More

  ಎಲೆಮರೆ ಸಾಧಕರ ಕೊರಳಿಗೆ ಪದ್ಮ ಪುರಸ್ಕಾರದ ಮಾಲೆ

  ಪ್ರಚಾರ, ಹಣ ಸಹಿತ ಯಾವುದೇ ಪ್ರತಿಫಲ ಬಯಸದೇ ತಮ್ಮ ಪಾಡಿಗೆ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ದೇಶದ ಬೇರೆ ಬೇರೆ ಭಾಗಗಳ ಅನೇಕ ‘ಮೌನ ಸಾಧಕ’ರಿಗೆ ಈ ಬಾರಿ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದೂ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಪರಿಸರ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಕೆಲ ಸಾಧಕರ ಕಿರುನೋಟ ಇಲ್ಲಿದೆ.

  ಅಬ್ದುಲ್ ಜಬ್ಬಾರ್ (ಮರಣೋತ್ತರ)

  1983ರ ಭೋಪಾಲ್ ಅನಿಲ ದುರಂತ ಸಂತ್ರಸ್ತರಿಗೆ ನ್ಯಾಯ ಹಾಗೂ ಪರಿಹಾರ ಒದಗಿಸಲು ಇವರು ಸ್ವಯಂಸೇವಾ ಸಂಸ್ಥೆ ನಡೆಸಿದ್ದರು. ದುರಂತದಲ್ಲಿ ಪತಿಯಂದಿರನ್ನು ಕಳೆದುಕೊಂಡು ಜೀವನೋಪಾಯಕ್ಕೆ ದಿಕ್ಕು ಕಾಣದ ಸುಮಾರು 2300 ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ಒದಗಿಸಿದ್ದು ಇವರ ಸಾಧನೆ. ಸಂತ್ರಸ್ತರ ವೈದ್ಯಕೀಯ ಪುನರ್ವಸತಿಗಾಗಿ ಕೋರ್ಟ್​ಗಳಲ್ಲಿ ಹೋರಾಡಿದ್ದರು.

  ಊಟ ಕೊಡುವ ‘ಲಂಗಾರ್ ಬಾಬಾ’

  ಪಂಜಾಬ್​ನ ‘ಲಂಗಾರ್ ಬಾಬಾ’ನ ಕಥೆ ರೋಮಾಂಚಕ. ಜಗದೀಶ್ ಲಾಲ್ ಅಹುಜಾ ಹೆಸರಿನ ಈ ವ್ಯಕ್ತಿ ಪಿಜಿಐಎಂಇಆರ್ ಆಸ್ಪತ್ರೆಯ ಬಳಿ ಪ್ರತಿದಿನ ನೂರಾರು ಬಡ ರೋಗಿಗಳು ಹಾಗೂ ಅವರ ಸಹಾಯಕರಿಗೆ ಉಚಿತ ಊಟ ನೀಡುತ್ತಿದ್ದಾರೆ. ತಮ್ಮ ಈ ಸೇವಾ ಕಾರ್ಯಕ್ಕಾಗಿ ಅವರು ಸ್ವಂತ ಆಸ್ತಿಯನ್ನೆಲ್ಲ ಮಾರಿದ್ದಾರೆ. ತಾವು ಉದರ ಕ್ಯಾನ್ಸರ್​ನಿಂದ ಬಳಲುತ್ತಿದ್ದರೂ ಬಡವರ ‘ಉದರ ಪೋಷಣೆ’ ಮಾಡುವ ಲಂಗಾರ್ ಬಾಬಾ ಕಾರ್ಯ ಪ್ರೇರಣಾದಾಯಕ. ದೇಶ ವಿಭಜನೆ ವೇಳೆ ಅವರು ಭಾರತಕ್ಕೆ ಬಂದಿದ್ದರು.

  ಜಾವೇದ್ ಅಹಮದ್

  ಜಮ್ಮು- ಕಾಶ್ಮೀರದ ಅಂಗವಿಕಲ ವ್ಯಕ್ತಿ ಜಾವೇದ್ ಅಹಮದ್, ಅಂಗವಿಕಲ ಮಕ್ಕಳ ಉನ್ನತಿಗಾಗಿ ಎರಡು ದಶಕಗಳಿಂದ ಶ್ರಮಿಸುತ್ತಿದ್ದಾರೆ. 1997ರಲ್ಲಿ ಭಯೋತ್ಪಾದಕರ ದಾಳಿಯಿಂದ ಬೆನ್ನುಹುರಿ ಘಾಸಿಗೊಂಡಿದ್ದರಿಂದ ವೀಲ್​ಚೇರ್​ಗೆ ಸೀಮಿತಗೊಂಡಿರುವ ಅವರು, ಇದರಿಂದ ಧೃತಿಗೆಟ್ಟಿಲ್ಲ. ತನ್ನಂಥ ಅಂಗವಿಕಲಾಗಿರುವವರ ಜೀವನ ಉತ್ತಮಪಡಿಸಲು ದುಡಿಯುತ್ತಿದ್ದಾರೆ.

  ಅಂಕಲ್ ಮೂಸಾ

  ‘ಅಂಕಲ್ ಮೂಸಾ’ ಎಂದೇ ಖ್ಯಾತರಾದ ಕೇರಳ ಮೂಲದ ಸತ್ಯನಾರಾಯಣ ಮುಂಡಯೂರು, ಅರುಣಾಚಲ ಪ್ರದೇಶದಲ್ಲಿ ಸಾಮಾಜಿಕ ಕಾರ್ಯದಿಂದ ಜನಪ್ರಿಯರು. ಶಿಕ್ಷಣ ಮತ್ತು ಓದುವ ಹವ್ಯಾಸ ಪಸರಿಸಲು ಶ್ರಮಿಸಿದವರು. ಮನೆ ಮನೆ ಗ್ರಂಥಾಲಯ ಚಳವಳಿ ಮೂಲಕ ಅವರು ಓದುವ ಸಂಸ್ಕೃತಿಗೆ ಹೊಸ ಭಾಷ್ಯ ಬರೆದಿದ್ದಾರೆ. ಸರ್ಕಾರಿ ಹುದ್ದೆ ತೊರೆದು ಅರುಣಾಚಲ ಪ್ರದೇಶದಲ್ಲಿ ಅವರು ನೆಲೆ ನಿಂತಿದ್ದಾರೆ.

  ಭಜನೆ ಸಂಪ್ರದಾಯದ ಮುನ್ನಾ ಮಾಸ್ಟರ್

  ರಾಜಸ್ಥಾನದ ಬಗಡು ಗ್ರಾಮದ ಮುಸ್ಲಿಂ ಕುಟುಂಬವೊಂದು ರಾಮ-ಕೃಷ್ಣ ಭಜನೆಗಳನ್ನು ಹಾಡುವ ಪರಂಪರೆಗೆ ಪ್ರಖ್ಯಾತ. ಆ ಪರಂಪರೆ ಮುಂದುವರಿಸಿರುವ ಮುನ್ನಾ ಮಾಸ್ಟರ್, ಕೋಮು ಸೌಹಾರ್ದದ ಜೀವಂತಿಕೆಗೆ ಇನ್ನೊಂದು ದೃಷ್ಟಾಂತ. ಇವರು ಬರೆದ ‘ಶ್ರೀ ಶ್ಯಾಮ ಸುರಭಿ ವಂದನಾ’ ಕೃತಿ ತುಂಬಾ ಜನಪ್ರಿಯ.

  ಅಂತ್ಯಸಂಸ್ಕಾರದ ಚಾಚಾ

  ಉತ್ತರ ಪ್ರದೇಶದ ಮಹಮದ್ ‘ಚಾಚಾ’ ಷರೀಫ್, ದಿಕ್ಕಿಲ್ಲದ ಶವಗಳ ಸಂಸ್ಕಾರಕ್ಕೆ ಪ್ರಸಿದ್ಧರು. ಕಳೆದ 25 ವರ್ಷಗಳಿಂದ ಫೈಜಾಬಾದ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಜಾತಿ, ಧರ್ಮಗಳ ಭೇದವಿಲ್ಲದೇ ಅನಾಥ ಶವಗಳಿಗೆ ಅಂತ್ಯಸಂಸ್ಕಾರದ ಭಾಗ್ಯ ಕರುಣಿಸಿದ್ದಾರೆ. ವಾರಸುದಾರರಿಲ್ಲದ ಸುಮಾರು 25,000 ಶವಗಳ ಅಂತ್ಯಸಂಸ್ಕಾರ ನಡೆಸಿರುವ ಷರೀಫ್, ಕೋಮುಸೌಹಾರ್ದದ ಒಂದು ಜೀವಂತ ಸಂಕೇತ. ಚಾಚಾ ಒಬ್ಬ ಸೈಕಲ್ ಮೆಕ್ಯಾನಿಕ್.

  ನಡೆದುಹೋಗಿಯೇ ಚಿಕಿತ್ಸೆ

  ಪಶ್ಚಿಮ ಬಂಗಾಳದ ಸುಂದರಬನದ ಒಳನಾಡು ಪ್ರದೇಶಗಳಲ್ಲಿ ವೈದ್ಯಕೀಯ ಸೌಲಭ್ಯ ಮರೀಚಿಕೆ. ಪ್ರತಿದಿನ ಆರು ಗಂಟೆ ಕಾಲ ನಡೆದುಕೊಂಡೇ ಹೋಗಿ ಅಲ್ಲಿನ ಜನರಿಗೆ ಚಿಕಿತ್ಸೆ ನೀಡುವ ಡಾ. ಅರುಣೋದಯ ಮಂಡಲ್, ಬಡಜನರ ಬಾಳಿನಲ್ಲಿ ಆರೋಗ್ಯದ ಆಶಾಕಿರಣ ಮೂಡಿಸುತ್ತಿದ್ದಾರೆ. ಅವರು ಇದುವರೆಗೆ ಫಲಾಪೇಕ್ಷೆ ಇಲ್ಲದೆ 4,000ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಿದ್ದಾರೆ.

  ತಂದೆ-ಮಗಳ ಭಲೇ ಜೋಡಿ

  ಒಡಿಶಾದ ಗಾಂಧಿವಾದಿ ರಾಧಾ ಮೋಹನ್ ಮತ್ತು ಅವರ ಪುತ್ರಿ ಸಾಬರಮತಿ ಸಾವಯವ ಕೃಷಿ ಕ್ಷೇತ್ರದಲ್ಲಿ ಅಪರೂಪದ ಪ್ರಯೋಗಗಳನ್ನು ಮಾಡಿದ್ದಾರೆ. ದೇಶದ ವಿವಿಧ ಭಾಗಗಳಿಗೆ ತೆರಳಿ ಸಾವಯವ ಕೃಷಿಯ ಅನುಭವ ಪಡೆಯುತ್ತಾರೆ. ವಿವಿಧ ತಳಿಗಳ ಬೀಜ ಸಂರಕ್ಷಣೆಗೆ ವಿಶೇಷವಾಗಿ ಪರಿಶ್ರಮಿಸುತ್ತಾರೆ. ನಯಾಗಢ ಜಿಲ್ಲೆಯ 36 ಎಕರೆ ಬೀಳು ಭೂಮಿಯನ್ನು ಮಣ್ಣು ಹಾಗೂ ಜಲಸಂರಕ್ಷಣೆ ತಂತ್ರಜ್ಞಾನದ ಮೂಲಕ ಆಹಾರ ಅರಣ್ಯವನ್ನಾಗಿ ಪರಿವರ್ತಿಸಿದ್ದಾರೆ.

  ಮಲ ಹೊರುವ ಪದ್ಧತಿ ವಿರುದ್ಧ ಹೋರಾಟ

  ಏಳು ವರ್ಷ ಪ್ರಾಯದವರಿದ್ದಾಗಲೇ ಮಲದ ಗುಂಡಿಯನ್ನು ಕೈಯಿಂದ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿದ್ದ ರಾಜಸ್ಥಾನದ ದಲಿತ ಮಹಿಳೆ ಉಷಾ ಚೌಮಾರ್, ಆ ಹೇಯ ಪದ್ಧತಿ ನಿಮೂಲನೆಗಾಗಿ ಟೊಂಕಕಟ್ಟಿ ಹೋರಾಟ ನಡೆಸಿದ್ದು ರೋಚಕ ಕಥನ. ಸುಲಭ್ ಇಂಟರ್​ನ್ಯಾಷನಲ್​ನ ‘ನಯೀ ದಿಶಾ’ ಎಂಬ ಸರ್ಕಾರೇತರ ಸಂಸ್ಥೆ ಉಷಾರನ್ನು ರಕ್ಷಿಸಿತ್ತು. ಅವರೀಗ ಸುಲಭ್ ಇಂಟರ್​ನ್ಯಾಷನಲ್ ಸಾಮಾಜಿಕ ಸೇವಾ ಸಂಸ್ಥೆಯ ಮುಖ್ಯಸ್ಥೆ. ದೈಹಿಕವಾಗಿ ಮಲತೊಳೆಯುವ ಅಮಾನವೀಯ ಪದ್ಧತಿ ವಿರುದ್ಧ ಹೋರಾಡುತ್ತಿದ್ದಾರೆ.

  70,000 ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ!

  ಕ್ಯಾನ್ಸರ್ ರೋಗ ತಜ್ಞ ಡಾ. ರವಿ ಕಣ್ಣನ್ ಅಸ್ಸಾಂನ ಬರಾಕ್ ಕಣಿವೆಯ 70,000ಕ್ಕೂ ಹೆಚ್ಚು ಕ್ಯಾನ್ಸರ್ ರೋಗಿ ಗಳಿಗೆ ಉಚಿತ ಚಿಕಿತ್ಸೆ ಮಾಡಿ ಅವರ ಜೀವನ ದಲ್ಲಿ ಹೊಸ ಬೆಳಕು ಮೂಡಿಸಿದ್ದಾರೆ.

  ಗಜರಕ್ಷಕ

  ಗುವಾಹಟಿಯ ಕೌಶಲ್ ಕೊನ್ವಾರ್ ಶರ್ಮಾ ಏಷ್ಯಾದ ಆನೆಗಳ ಸಂರಕ್ಷಣೆಗೆ ಜೀವನ ಸಮರ್ಪಿಸಿಕೊಂಡಿದ್ದಾರೆ. ಅವರು ಪ್ರತಿವರ್ಷ 700ಕ್ಕೂ ಹೆಚ್ಚು ಆನೆಗಳಿಗೆ ಚಿಕಿತ್ಸೆ ನೀಡುತ್ತಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts