ಪಡುಮಲೆಯಲ್ಲಿಲ್ಲ ಶೌಚಗೃಹ

<<ಐತಿಹಾಸಿಕ ಕೇಂದ್ರವಿರುವ ಬಡಗನ್ನೂರಲ್ಲಿ ಸ್ವಚ್ಛತೆಗೆ ಸಿಕ್ಕಿಲ್ಲ ಆದ್ಯತೆ *ಸರ್ಕಾರಿ ಸ್ಥಳ ಅಲಭ್ಯ ಸಮಸ್ಯೆ>>

ವಿಜಯವಾಣಿ ಸುದ್ದಿಜಾಲ ಪುತ್ತೂರು
ಐತಿಹಾಸಿಕವಾಗಿ ಕೋಟಿ ಚೆನ್ನಯರ ನೆಲೆಬೀಡು ಎಂದೇ ಖ್ಯಾತಿ ಪಡೆದ ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮ ವ್ಯಾಪ್ತಿಯ ಬಡಗನ್ನೂರು ಗ್ರಾಮ ಪಂಚಾಯಿತಿಗೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಆದರೆ ಈ ಗ್ರಾಮದಲ್ಲಿ ಇಂದೇ ಒಂದು ಸಾರ್ವಜನಿಕ ಶೌಚಗೃವಿಲ್ಲ.! ಇದಕ್ಕೆ ಕಾರಣ ಇಲ್ಲಿ ಶೌಚಗೃಹ ನಿರ್ಮಿಸಲು ಸರ್ಕಾರಿ ಜಾಗವೇ ಇಲ್ಲವಂತೆ..!
ಪ್ರತಿ ಗ್ರಾಮದ ಪೇಟೆ ಪ್ರದೇಶ, ಐತಿಹಾಸಿಕ ಪ್ರದೇಶಗಳಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಲೇ ಬೇಕು ಎಂಬ ಕಡ್ಡಾಯ ಸೂಚನೆ ಸರ್ಕಾರದಿಂದ ಇದೆ. ಐತಿಹಾಸಿಕ ಹಿನ್ನೆಲೆಯುಳ್ಳ ಬಡಗನ್ನೂರು ಗ್ರಾಮದ ಪ್ರಮುಖ ಪೇಟೆಗಳಲ್ಲಿ ಸಾರ್ವಜನಿಕ ಶೌಚಗೃಹ ಇಲ್ಲದೇ ಇರುವುದು ಅಚ್ಚರಿಗೆ ಕಾರಣ. ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದರೂ ಗ್ರಾ.ಪಂ. ಆಡಳಿತ ಶೌಚಗೃಹ ನಿರ್ಮಿಸಲು ಮುಂದಾಗಿಲ್ಲ.

ರಾಜ್ಯ ಸರಕಾರ ಪ್ರತೀ ವರ್ಷ ಗ್ರಾ.ಪಂ.ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ನೀಡುತ್ತಿದೆ. ಪ್ರಶಸ್ತಿ ಜೊತೆಗೆ ಸ್ವಚ್ಛ ಗ್ರಾಮಕ್ಕಾಗಿ ಅನುದಾನ ನೀಡುತ್ತಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹವೇ ಇಲ್ಲದಿದ್ದರೆ ನಿರ್ಮಲ ಗ್ರಾಮವಾಗಲು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ.

ಸರ್ಕಾರಿ ಜಾಗ ಇಲ್ಲ!: ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮದಲ್ಲಿ ಸಾರ್ವಜನಿಕ ಶೌಚಗೃಹ ನಿರ್ಮಾಣ ಮಾಡಲು ಸರ್ಕಾರಿ ಭೂಮಿ ಇಲ್ಲ ಎಂದು ಗ್ರಾಮ ಪಂಚಾಯಿತಿ ಸಬೂಬು ನೀಡಿದೆ. ಗ್ರಾಮದ ಕೆಲವೊಂದು ಆಯಕಟ್ಟಿನ ಸ್ಥಳಗಳಲ್ಲಿ ಸರ್ಕಾರಿ ಜಾಗದ ಕೊರತೆ ಇದೆ. ಸುಳ್ಯಪದವು, ಬಡಗನ್ನೂರು ಪ್ರಮುಖ ಸ್ಥಳವಾಗಿದ್ದು, ಅಲ್ಲಿ ರಸ್ತೆ ಬದಿಯಲ್ಲಿ ಸರ್ಕಾರಿ ಜಾಗದ ಕೊರತೆ ಇದೆ. ಈ ಕಾರಣಕ್ಕೆ ನಿರ್ಮಾಣ ಮಾಡಿಲ್ಲ ಎಂದು ಗ್ರಾಪಂ ಮಾಹಿತಿ ನೀಡಿದೆ. ಶೌಚಗೃಹ ನಿರ್ಮಾಣ ಮಾಡಬೇಕೆಂಬ ಬೇಡಿಕೆ ಈ ಹಿಂದೆಯೇ ಗ್ರಾಮಸ್ಥರಿಂದ ಬಂದಿದೆ. ಇದಕ್ಕೆ ಅನುದಾನ ಸರ್ಕಾರ ನೀಡುತ್ತದೆ. ಆದರೆ ಜಾಗದ ಕೊರತೆ ಇರುವುದರಿಂದ ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ ಗ್ರಾ.ಪಂ. ಅಕಾರಿಗಳು.

ಪ್ರವಾಸಿಗರಿಗೆ ಸಮಸ್ಯೆ: ಪಡುಮಲೆ ಕೋಟಿ ಚೆನ್ನಯರ ಹುಟ್ಟೂರಾದ ಕಾರಣ ಈ ಗ್ರಾಮದಲ್ಲಿ ಕೆಲವೊಂದು ಐತಿಹಾಸಿಕ ಕೇಂದ್ರಗಳಿವೆ. ಇಲ್ಲಿ ವರ್ಷದ ವಿವಿಧ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತದೆ. ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗುತ್ತಿದ್ದಾರೆ. ಉಳಿದ ದಿನಗಳಲ್ಲಿಯೂ ಪ್ರವಾಸಿಗಳು ಭೇಟಿ ನೀಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಗಾಗಿ ಶೌಚಗೃಹ ತುರ್ತು ಅಗತ್ಯ ಇಲ್ಲಿದೆ. ತುರ್ತು ಸಂದರ್ಭದಲ್ಲಿ ಶೌಚಕ್ಕೆ ತೆರಳಬೇಕಾದರೆ ಬಯಲಿಗೆ ತೆರಳಬೇಕಾಗಿದೆ.

ಬಡಗನ್ನೂರು ಮತ್ತು ಪಡುವನ್ನೂರು ಗ್ರಾಮದ ಪ್ರಮುಖ ಕೇಂದ್ರಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ನಿರ್ಣಯ ಕೈಗೊಳ್ಳಲಾಗಿದೆ, ಆದರೆ ಸರ್ಕಾರಿ ಜಾಗದ ಕೊರತೆ ಇರುವುದರಿಂದ ನಿರ್ಮಾಣ ಸಾಧ್ಯವಾಗಿಲ್ಲ. ಈ ವಿಚಾರವನ್ನು ನಾವು ಕಂದಾಯ ಇಲಾಖೆಯ ಗಮನಕ್ಕೂ ತಂದಿದ್ದೇವೆ.
ಕೇರ್ಶವ ಗೌಡ ಕನ್ನಯ, ಅಧ್ಯಕ್ಷರು, ಬಡಗನ್ನೂರು ಗ್ರಾ.ಪಂ.

ಶೌಚಾಲಯಕ್ಕೆ ಸೂಕ್ತ ಜಾಗ ದೊರಕಿದ ಬೆನ್ನಲ್ಲೇ ಶೌಚಗೃಹದ ಕೆಲಸ ಆರಂಭಿಸಲಿದ್ದೇವೆ. ಗ್ರಾ.ಪಂ. ಬೇಡಿಕೆಯನ್ನು ಇಲಾಖೆಗೆ ಸಲ್ಲಿಸಿದೆ. ಮುಂದಿನ ದಿನಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು.
ವಾಸಿಂ ಗಂಧದ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ