ನವ ಕನ್ನಡಿಗರಿಗೆ ಪದ್ಮ ಪುರಸ್ಕಾರ

Padmashress Awardees

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ಪದ್ಮ ಪುರಸ್ಕಾರಗಳಿಗೆ ಪಾತ್ರರಾದ ಸಾಧಕರ ಪಟ್ಟಿಯನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ್ದು, ಈ ವರ್ಷ ವಿವಿಧ ಕ್ಷೇತ್ರಗಳ 9 ಕನ್ನಡಿಗರು ಗೌರವ ಪಡೆದಿದ್ದಾರೆ. ಸಂಗೀತ ಕ್ಷೇತ್ರದ ಸಾಧನೆಗಾಗಿ ಲಕ್ಷ್ಮೀನಾರಾಯಣ ಸುಬ್ರಹ್ಮಣ್ಯಂ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರೆ, ಸಿನಿಮಾ ಕ್ಷೇತ್ರದಲ್ಲಿನ ಕೊಡುಗೆಗೆ ಅನಂತನಾಗ್ ಹಾಗೂ ಶಿಕ್ಷಣ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಎ. ಸೂರ್ಯಪ್ರಕಾಶ್ ಪದ್ಮಭೂಷಣಕ್ಕೆ ಪಾತ್ರರಾಗಿದ್ದಾರೆ. ವಿವಿಧ ರಂಗಗಳ ಸಾಧಕರಾದ ಭೀಮವ್ವ ದೊಡ್ಡಪ್ಪ ಶಿಳ್ಳೆಕ್ಯಾತರ, ಹಾಸನ ರಘು, ಪ್ರಶಾಂತ ಪ್ರಕಾಶ್, ರಿಕ್ಕಿ ಕೇಜ್, ವೆಂಕಪ್ಪ ಅಂಬಾಜಿ ಸುಗತೇಕರ ಮತ್ತು ವಿಜಯಲಕ್ಷ್ಮೀ ದೇಶಮಾನೆ ಪದ್ಮಶ್ರೀ ಪುರಸ್ಕೃತರಾಗಿದ್ದಾರೆ.

ಡಾ. ಎಲ್.ಸುಬ್ರಹ್ಮಣ್ಯಂ
ಕ್ಷೇತ್ರ: ಕಲೆ (ಸಂಗೀತ)
ಖ್ಯಾತ ಪಿಟೀಲು ವಿದ್ವಾನ್ ಡಾ. ಲಕ್ಷಿ್ಮೕನಾರಾಯಣ ಸುಬ್ರಹ್ಮಣ್ಯಂ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಹೊಂದಿದಾರೆ. 1947ರ ಜು.27ರಂದು ಮದ್ರಾಸ್​ನಲ್ಲಿ ವಿ. ಲಕ್ಷ್ಮೀನಾರಾಯಣ ಅಯ್ಯರ್ ಮತ್ತು ಸೀತಾಲಕ್ಷ್ಮೀ ದಂಪತಿಗೆ ಜನಿಸಿದರು. ಸುಬ್ರಮಣ್ಯಂ ಚಿಕ್ಕ ವಯಸ್ಸಿನಿಂದಲೂ ಸಂಗೀತ ಮತ್ತು ವಿಜ್ಞಾನದ ಬಗ್ಗೆ ಹೆಚ್ಚು ಒಲವು ಹೊಂದಿದ್ದರು. ಮದ್ರಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡಿದ್ದರೂ ಸಂಗೀತ ಕ್ಷೇತ್ರದಲ್ಲೇ ಮುಂದುವರಿಯಲು ನಿರ್ಧರಿಸಿದರು. ಸುಬ್ರಹ್ಮಣ್ಯಂ ಅವರ ಪತ್ನಿ ಕವಿತಾ ಕೃಷ್ಣಮೂರ್ತಿ ಖ್ಯಾತ ಹಿನ್ನೆಲೆ ಗಾಯಕಿಯಾಗಿದ್ದಾರೆ. ಮದ್ರಾಸ್​ನ ರಾಜ್ಯಪಾಲರಿಂದ ಪಿಟೀಲು ವಾದನದ ಚಕ್ರವರ್ತಿ-ಪಿಟೀಲು ಸಾಮ್ರಾಟ ಎಂಬ ಬಿರುದು ಸ್ವೀಕರಿಸಿದ್ದಾರೆ. 1981ರಲ್ಲಿ ಅವರು ಗ್ರಾ್ಯಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗುರುತಿಸಿ 2004ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯ, 2003ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಮತ್ತು 2008ರಲ್ಲಿ ಶೆಫ್ ಫೀಲ್ಡ್ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿವೆ.

ಅನಂತ್ ನಾಗ್
ಕ್ಷೇತ್ರ: ಕಲೆ (ಸಿನಿಮಾ)
ಮೂಲತಃ ಉತ್ತರ ಕನ್ನಡದ ಶಿರಾಲಿಯವರು. ಮುಂಬೈನಲ್ಲಿ ರಂಗಭೂಮಿಯ ಅನುಭವ ಪಡೆದು 1973ರಲ್ಲಿ ‘ಸಂಕಲ್ಪ’ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸುದೀರ್ಘ 52 ವರ್ಷಗಳ ಚಿತ್ರಜೀವನದಲ್ಲಿ 280ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮಿಂಚಿನ ಓಟ’ (1980), ‘ಹೊಸ ನೀರು’ (1986), ‘ಅವಸ್ಥೆ’ (1987), ‘ಗಂಗವ್ವ ಗಂಗಾಮಾಯಿ’ (1994) ಚಿತ್ರಗಳಲ್ಲಿ ಅವರ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯಪ್ರಶಸ್ತಿ ಸಂದಿವೆ. ಸಹೋದರ ಶಂಕರ್ ನಾಗ್ ನಿರ್ದೇಶಿಸಿದ್ದ ‘ಮಾಲ್ಗುಡಿ ಡೇಸ್’ ಧಾರಾವಾಹಿಯಲ್ಲಿ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಒಂದು ಸಣ್ಣ ರಿಲೀಫ್ ಸಿಕ್ಕಿದೆ. ನಮ್ಮ ಪ್ರಧಾನಿಯವರು ಮೂರು ವರ್ಷಗಳ ಹಿಂದೆ, ಸಾರ್ವಜನಿಕರೇ ಪದ್ಮ ಪ್ರಶಸ್ತಿಗಳಿಗೆ ಸಾಧಕರ ಹೆಸರನ್ನು ಸೂಚಿಸುವಂತೆ ತಿಳಿಸಿದ್ದರು. ಆಗ ಕನ್ನಡಿಗರು, ಕನ್ನಡ ಚಿತ್ರರಂಗದವರು ಲಕ್ಷಾಂತರ ಜನ ನನ್ನ ಹೆಸರನ್ನು ಸೂಚಿಸಿದ್ದರು. ಆಗ ಬಂದಿರಲಿಲ್ಲ. ನಾನು ಅವಾರ್ಡ್​ಗಿಂತ ರಿವಾರ್ಡ್ ಗೋಸ್ಕರ ಚಿತ್ರರಂಗಕ್ಕೆ ಬಂದವನು. ಕನ್ನಡಿಗರು 50 ವರ್ಷಗಳಿಂದ ನನ್ನನ್ನು ಬೆಂಬಲಿಸುತ್ತಿದ್ದೀರಿ. ನಿಮ್ಮಿಂದ ನಾನಿದ್ದೇನೆ. ಎಲ್ಲರಿಗೂ ಋಣಿಯಾಗಿದ್ದೇನೆ.

ಸೂರ್ಯಪ್ರಕಾಶ್
ಕ್ಷೇತ್ರ: ಪತ್ರಿಕೋದ್ಯಮ
ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಡಾ. ಅರಕಲಗೂಡು ಸೂರ್ಯ ಪ್ರಕಾಶ್ ರಾಷ್ಟ್ರದ ಪ್ರಚಲಿತ ವಿದ್ಯಮಾನಗಳನ್ನು ಕುರಿತು ಆಳವಾದ ಚಿಂತನೆಗಳನ್ನು ಹೊಂದಿರುವ ಪತ್ರಕರ್ತ. ಟಿವಿ ಮತ್ತು ಮುದ್ರಣ ಮಾಧ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಅವರು ರಾಷ್ಟ್ರದ ಹಲವು ಪ್ರಮುಖ ಸುದ್ದಿ ಮಾಧ್ಯಮ ಸಂಸ್ಥೆಗಳ ಮುಂಚೂಣಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಸೋಷಿಯಾಲಜಿಯಲ್ಲಿ ಮಾಸ್ಟರ್ಸ್ ಪದವಿ ಗಳಿಸಿರುವ ಅವರು ತುಮಕೂರು ವಿವಿಯಿಂದ ಡಿ.ಲಿಟ್. ಪದವಿ ಹೊಂದಿದ್ದಾರೆ. ಸೂರ್ಯ ಪ್ರಕಾಶ್ ಅರಕಲಗೂಡು ಪಟ್ಟಣದವರಾಗಿದ್ದು, ದಶಕಗಳ ಹಿಂದೆಯೇ ಉದ್ಯೋಗದ ಸಲುವಾಗಿ ಕುಟುಂಬ ಪಟ್ಟಣವನ್ನು ತೊರೆದಿದೆ. ಆದರೆ ಹುಟ್ಟೂರಿನ ನೆನಪಿನಲ್ಲಿ ಸೂರ್ಯಪ್ರಕಾಶ್ ಪಟ್ಟಣಕ್ಕೆ ಆಗಾಗ ಭೇಟಿ ನೀಡುತ್ತಿ ರುತ್ತಾರೆ ಹಾಗೂ ಹುಟ್ಟೂರಿನ ನೆನಪಿಗಾಗಿ ಹೆಸರಿನ ಮುಂದೆ ಅರಕಲಗೂಡು ಹೆಸರನ್ನು ಇಟ್ಟುಕೊಂಡಿದ್ದಾರೆ.

ನನ್ನ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಈ ಪ್ರಶಸ್ತಿಯು ನನ್ನ ಜವಾಬ್ದಾರಿ ಹೆಚ್ಚಿಸಿದೆ.

ಹಾಸನ ರಘು
ಸಾಹಸ ಕಲೆಯ ಶಿಕ್ಷಕರಾಗಿ ಗುರುತಿಸಿಕೊಂಡಿರುವ ಹಾಸನ ರಘು ಅವರು ಕಳೆದ 20 ವರ್ಷಗಳಿಂದ ರಾಮನಗರದಲ್ಲಿ ನೆಲೆಸಿ ಸಾಹಸ ಕಲಾ ಕೇಂದ್ರವನ್ನು ಆರಂಭಿಸಿ ಸ್ಥಳೀಯ ಮತ್ತು ರಾಜ್ಯ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಸಾಹಸ ಕಲೆಗಳ ತರಬೇತಿ ನೀಡುತ್ತಾ ಬಂದಿದ್ದಾರೆ. ಶಂಕರ್ ನಾಗ್ ಅಭಿನಯದ ‘ಆಕ್ಸಿಡೆಂಟ್’ ಚಿತ್ರದ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ಹಾಸನ ರಘು ಅವರು, ರಾಜ್ಯದಲ್ಲಿ ಪ್ರಥಮ ಬಾರಿಗೆ ಸಾಹಸ ನಿರ್ದೇಶನಕ್ಕೆ ರಾಜ್ಯ ಪ್ರಶಸ್ತಿ ಪಡೆದ ಕಲಾವಿದ ಕೂಡ. ಹಲವಾರು ಸಿನಿಮಾಗಳಲ್ಲಿ ಹಿರಿಯ ಕಲಾವಿದರಿಗೆ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಗರಡಿಯಲ್ಲಿ ಸಾಕಷ್ಟು ಮಂದಿ ತರಬೇತಿ ಪಡೆದು ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದಾರೆ. ಕೇಂದ್ರದ ವಿವಿಧ ಸಮಿತಿಗಳಲ್ಲೂ ಕಾರ್ಯ ನಿರ್ವಹಿಸಿದ ಅನುಭವ ಹಾಸನ ರಘು ಅವರಿಗಿದೆ.

ಡಾ..ವಿಜಯಲಕ್ಷ್ಮೀ ದೇಶಮಾನೆ
ಮೂಲತಃ ಕಲಬುರಗಿಯವರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಕ್ಯಾನ್ಸರ್ ತಜ್ಞರಾಗಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಸ್ತನ ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರವರ್ತಕರಾಗಿರುವ ಇವರು ಕ್ಯಾನ್ಸರ್ ಆರೈಕೆ ಮತ್ತು ಸಮುದಾಯ ಜಾಗೃತಿಯಲ್ಲಿಯೂ ಕೊಡುಗೆ ನೀಡಿದ್ದಾರೆ. ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಬಡತನದಲ್ಲಿ ಬೆಳೆದರೂ ವೈದ್ಯಲೋಕದ ಸಾಧಕರಾಗಿ ಹೊರಹೊಮ್ಮಿದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ತಂದೆ ಬಾಬುರಾವ್ ದೇಶಮಾನೆ ಜವಳಿ ಗಿರಣಿ ಕೆಲಸಗಾರರಾಗಿದ್ದರು. ತಾಯಿ ರತ್ನಮ್ಮ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಬಾಲ್ಯದಲ್ಲಿ ತಾಯಿಗೆ ಮನೆ ಕೆಲಸದಲ್ಲಿ ನೆರವಾಗುತ್ತಲೇ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಸಾಧಿಸುತ್ತ ಬೆಳೆದ ವಿಜಯಲಕ್ಷ್ಮೀ ಛಲ ಕಂಡು, ತಾಯಿ ತಾಳಿ ಮಾರಿ ಶುಲ್ಕ ಕಟ್ಟಿದ್ದರು. 1980ರಲ್ಲಿ ಹುಬ್ಬಳ್ಳಿಯ ಕಿಮ್್ಸ ನಲ್ಲಿ ವೈದ್ಯಕೀಯ ಪದವಿ ಪಡೆದರು. 1985ರಲ್ಲಿ ಬಳ್ಳಾರಿಯ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1985ರಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ವೈದ್ಯರಾಗಿ ಸೇರ್ಪಡೆಗೊಂಡರು. ಸತತ ಮೂರು ದಶಕಗಳ ಕಾಲ ಕ್ಯಾನ್ಸರ್ ಪೀಡಿತರ ಸೇವೆ, ಸಾಲು ಸಾಲು ಯಶಸ್ವಿ ಶಸ್ತ್ರಚಿಕಿತ್ಸೆ, ಸಾವಿರಾರು ರೋಗಿಗಳಿಗೆ ಮರುಜನ್ಮ ನೀಡಿದ ಧನ್ಯತೆ ಇವರದು. ಪ್ರೌಢ ಪ್ರಬಂಧಗಳ ಮಂಡನೆ, ಸ್ತನ ಕ್ಯಾನ್ಸರ್ ಕುರಿತು ಗ್ರಾಮೀಣ ಭಾಗದಲ್ಲಿ ಜನ ಜಾಗೃತಿ ಅಭಿಯಾನ, ಸಂಶೋಧನಾತ್ಮಕ ಲೇಖನ ಹಾಗೂ ಪುಸ್ತಕಗಳ ಪ್ರಕಟಣೆ ಸಹ ಮಾಡಿದ್ದಾರೆ. ಇವರಿಗೆ ರಾಜ್ಯೋತ್ಸವ ಪ್ರಶಸ್ತಿ , ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಸೇರಿ ಹಲವಾರು ಪ್ರಶಸ್ತಿಗಳು ಸಂದಿವೆ. ಬಡ ಕ್ಯಾನ್ಸರ್ ಪೀಡಿತರಿಗೆ ಉಚಿತ ಚಿಕಿತ್ಸೆ ಮತ್ತು ಸಮಾಲೋಚನೆ ನೀಡುವುದಕ್ಕಾಗಿಯೇ ಜೀವನ ಮುಡಿಪಾಗಿಟ್ಟಿದ್ದಾರೆ.

ಭೀಮವ್ವ ಶಿಳ್ಳಿಕ್ಯಾತರ
ಅನಕ್ಷರಸ್ಥೆಯಾದರೂ ತೊಗಲುಗೊಂಬೆ ಆಟದ ಮೂಲಕ ದೇಶ-ವಿದೇಶಗಳಲ್ಲಿ ನಾಡಿನ ಸಾಂಸ್ಕೃತಿಕ ಹಿರಿಮೆ ಹೆಚ್ಚಿಸಿದ ಮೋರನಾಳದ ಭೀಮವ್ವ ಶಿಳ್ಳಿಕ್ಯಾತರ ಅವರಿಗೆ 96ರ ಇಳಿಸಂಜೆಯಲ್ಲಿ ಪದ್ಮಶ್ರೀ ಪ್ರಶಸ್ತಿ ಒಲಿದಿದೆ. ಭೀಮವ್ವ ಕುಟುಂಬ ವಂಶಪಾರಂಪರ್ಯವಾಗಿ ತೊಗಲುಗೊಂಬೆ ಕಲೆ ರೂಢಿಸಿಕೊಂಡು ಬಂದಿದೆ. ಇತ್ತೀಚೆಗೆ ಕಲೆ ಮರೆಯಾಗುತ್ತಿದ್ದರೂ ಕುಟುಂಬ ಸದಸ್ಯರು ಕಲಿತು ಪೋಷಿಸುತ್ತಿದ್ದಾರೆ. ಗೊಂಬೆ ಹಾಗೂ ನೆರಳು-ಬೆಳಕಿನ ಆಟದ ಮೂಲಕ ರಾಮಾಯಣ, ಮಹಾಭಾರತ, ಗರುಡ ಪುರಾಣ ಇತರೆ ಕಥಾನಕಗಳನ್ನು ಪ್ರದರ್ಶಿಸುತ್ತಿದ್ದಾರೆ. ಇವರ ಕಲಾ ಸೇವೆಗೆ ರಾಜ್ಯೋತ್ಸವ, ಜಾನಪದಶ್ರೀ ಸೇರಿ ಅನೇಕ ಗೌರವಗಳು ಮುಡಿಗೇರಿವೆ. 14ನೇ ವಯಸ್ಸಿಗೆ ಗೊಂಬೆಯಾಟ ಕಲಿತ ಭೀಮವ್ವ ಅಮೆರಿಕ, ಜಪಾನ್, ಜರ್ಮನಿ, ಇಟಲಿ, ಫ್ರಾನ್ಸ್, ಸೌದಿ ಅರೆಬಿಯಾ, ಐರ್ಲೆಂಡ್, ಸ್ವಿಜರ್ಲೆಂಡ್ ಸೇರಿ ಹಲವು ದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. 1992ರಲ್ಲಿ ಟೆಹ್ರನಾ ಇಂಟರ್​ನ್ಯಾಷನಲ್ ಪ್ರಶಸ್ತಿ, 1993ರಲ್ಲಿ ಇರಾನ್ ದೇಶ ಪ್ರಶಸ್ತಿ ನೀಡಿ ಗೌರವಿಸಿವೆ. ಇವರ ಮಗ ಕೇಶಪ್ಪ ಸಹ ತೊಗಲುಗೊಂಬೆ ಕಲಾವಿದರಾಗಿದ್ದು, ತಾಯಿಯೊಂದಿಗೆ ದೇಶವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರಿಗೂ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ರಿಕ್ಕಿ ಕೇಜ್
ಹುಟ್ಟಿದ್ದು ಅಮೆರಿಕದಲ್ಲಾದರೂ, ಬೆಂಗಳೂರಿನಲ್ಲಿ ಬೆಳೆದ ರಿಕ್ಕಿ ಕೇಜ್ ಕಳೆದ 25 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಕನ್ನಡದ ‘ಆಕ್ಸಿಡೆಂಟ್’ (2008), ‘ವೆಂಕಟ ಇನ್ ಸಂಕಟ’ (2009) ಹಾಗೂ ‘ಕ್ರೇಜಿ ಕುಟುಂಬ’ (2010) ಚಿತ್ರಗಳಿಗೆ ಸಂಗೀತ ನೀಡಿರುವ ಅವರು, ಹೆಚ್ಚು ಜನಪ್ರಿಯತೆ ಗಳಿಸಿದ್ದ ಅಂತಾರಾಷ್ಟ್ರೀಯ ಸಂಗೀತದಲ್ಲಿ. ಅವರ ‘ವಿಂಡ್ಸ್ ಆಫ್ ಸಂಸಾರ’ (2015), ‘ಡಿವೈನ್ ಟೈಡ್ಸ್ 1’ (2022) ಮತ್ತು ‘ಡಿವೈನ್ ಟೈಡ್ಸ್ 2’ (2023) ಮ್ಯೂಸಿಕ್ ಆಲ್ಬಂಗಳಿಗೆ ವಿಶ್ವ ಸಂಗೀತ ಲೋಕದ ಪ್ರತಿಷ್ಠಿತ ಗ್ರಾ್ಯಮಿ ಪ್ರಶಸ್ತಿಗಳು ದೊರೆತಿವೆ. 2024ನೇ ಸಾಲಿನಲ್ಲೂ ಅವರು ಸಂಗೀತ ನೀಡಿರುವ ‘ಬ್ರೇಕ್ ಆಫ್ ಡಾನ್’ ಆಲ್ಬಂ ಗ್ರಾ್ಯಮಿ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ. ಈ ಮೂರು ಅಲ್ಬಂಗಳ ಜತೆಗೆ ‘ಆರಂಭ್’, ‘ಶಿವ’, ‘ಅರ್ತ್ ಲವ್’, ‘ಶಾಂತಿ ಸಂಸಾರ’, ‘ಬಲಾಡ್ ಆಫ್ ಮಾಯಾ’ ಸೇರಿ 20ಕ್ಕೂ ಹೆಚ್ಚು ಮ್ಯೂಸಿಕ್ ಆಲ್ಬಂಗಳಿಗೆ ರಿಕ್ಕಿ ಕೇಜ್ ಸಂಗೀತ ನೀಡಿದ್ದಾರೆ. ಅವರ ಸಂಗೀತ ಸಾಧನೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ 30ಕ್ಕೂ ಹೆಚ್ಚು ಪ್ರಶಸ್ತಿಗಳು ದೊರೆತಿವೆ. ವಿಶ್ವಸಂಸ್ಥೆ, ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮಗಳು, ಕಾನ್ ಚಲನಚಿತ್ರೋತ್ಸವ, ಜಿ20 ಸಭೆ ಸೇರಿ ಹಲವು ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಸಂಗೀತ ಪ್ರದರ್ಶನ ನೀಡಿರುವ ಹೆಗ್ಗಳಿಕೆ 43 ವರ್ಷದ ರಿಕ್ಕಿ ಕೇಜ್​ಗೆ ಸಲ್ಲುತ್ತದೆ.

ಪ್ರಶಾಂತ್ ಪ್ರಕಾಶ್
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಪ್ರಶಾಂತ್ ಪ್ರಕಾಶ್ ವಾಣಿಜ್ಯೋದ್ಯಮಿ. ಸ್ಟಾರ್ಟಪ್ ಜಗತ್ತಿನಲ್ಲಿ ವಿಶೇಷ ಪ್ರಯೋಗಗಳ ಮೂಲಕ ದೊಡ್ಡಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಯುಎಸ್ ವೆಂಚರ್ ಕ್ಯಾಪಿಟಲ್ ಸಂಸ್ಥೆ ಆಕ್ಸೆಲ್​ನ ಭಾರತದ ಸ್ಥಾಪಕ ಪಾಲುದಾರರಾದ ಪ್ರಶಾಂತ್ ಪ್ರಕಾಶ್, 1990ರ ಮಧ್ಯಭಾಗದಿಂದ ಭಾರತದಲ್ಲಿ ಉದ್ಯಮಶೀಲತೆಯಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ. ಸ್ವದೇಶಿ, ಉನ್ನತ ಬೆಳವಣಿಗೆಯ ಉದ್ಯಮಗಳನ್ನು ಬೆಂಬಲಿಸಿದ್ದಾರೆ. 2004ರಲ್ಲಿ ಭಾರತೀಯ ತಂತ್ರಜ್ಞಾನದ ಸ್ಟಾರ್ಟಪ್​ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದ್ದು, 2021ರಲ್ಲಿ ಇವರನ್ನು ಕರ್ನಾಟಕ ಸರ್ಕಾರ ಸಿಎಂ ಸಲಹೆಗಾರರನ್ನಾಗಿ ನೇಮಿಸಿತ್ತು. ಉತ್ತಮ ನಗರ ನಿರ್ವಣದಲ್ಲಿ ಸಮಗ್ರ ದೃಷ್ಟಿಕೋನ ಹೊಂದಿದ್ದಾರೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನಲ್ಲಿ ದೀರ್ಘಾಯುಷ್ಯದ ಕುರಿತಾದ ಅತ್ಯಾಧುನಿಕ ಸಂಶೋಧನೆಗೆ ಪ್ರಶಾಂತ್ ಅವರ ಬೆಂಬಲ ಗಮನ ಸೆಳೆದಿತ್ತು. ಕಲ್ಕಿ ಫೌಂಡೇಶನ್, ಶಿಕ್ಷಣ ಫೌಂಡೇಶನ್, ಯುನೈಟೆಡ್ ವೇ ಆಫ್ ಬೆಂಗಳೂರು, ಅನ್​ಬಾಕ್ಸಿಂಗ್ ಬಿಎಲ್​ಆರ್ ಫೌಂಡೇಶನ್, ಕೖಷಿಕಲ್ಪ ಫೌಂಡೇಶನ್, ಎಸಿಟಿ ಗ್ರ್ಯಾಂಟ್ಸ್ ಸೇರಿ ಅನೇಕ ಲಾಭರಹಿತ ಸಂಸ್ಥೆಗಳ ಅಧ್ಯಕ್ಷ, ಸ್ಥಾಪಕ ಪಾಲುದಾರರೂ ಆಗಿದ್ದಾರೆ.

ವೆಂಕಪ್ಪ ಸುಗತೇಕರ
ಓದಲು- ಬರೆಯಲು ಬರಲ್ಲ. ಒಂದು ದಿನವೂ ಶಾಲೆ ಮೆಟ್ಟಿಲು ಹತ್ತಲಿಲ್ಲ. ಕುಟುಂಬದಿಂದ ಬಳುವಳಿಯಾಗಿ ಬಂದ ಗೊಂದಳಿ ಪದ ಕಲೆಯನ್ನೇ ನಂಬಿ ಜೀವನ ಸಾಗಿಸಿದರು. ಕಣ್ಮರೆಯಾಗುತ್ತಿರುವ ಗೊಂದಳಿ ಕಲೆಗೆ ಜೀವ ನೀಡಲು ಜೀವನವನ್ನೇ ಮುಡಿಪಾಗಿಟ್ಟರು. 80ರ ಇಳಿವಯಸ್ಸಿನಲ್ಲಿಯೂ ಕಾರ್ಯಕ್ರಮ ನೀಡುವುದು ನಿಲ್ಲಿಸಿಲ್ಲ. ಪುರಂದರದಾಸರ ಪದಗಳು ಮತ್ತು ಶಿಶುನಾಳ ಶರೀಫರ ಪದಗಳು, ದೇವಿ ಪದಗಳು, ಬಿಡ ಪದಗಳು, ಮಡಿವಾಳ ರಾಚಯ್ಯ, ಕನಕದಾಸರು, ತತ್ವ ಪದಗಳು, ಅಂಬಾ ಭವಾನಿ ಪದಗಳು ಹಾಗೂ ಯಲ್ಲಮ್ಮ ಪದಗಳನ್ನು ಹಾಡುತ್ತಾರೆ. ಬಾಗಲಕೋಟೆಯ ಕಂಚಿನ ಕಂಠದ ಕಲಾವಿದ ವೆಂಕಪ್ಪ ಅಂಬಾಜಿ ಸುಗತೇಕರ ನಂಬಿದ ಕಲೆಯನ್ನು ಬಿಟ್ಟು ಬೇರೆಡೆ ಕಣ್ಣಾಡಿಸಲಿಲ್ಲ. 1943 ಮೇ 5 ರಂದು ಜನಿಸಿದರು. ತಂದೆ ಅಂಬಾಜಿ, ತಾಯಿ ಯಲ್ಲಮ್ಮ ಬಡತನ ನಡುವೆಯೂ ಗೊಂದಳಿ ಪದಗಳನ್ನು ಹಾಡುತ್ತಾ ಬದುಕಿದವರು. ಚಿಕ್ಕಂದಿನಿಂದಲು ಅದನ್ನು ನೋಡಿ ಬೆಳೆದ ವೆಂಕಪ್ಪ ಶಾಲೆಗೆ ಹೋಗಲಿಲ್ಲ. ಆದರೆ ತಾಯಿ ಶಾರದೆ ಕೈಬಿಡಲಿಲ್ಲ. ಅವರ ನಾಲಿಗೆ ಮೇಲೆ ನಲಿಯುವ ಪದಗಳ ನರ್ತನ ಕೇಳುವುದಕ್ಕೆ ಚಂದ. ಕುಟುಂಬದ ಕಲೆಯನ್ನು ಮುಂದುವರಿಸಿಕೊಂಡು ಹೋದರು. ಪತ್ನಿ ದುರ್ಗಾಬಾಯಿ ಹಾಗೂ ಮಕ್ಕಳು ಬೆನ್ನಲುಬಾಗಿ ನಿಂತರು. ಆಕಾಶವಾಣಿಯಲ್ಲಿ 52, ದೂರದರ್ಶನದಲ್ಲಿ 18 ಬಾರಿ ಕಾರ್ಯಕ್ರಮ ನೀಡಿದ್ದಾರೆ. ಬೆಳಗಾವಿಯ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ, ಮೈಸೂರು ದಸರಾ, ಹಂಪಿ, ಆನೆಗೊಂದಿ ಉತ್ಸವ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ನೀಡಿ ಜನಪ್ರಿಯರಾಗಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಅಕಾಡೆಮಿ ಪ್ರಶಸ್ತಿ ಸಂದಿವೆ. ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ.

ಆತ ವೈಟ್​ಬಾಲ್​ ಕ್ರಿಕೆಟ್​ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್​ ಆಟಗಾರ

ಸ್ಯಾಂಡಲ್​ವುಡ್​ನ ಹಿರಿಯ ನಟ ಅನಂತ್​​ನಾಗ್​ಗೆ Padma Bhushan ಪ್ರಶಸ್ತಿ

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…