blank

ನ.16ರೊಳಗೆ ಪಹಣಿಯಲ್ಲಿನ ವಕ್ಫ್ ಆಸ್ತಿ ಪದ ಅಳಿಸಿ

Pahani, Waqf Property, Tehsildar Balarama Kattimani, Muddebihal, Government of Karnataka, VHP, Bajrang Dal, Ex-Servicemen Association, Farmers Association, BJP,

ಮುದ್ದೇಬಿಹಾಳ: ರೈತರ ಪಹಣಿಯಲ್ಲಿ ದಾಖಲಾಗಿರುವ ವಕ್ಫ್ ಆಸ್ತಿ, ಕರ್ನಾಟಕ ಸರ್ಕಾರ ಪದಗಳನ್ನು ನ.16ರೊಳಗೆ ತೆಗೆದು ಹಾಕುವುದಾಗಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಕುಂಟೋಜಿ, ಬಿದರಕುಂದಿ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸೋಮವಾರ ತಾತ್ಕಾಲಿಕವಾಗಿ ಅಂತ್ಯಗೊಡಿತು.

ಕಳೆದ 4-5 ದಿನಗಳಿಂದ ಧರಣಿಗೆ ಟೆಂಟ್ ಹಾಕಲಾಗಿತ್ತು. ಈ ಸ್ಥಳಕ್ಕೆ ವಿಎಚ್‌ಪಿ, ಬಜರಂಗದಳ, ಮಾಜಿ ಸೈನಿಕರ ಸಂಘ, ರೈತ ಸಂಘ, ಬಿಜೆಪಿ ತಾಲೂಕು ಘಟಕ ಸೇರಿ ಹಲವು ಸಂಘಟನೆಗಳ ಸದಸ್ಯರು ಆಗಮಿಸಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸಿದ್ದರು.

ಹೋರಾಟದ ಗಂಭೀರಗೊಳ್ಳುವುದನ್ನು ಅರಿತು ಪೊಲೀಸ್ ಇಲಾಖೆ ಸಲಹೆಯಂತೆ ತಹಸೀಲ್ದಾರ್ ಧರಣಿ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದರು. ಇದಕ್ಕೂ ಮುನ್ನ ಕೆಲವರು ತಹಸೀಲ್ದಾರ್ ಕಚೇರಿ ಎದುರೇ ಪ್ರತ್ಯೇಕ ಮನವಿ ಸಲ್ಲಿಸಿದ್ದರು.

ತಹಸೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಸರ್ಕಾರದ ಆದೇಶ ಇರುವುದರಿಂದ ನ.20 ರವರೆಗೂ ಪರಿಶೀಲನೆ ನಡೆಸಿ ನಂತರ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಿಳಿಸಿದಾಗ ಇದನ್ನು ಒಪ್ಪದ ರೈತರು ಈಗಲೇ ಬಗೆಹರಿಸಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ರೈತ ಮುಖಂಡರು, ತಹಸೀಲ್ದಾರ್ ನಡುವೆ ಸ್ವಲ್ಪ ಮಟ್ಟಿನ ವಾಗ್ವಾದ ನಡೆಯಿತು.

ತಹಸೀಲ್ದಾರ್ ಮಾತಿಗೆ ಸಿಡಿಮಿಡಿಗೊಂಡ ರೈತ ಮುಖಂಡರು ನಮ್ಮ ಪಹಣಿಗಳಲ್ಲಿ ನಮ್ಮನ್ನು ಕೇಳದೆ ವಕ್ಫ್ ಹೆಸರು ದಾಖಲಿಸಿದ್ದೀರಿ. ಈಗ ಪರಿಶೀಲಿಸುತ್ತೇವೆ ಎನ್ನುತ್ತಿದ್ದೀರಿ. ನಮ್ಮ ಒಪ್ಪಿಗೆ ಇಲ್ಲದೆ ಪಹಣಿಗಳಲ್ಲಿ ಹೇಗೆ ವಕ್ಫ್ ಅನ್ನೋದನ್ನು ಕೂಡಿಸಿದ್ದೀರೋ ಅದೇ ರೀತಿ ಈಗ ಎಲ್ಲವನ್ನೂ ತೆಗೆದು ಹಾಕಬೇಕು. ಇಲ್ಲವಾದರೆ ನಮ್ಮ ಪ್ರಾಣ ಹೋದರೂ ಪ್ರತಿಭಟನೆ ಕೈಬಿಡುವುದಿಲ್ಲ. ನಿಮ್ಮ ಕಚೇರಿಗೂ ಬೀಗ ಹಾಕುತ್ತೇವೆ ಎಂದು ಎಚ್ಚರಿಸಿದರು.

ರೈತರ ಆಕ್ರೋಶಕ್ಕೆ ಮಣಿದ ತಹಸೀಲ್ದಾರ್ ನ.16ರೊಳಗೆ ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ತಿಳಿಸಿ ರೈತರನ್ನು ಸಮಾಧಾನಪಡಿಸಿ ನಾನೂ ಸಹಿತ ರೈತರು, ಜನರ ಸೇವೆಗಾಗಿಯೇ ಇದ್ದೇನೆ. ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಬಿಜೆಪಿ ಹಿರಿಯ ಧುರೀಣ ಪ್ರಭು ಕಡಿ, ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳಳ್ಳಿ, ಮಾಜಿ ಸೈನಿಕ ನಾಗಲಿಂಗಯ್ಯ ಮಠ, ವಿಎಚ್‌ಪಿ ಅಧ್ಯಕ್ಷ ಶಿವಯೋಗೆಪ್ಪ ರಾಂಪೂರ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ಕಾರ್ಯದರ್ಶಿ ಪಿ.ಎನ್.ಬಿರಾದಾರ, ರೈತ ಸಂಘದ ಅಧ್ಯಕ್ಷ ಅಯ್ಯಣ್ಣ ಬಿದರಕುಂದಿ, ಬಿಜೆಪಿ ಮುದ್ದೇಬಿಹಾಳ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಪ್ರಮುಖರಾದ ಎಸ್.ಕೆ.ಕಟ್ಟಿ, ಸಂಗಣ್ಣ ಬಾಗೇವಾಡಿ, ವೈ.ಎಲ್.ಬಿರಾದಾರ, ಎಸ್.ವಿ.ಹೊಳಿ ಇತರರಿದ್ದರು.

ರೈತ ಮಹಿಳೆ ಆಕ್ರೋಶ
ರೈತ ಮಹಿಳೆ ಮಹಾದೇವಿ ಕೋಳೂರ ತಹಸೀಲ್ದಾರ್ ಕಚೇರಿ ಎದುರು ನಿಂತು ಅಧಿಕಾರಿಗಳನ್ನು ತನ್ನ ಗ್ರಾಮೀಣ ಭಾಷೆಯಲ್ಲಿ ವಾಚಾಮಗೋಚರವಾಗಿ ನಿಂದಿಸಿ ಎಲ್ಲರ ಗಮನ ಸೆಳೆದಳು. ಅಧಿಕಾರಿಗಳು, ರಾಜಕಾರಣಿಗಳ ಗಂಟೇನು ಹೋಗ್ತದೆ. ಪಗಾರ ಬರರೈತಿ, ತಿಂತಾರ ಮನಿಗಿ ಹೋಕ್ಕಾರ. ರೈತರ ಗೋಳು ಕೇಳೋರ‌್ಯಾರು. ಒಳಗಿಂದೊಳಗೆ ಉತಾರಿ ಒಳಗ ಹೆಸರು ಕೂಡಿಸಿ ರೈತರ ಬಾಯಾಗ ಮಣ್ಣ ಹಾಕಿ ನಮ್ಮನ್ನ ಹೊಯ್ಕೋಳಂಗ ಮಾಡ್ಯಾರ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗ ಬಂದ ರೈತರ ಮನವಿ ಕೇಳದಿದ್ರ ಇಲ್ಲೇ ಉಪವಾಸ ಕುಂತು ಸಾಯ್ತೀವಿ. ಉತಾರಿ ಒಳಗ ವಕ್ಫ್ ಹೆಸರು ಕುಂತಿದ್ದಕ್ಕ ನಮಗ ಬ್ಯಾಂಕನವರು ಸಾಲಾ ಕೊಡೂದುಲ್ಲ ಅಂತಾರ ಎಂದು ಆಕ್ರೋಶ ಹೊರಹಾಕಿ ಬಿಸಿ ಮುಟ್ಟಿಸಿದಳು.

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…