವ ಕಾರಣ, ಬೆಂಗಳೂರಿನಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲು ತಂಡ ಆಲೋಚಿಸುತ್ತಿದೆ.

ರಾಜ್ಯ ರಾಜಧಾನಿಯಲ್ಲಿ ಆ.18ರಂದು ಕಾರ್ಯಕ್ರಮ ಜರುಗುವ ಸಾಧ್ಯತೆ ಇದೆ. ಈ ಬಗ್ಗೆ ಸುದೀಪ್ ಜತೆ ನಿರ್ದೇಶಕ ಕೃಷ್ಣ ಮಾತುಕತೆ ನಡೆಸುತ್ತಿದ್ದು, ಇತರ ಕಲಾವಿದರ ಡೇಟ್ಸ್ ನೋಡಿಕೊಂಡು ದಿನಾಂಕ ನಿಗದಿ ಮಾಡಲಿದ್ದಾರೆ. ಆ.18ರಂದೇ ಆಡಿಯೋ ಬಿಡುಗಡೆ ಮಾಡಬೇಕು ಎಂಬ ಗುರಿ ಇರಿಸಿಕೊಳ್ಳಲಾಗಿದೆ. ಸಮಾರಂಭ ನಡೆಯಲಿರುವ ಸ್ಥಳ ಯಾವುದು ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಈಗಾಗಲೇ ಯೂಟ್ಯೂಬ್​ನಲ್ಲಿ ಲಭ್ಯವಿರುವ ‘ಕಣ್ಮಣಿಯೇ..’ ಹಾಗೂ ‘ಪೈಲ್ವಾನ್..’ ಶೀರ್ಷಿಕೆ ಗೀತೆಗಳು ಅಭಿಮಾನಿಗಳ ಮೆಚ್ಚುಗೆ ಗಳಿಸಿವೆ.

ಆಡಿಯೋ ಬಿಡುಗಡೆಯಾದ ಕೆಲವೇ ದಿನಗಳ ನಂತರ ಟ್ರೇಲರ್ ಬಿತ್ತರಿಸಲಿದ್ದಾರೆ ನಿರ್ದೇಶಕರು. ಚಿತ್ರದಲ್ಲಿ ಸುದೀಪ್ ಜತೆ ಸುನೀಲ್ ಶೆಟ್ಟಿ, ಆಕಾಂಕ್ಷಾ ಸಿಂಗ್, ಕಬೀರ್ ದುಹಾನ್ ಸಿಂಗ್ ಮುಂತಾದವರು ನಟಿಸಿದ್ದಾರೆ. ಸೆ.12ರಂದು ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ.

Leave a Reply

Your email address will not be published. Required fields are marked *