ಪಡುಬಿದ್ರಿ-ಕಲ್ಲಟ್ಟೆ ರಸ್ತೆ ನಿರ್ಮಾಣಕ್ಕೆ ಮುಹೂರ್ತ

ಹೇಮನಾಥ್ ಪಡುಬಿದ್ರಿ
ನೂರಾರು ಜನರಿಗೆ ಅನುಕೂಲ ಕಲ್ಪಿಸಲಿರುವ ಪಡುಬಿದ್ರಿ ಪೇಟೆಯಿಂದ ಕಲ್ಲಟ್ಟೆ ಮೂಲಕ ಕಡಲ ತೀರಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ ಪ್ರಯತ್ನಗಳು ಸಾಗಿವೆ.

ಹಲವಾರು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಈ ಪ್ರದೇಶದಲ್ಲಿ ಸುಮಾರು 50 ಮನೆಗಳಿದ್ದು, ಅವರೆಲ್ಲ ಸುಮಾರು 70 ವರ್ಷಗಳ ಹಿಂದೆ ಕಾಮಿನಿ ಹೊಳೆಗೆ ಅಡ್ಡಲಾಗಿ ನಿರ್ಮಿಸಿದ ಬಂಡೆಕಲ್ಲಿನ ಕಾಲುಸಂಕ ಮೂಲಕ ಹಾದು ಗದ್ದೆ ಬದುವಿನ ದಾರಿಯಲ್ಲಿ ಸಂಚರಿಸುವ ಅನಿವಾರ್ಯತೆ ಇತ್ತು. 750 ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕಾಗಿ ಈಗ ಖಾಸಗಿಯವರು ಕೃಷಿ ಭೂಮಿಯನ್ನು ನೀಡಿ ಸಹಕರಿಸಿದ್ದಾರೆ. ಜಿಪಂ ಹಾಗೂ ಗ್ರಾಪಂ ಅನುದಾನ ಬಳಸಿ ಮಣ್ಣು ತುಂಬಿಸಿ ಸೇತುವೆ ಇಕ್ಕೆಲಗಳಲ್ಲಿ ಕಚ್ಚಾ ರಸ್ತೆ ನಿರ್ಮಾಣ ಮಾಡಲಾಗಿದೆ.

ಸುಮಾರು ನೂರಾರು ವರ್ಷಗಳ ಹಿಂದೆ ಕಾಮಿನಿ ಹೊಳೆಗೆ ಈ ಭಾಗದ ಗ್ರಾಮಸ್ಥರು ಕೃಷಿ ನೀರಿಗಾಗಿ ನಿರ್ಮಿಸಿದ್ದ ಕಟ್ಟ (ಒಡ್ಡು) ಕಡಿದು ಹೋಗದಂತೆ ಗಣಪತಿಗೆ ಹೊತ್ತ ಹರಕೆ ಅಪ್ಪ ಸೇವೆ. ಇದು ಕಾಲಕ್ರಮೇಣ ಕಟ್ಟದಪ್ಪ ಸೇವೆಯಾಗಿ ರೂಪುಗೊಂಡ ಇತಿಹಾಸವನ್ನೂ ಪ್ರದೇಶ ಹೊಂದಿದೆ.

ಶಿಥಿಲಾವಸ್ಥೆಯಲ್ಲಿ ಅಣೆಕಟ್ಟು: ಕೃಷಿಯೇ ಜೀವನಾಧಾರವಾಗಿದ್ದ ಈ ಪ್ರದೇಶದ ಜನರ ಅನುಕೂಲಕ್ಕಾಗಿ ಬಂಡೆಕಲ್ಲಿನ ಕಾಲುಸಂಕದ ಬಳಿಯಲ್ಲಿಯೇ ಹದಿನೈದು ವರ್ಷಗಳ ಹಿಂದೆ ಉಪ್ಪು ನೀರಿನ ತಡೆ ಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಅದು ಕೂಡ ಶಿಥಿಲವಾಗಿದ್ದು ತಡೆಬೇಲಿಯೂ ಕಿತ್ತು ಹೋಗಿದೆ. ಕಚ್ಚಾ ರಸ್ತೆ ನಿರ್ಮಾಣದಿಂದ ಈ ಭಾಗದ ನಾಗರಿಕರು ನಾದುರಸ್ತಿಯಲ್ಲಿರುವ ಈ ಕಿಂಡಿ ಅಣೆಕಟ್ಟೆ ಮೆಲೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾರೆ. ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಕರಾವಳಿ ಪ್ರವಾಸೋದ್ಯಮ, ಪರಿಸರದ ದೈವ-ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿರುವ ಈ ರಸ್ತೆ ಶೀಘ್ರ ನಿರ್ಮಾಣವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಸೆ.

ಆರೇಳು ಮಂದಿ ಖಾಸಗಿಯವರು ರಸ್ತೆ ನಿರ್ಮಾಣಕ್ಕಾಗಿ ಕೃಷಿ ಭೂಮಿಯನ್ನು ನೀಡಿ ಸಹಕರಿಸಿದ್ದಾರೆ. ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಸೇತುವೆ ನಿರ್ಮಾಣ ಮಾಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೀಘ್ರದಲ್ಲಿ ಇಂಜಿನಿಯರ್ ಸ್ಥಳಕ್ಕೆ ಭೇಟಿ ನೀಡಿ ಅಂದಾಜು ಪಟ್ಟಿ ತಯಾರಿಸಲಿದ್ದಾರೆ. ಸೇತುವೆ ನಿರ್ಮಾಣ ಬಗ್ಗೆ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಯೋಜನೆ ಕೈಗೆತ್ತಿಕೊಳ್ಳುವಂತೆ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಕಚ್ಚಾ ರಸ್ತೆ ನಿರ್ಮಾಣಕ್ಕಾಗಿ ಸುಮಾರು 4 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಮಳೆ ನೀರಿನ ಸರಾಗ ಹರಿಯುವಿಕೆಗಾಗಿ ತೂಬು ನಿರ್ಮಾಣ ಹಾಗೂ ಕಡಲತೀರ ಸಂಧಿಸುವ ಭಾಗದಲ್ಲಿ ಪಿಚ್ಚಿಂಗ್ ಮಾಡಲಾಗುತ್ತದೆ.
– ಶಶಿಕಾಂತ ಪಡುಬಿದ್ರಿ, ಜಿಪಂ ಸದಸ್ಯ.

Leave a Reply

Your email address will not be published. Required fields are marked *