ಪಡುಬಿದ್ರಿ ಬೀಚ್ ಮೂಲಸೌಕರ್ಯ: ಸಚಿವ ಸಾ.ರಾ.ಮಹೇಶ್

ಪಡುಬಿದ್ರಿ: ಬ್ಲೂ ಫ್ಲ್ಯಾಗ್ ಬೀಚ್ ಅರ್ಹತೆ ಹೊಂದಲಿರುವ ಪಡುಬಿದ್ರಿ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆ ಸಹಕರಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದರು.

ಖಾಸಗಿ ಕಾರ್ಯಕ್ರಮ ನಿಮಿತ್ತ ಸೋಮವಾರ ಪಡುಬಿದ್ರಿ ಎಂಡ್ ಪಾಯಿಂಟ್‌ಗೆ ಆಗಮಿಸಿದ ಸಂದರ್ಭ ಬ್ಲೂಫ್ಲ್ಯಾಗ್ ಬೀಚ್ ಅಭಿವೃದ್ಧಿಗಾಗಿ ಗುರುತಿಸಲಾದ ಪ್ರದೇಶಕ್ಕೆ ಭೇಟಿ ನೀಡಿ, ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳೊಂದಿಗೆ ಚರ್ಚಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಪ್ರದೇಶಕ್ಕೆ ಆಗಮಿಸಲು ಸಂಪರ್ಕ ರಸ್ತೆ ಸೌಕರ್ಯ ಅಗತ್ಯ ಎಂಬುದನ್ನು ಮನಗಂಡಿದ್ದೇನೆ. ಪ್ರವಾಸೋದ್ಯಮ ಇಲಾಖೆಯಿಂದ ಈಗಾಗಲೇ ಈ ಪ್ರದೇಶದ ಅಭಿವೃದ್ಧಿಗಾಗಿ 2.68 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಕಾಮಗಾರಿ ಶೀಘ್ರ ಆರಂಭಗೊಳ್ಳಲಿವೆ. ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆಯೂ ಕೆಆರ್‌ಐಡಿಎಲ್ ಅಧಿಕಾರಿಗೆ ಸೂಚಿಸಲಾಗಿದೆ. ಬೀಚ್‌ಗೆ ಆಗಮಿಸುವ ರಸ್ತೆ ವಿಸ್ತರಣೆ, ಕಿರು ಸೇತುವೆ ರಚನೆಗೆ ಇಲಾಖೆ ಒತ್ತು ನೀಡಲಿದೆ. ಜ.24, 25ರಂದು ದ.ಕ., ಉಡುಪಿ ಜಿಲ್ಲೆಗಳ ಭೇಟಿ ಮಾಡಲಿದ್ದು, ರಸ್ತೆ ಅಭಿವೃದ್ಧಿಗೂ ಇಲಾಖಾ ಅನುದಾನ ಘೋಷಿಸುವುದಾಗಿ ಹೇಳಿದರು.

ಸ್ಟಾರ್ ಹೋಟೆಲ್ ಅಭಿವೃದ್ಧಿಗೆ ಭರವಸೆ: ಕರಾವಳಿ ಜಿಲ್ಲೆಗಳಲ್ಲಿ ಸ್ಟಾರ್ ಹೋಟೆಲ್‌ಗಳಿಗೆ ಬರವಿದೆ. ಹಾಗಾಗಿ ಪ್ರವಾಸೋದ್ಯಮ ಇಲಾಖೆ ಅಥವಾ ಕೆಎಸ್‌ಟಿಡಿಸಿ ಮೂಲಕವಾಗಿ 10-15 ಕೋಟಿ ರೂ. ಮೀಸಲಿರಿಸಿ, ಬ್ಲೂ ಫ್ಲ್ಯಾಗ್ ಬೀಚ್‌ನ ಈ ಪ್ರದೇಶವನ್ನು ದೃಷ್ಟಿಯಲ್ಲಿರಿಸಿ ಸ್ಟಾರ್ ಹೋಟೆಲ್‌ಗಳ ನಿರ್ಮಾಣಕ್ಕಾಗಿ ಇಲಾಖೆ ಗಮನಹರಿಸಲಿದೆ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್, ಕೆಆರ್‌ಐಡಿಎಲ್‌ನ ಕೃಷ್ಣ ಹೆಬ್ಸೂರ್, ಪ್ರಮುಖರಾದ ಮನೋಹರ್ ಕೆ. ಶೆಟ್ಟಿ, ಉಡುಪಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.