ಬೆಂಗಳೂರು: ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡಾಭಿಮಾನಕ್ಕೆ ಪಹಲ್ಗಾಮ್ ಘಟನೆಯನ್ನು ಹೋಲಿಕೆ ಮಾಡಿದ ಆರೋಪದಡಿ ಬಾಲಿವುಡ್ ಗಾಯಕ ಸೋನು ನಿಗಮ್ ವಿರುದ್ಧ ಮುಂದಿನ ವಿಚಾರಣೆವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸೂಚಿಸಿದೆ. ಜತೆಗೆ, ಅವರ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿದೆ.

ತಮ್ಮ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದು ಕೋರಿ ಸೋನು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರಿದ್ದ ರಜಾಕಾಲದ ನ್ಯಾಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲ್ಲಿ ಸೋನು ನಿಗಮ್‌ಗೆ ಪ್ರೇಕ್ಷಕರು ಕನ್ನಡ ಹಾಡುಗಳನ್ನು ಹಾಡುವಂತೆ ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಘಟನೆ ನಡೆದಿದೆ. ಯಾರಿಗೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ಅಲ್ಲದೆ, ದೂರು ನೀಡಿರುವ ವ್ಯಕ್ತಿ ಸ್ಥಳದಲ್ಲಿರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಯನ್ನು ಉಲ್ಲೇಖಿಸಿ ದೂರು ನೀಡಲಾಗಿದ್ದು, ಅದನ್ನು ರದ್ದುಗೊಳಿಸುವಂತೆ ಮನವಿ ಮಾಡಿದರು.
ಸರ್ಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ನೀಡಿರುವ ಹೇಳಿಕೆಯಿಂದಾಗಿ ಕನ್ನಡಿಗರ ಭಾವನೆಗೆ ಧಕ್ಕೆ ಉಂಟಾಗಿದೆ. ಈ ನಿಟ್ಟಿನಲ್ಲಿ ಅವರನ್ನು ವಿಚಾರಣೆಗೆ ಒಳಪಡಿಸಬೇಕು. ಅವರು ಹೇಳಿಕೆ ನೀಡಿದ ಸ್ಥಳ ಮಹಜರ್ ಮಾಡಬೇಕಾಗಿದೆ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸುವಂತೆ ಮನವಿ ಮಾಡಿದರು.
‘ಅರ್ಜಿದಾರರು ಪ್ರತಿಷ್ಠಿತ ವ್ಯಕ್ತಿಯಾಗಿದ್ದು, ಅವರು ವಿಚಾರಣೆಗಾಗಿ ಬೆಂಗಳೂರಿಗೆ ಬಂದಲ್ಲಿ ಮತ್ತೆ ಗೊಂದಲ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಆನ್‌ಲೈನ್ ಇಲ್ಲವೇ ಲಿಖಿತವಾಗಿ ಹೇಳಿಕೆ ದಾಖಲಿಸಿಕೊಳ್ಳಬಹುದು’ ಎಂದು ಸೋನು ನಿಗಮ್ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಸರ್ಕಾರಿ ವಕೀಲರು, ಅರ್ಜಿದಾರರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಈ ವೇಳೆ ನ್ಯಾಯಪೀಠ, ಅರ್ಜಿದಾರರು ನೀಡಿರುವ ಹೇಳಿಕೆ ಈಗಾಗಲೆ ಮಾಧ್ಯಮ ಸೇರಿ ಎಲ್ಲೆಡೆಗೆ ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಹೀಗಾಗಿ ಅವರ ವಿರುದ್ಧ ತನಿಖೆ ಮಾಡಬೇಕು, ಏನು ಮಹಜರ್ ಮಾಡಬೇಕು ಎಂದು ಪ್ರಶ್ನಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ತಿಳಿಸಿತು. ಜತೆಗೆ, ಎಫ್‌ಐಆರ್ ಕುರಿತ ಅಂತಿಮ ತನಿಖಾ ವರದಿ ಸಲ್ಲಿಕೆಗೆ ತಡೆ ನೀಡಿ ಆದೇಶಿಸಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆ ಮುಂದೂಡಿತು.