ಸವಣೂರ: ಕಾಶ್ಮೀರದ ಪಹಲ್ಗಾಮ್ ದಾಳಿ ಘಟನೆಯಿಂದ ಆರಂಭಗೊಂಡ ಭಾರತ-ಪಾಕಿಸ್ತಾನ ಯುದ್ಧದ ಕರಿನೆರಳು ವಿಶ್ವ ವಿಖ್ಯಾತ ಸವಣೂರ ವಿಳ್ಯೆದೆಲೆ ಮೇಲೂ ಬಿದ್ದಿದೆ. ಎರಡು ರಾಷ್ಟ್ರಗಳ ವ್ಯಾಪಾರ ವಹಿವಾಟು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವೀಳ್ಯದೆಲೆ ರಫ್ತು ಸಂಪೂರ್ಣ ಸ್ಥಗಿತಗೊಂಡಿದ್ದು, ಬೆಳೆಗಾರರು, ಮಾರಾಟಗಾರರು ಪರದಾಡುವಂತಾಗಿದೆ.

ಶತಮಾನಗಳಿಂದ ಹೆಸರುವಾಸಿಯಾಗಿರುವ ಸವಣೂರ ವೀಳ್ಯೆದೆಲೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ದೆಹಲಿ ಮೂಲಕ ರಾಷ್ಟ್ರದ ಗಡಿ ದಾಟಿ ಪಾಕಿಸ್ತಾನಕ್ಕೂ ತಲುಪುತ್ತಿತ್ತು.
ಸವಣೂರ ಸೇರಿದಂತೆ ತಾಲೂಕಿನ ಕಾರಡಗಿ, ಮಾದಾಪುರ, ಚಿಲ್ಲೂರ, ಬಡ್ನಿ, ಹೊಸಳ್ಳಿ, ಚೌಡಾಳ, ಬೇವಿನಹಳ್ಳಿ, ಶಿರಬಡಗಿ, ಜಲ್ಲಾಪುರ, ಕಳಲಕೊಂಡ ಇತ್ಯಾದಿ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ವೀಳ್ಯದೆಲೆ ಬೆಳೆಯುತ್ತಾರೆ.
ನವಾಬರ ಸಂಸ್ಥಾನ ಆಡಳಿತ ಹೊಂದಿದ್ದ ಸವಣೂರ ಪ್ರದೇಶದಲ್ಲಿ ನವಾಬರ ಸಹಕಾರದಿಂದ ತೋಟಗಾರರು ವೀಳ್ಯೆದೆಲೆ ಬೆಳೆಯಲು ಆರಂಭಿಸಿದ್ದರು. ಅಂದಿನಿಂದ ಇಂದಿನವರೆಗೂ ನಿತ್ಯ ಸವಣೂರಿನಿಂದ ವ್ಯಾಪಾರಸ್ಥರು ದೆಹಲಿ ಮೂಲಕ ಪಾಕಿಸ್ತಾನದ ಕರಾಚಿಗೆ ಸಾಗಾಟ ಮಾಡುತ್ತಿದ್ದರು. ಆದರೆ, ಪಹಲ್ಗಾಮ್ ದಾಳಿಯಿಂದ ಉಂಟಾದ ಎರಡು ರಾಷ್ಟ್ರಗಳ ವ್ಯಾಪಾರ ವಹಿವಾಟು ಸ್ಥಗಿತದಿಂದ ವೀಳ್ಯೆದೆಲೆ ರಫ್ತು ಸಂಪೂರ್ಣ ಬಂದ್ ಆಗಿದೆ. ಇದರಿಂದ ರೈತರು ಮತ್ತು ವ್ಯಾಪಾರಸ್ಥರು ಸಂಕಷ್ಟಕ್ಕೀಡಾಗಿದ್ದಾರೆ.
ಸವಣೂರ ಎಪಿಎಂಸಿ ವ್ಯಾಪ್ತಿಯಲ್ಲಿ ಹಾಗೂ ತಾಲೂಕಿನ ಕಾರಡಗಿ ಗ್ರಾಮದಲ್ಲಿ ವಾರದ ಮೂರು ದಿನ ವೀಳ್ಯೆದೆಲೆ ಮಾರುಕಟ್ಟೆ ನಡೆಯುತ್ತದೆ. ಈ ಮಾರುಕಟ್ಟೆಗೆ ಕೇವಲ ಸವಣೂರ ತಾಲೂಕು ಅಷ್ಟೇ ಅಲ್ಲ, ರಾಣೆಬೆನ್ನೂರ, ಹಾವೇರಿ, ಹರಿಹರ, ದಾವಣಗೆರೆ ಸೇರಿದಂತೆ ವಿವಿಧ ತಾಲೂಕುಗಳಿಂದ ರೈತರು ವೀಳ್ಯದೆಲೆ ತರುತ್ತಾರೆ. ಆದರೆ, ರಫ್ತು ಸ್ಥಗಿತದ ಹಿನ್ನೆಲೆಯಲ್ಲಿ ಎಲೆ ಮಾರಾಟ ಬಹಳಷ್ಟು ಕುಂಠಿತಗೊಂಡು ದರ ಸಂಪೂರ್ಣ ನೆಲ ಕಚ್ಚಿದಂತಾಗಿದೆ.
ದರ ಕುಸಿತ:
ಈ ಮೊದಲು 12 ಸಾವಿರದಿಂದ 18 ಸಾವಿರ ರೂ.ಗಳಿಗೆ ಒಂದು ಅಂಡಿಗೆ ಮಾರಾಟ ಆಗುತ್ತಿತ್ತು. ಇಂದಿನ ಬೆಲೆ ಒಂದು ಅಂಡಿಗೆಗೆ 3000ರಿಂದ 6000ರ ವರೆಗೆ ಮಾತ್ರ ಮಾರಾಟ ಆಗುತ್ತಿದೆ. ಆದ್ದರಿಂದ ತಾಲೂಕಿನಲ್ಲಿ ಸುಮಾರು 3000ಕ್ಕೂ ಹೆಚ್ಚಿನ ಹೆಕ್ಟೇರ್‌ನಲ್ಲಿ ವೀಳ್ಯದೆಲೆ ಬೆಳೆಯುತ್ತಿರುವ ರೈತರು ಪರದಾಡುವಂತಾಗಿದೆ.
ಮಧ್ಯ ಪ್ರದೇಶ, ಉತ್ತರ ಪ್ರದೇಶದ ನಗರಗಳಿಗೆ ನಿತ್ಯ ಸಾಗಾಟ ಆಗುತ್ತಿದೆ. 12,000 ವೀಳ್ಯದೆಲೆಯನ್ನು ಹೊಂದಿದ ಸುಮಾರು 20 ಅಂಡಿಗೆ (ಮೂಟೆ)ಯನ್ನು ನಿತ್ಯ ಕಳುಹಿಸಲಾಗುತ್ತಿತ್ತು. ಆದರೆ, ರಪ್ತು ಬಂದ್ ಆಗಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದ ವ್ಯಾಪಾರಸ್ಥರು ವೀಳ್ಯದೆಲೆ ಖರೀದಿ ನಿಲ್ಲಿಸಿದ್ದಾರೆ.
ಯುದ್ಧದ ಕರಿ ನೆರಳು ವೀಳ್ಯದೆಲೆಯ ವ್ಯಾಪಾರ ವಹಿವಾಟನ್ನು ನೆಲ ಕಚ್ಚುವಂತೆ ಮಾಡಿದೆ. ಸವಣೂರ ವೀಳ್ಯದೆಲೆ ಅತ್ಯಂತ ಮೃದುವಾಗಿರುವ ಕಾರಣ ಬಹಳ ಬೇಡಿಕೆ ಇತ್ತು. ಇಂದು ಬೆಲೆ ದಿಢೀರ್ ಕುಸಿತದಿಂದ ರೈತರು ಹಾಗೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಗುರಿಯಾಗುವಂತೆ ಆಗಿದೆ.
ಬಾಬಾಹುಸೇನ್ ಗೌಡಗೇರಿ, ಸವಣೂರ ವೀಳ್ಯೆದೆಲೆ ವಾಪಾರಸ್ಥ
ವೀಳ್ಯದೆಲೆ ಬೆಲೆ ಕುಸಿತದಿಂದ ಬಹಳಷ್ಟು ತೊಂದರೆ ಉಂಟಾಗಿದೆ. ಸರ್ಕಾರ ಈ ಕುರಿತು ಗಮನ ಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು. ನೀರಾವರಿ, ತೋಟಗಾರಿಕೆ ಬೆಳೆಯಲ್ಲಿ ಈ ಭಾಗದಲ್ಲಿ ವೀಳ್ಯದೆಲೆಯನ್ನು ಪ್ರಮುಖ ಬೆಳೆಯನ್ನಾಗಿ ಗುರುತಿಸಿ ರೈತರಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು.
ಬಾಹುದೀನ್ ಇನಾಮದಾರ, ರೈತ
ತೋಟಗಾರಿಕೆ ಬೆಳೆ ಪ್ರಖ್ಯಾತ ಸವಣೂರ ವೀಳ್ಯದೆಲೆಯ ಮಾರುಕಟ್ಟೆ ವಿಸ್ತೀರ್ಣಕ್ಕಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ. ವಿಜ್ಞಾನಿಗಳ ತಂಡ ಭೇಟಿ ನೀಡಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸವಣೂರ ವೀಳ್ಯದೆಲೆ ನೇರ ಖರೀದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ರೈತರಿಗೆ ಅನಕೂಲ ಮಾಡಲಾಗುತ್ತಿದೆ.
ಶಾಮಣ್ಣ ಎಸ್. ಎನ್., ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ, ಸವಣೂರ