ಬೆಂಗಳೂರು: ಕೇಂದ್ರ ಸರ್ಕಾರ ನೀಡುವ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿ ಮೂರ್ನಾಲ್ಕು ದಿನಗಳಾಗಿವೆ. ಈ ಮಧ್ಯೆ ಸಿನಿಮಾ ಕ್ಷೇತ್ರಕ್ಕೆ ನೀಡಲಾಗಿರುವ ಪ್ರಶಸ್ತಿಗಳ ಕುರಿತು ಅಸಮಾಧಾನ ಹೊರಬಿದ್ದಿದೆ. ಈ ವರ್ಷ ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಗಾಗಿ ನಟಿ ಕಂಗನಾ ರಣಾವತ್, ನಿಮಾಪಕಿ ಏಕ್ತಾ ಕಪೂರ್, ನಿರ್ಮಾಪಕ -ನಿರ್ದೇಶಕ ಕರಣ್ ಜೋಹರ್ ಮತ್ತು ಗಾಯಕ ಅದ್ನಾನ್ ಸಾಮಿ ಅವರಿಗೆ ಪದ್ಮ ಪ್ರಶಸ್ತಿ ಘೋಷಣೆಯಾಗಿದ್ದು, ಪ್ರಶಸ್ತಿಗಳು ಬಾಲಿವುಡ್ಗೆ ಮಾತ್ರ ಸೀಮಿತವಾಗಿದೆ ಎಂಬ ಕೂಗೆದ್ದಿದೆ.
ಹೌದು, ಸಿನಿಮಾ ಕ್ಷೇತ್ರಕ್ಕೆ ಘೋಷಣೆಯಾಗಿರುವ ನಾಲ್ಕೂ ಪ್ರಶಸ್ತಿಗಳು ಬಾಲಿವುಡ್ಗೆ ಸೀಮಿತವಾಗಿದ್ದು, ಇದರಿಂದ ಬೇರೆ ಭಾಷೆಗಳ ಸಿನಿಮಾ ಸಾಧಕರು ಪ್ರಶಸ್ತಿ ವಂಚಿತರಾಗಿದ್ದರೆ. ಈ ಕುರಿತು, ಡಾ.ಶಿವರಾಜಕುಮಾರ್ ಯುವ ಸೇನೆ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದೆ. ಕಂಗನಾ ರಣಾವತ್ ಅವರಿಗೆ ಪ್ರಶಸ್ತಿ ಘೋಷಣೆಯಾಗಿದ್ದಕ್ಕೆ ಗೌರವಿಸೋಣ ಎಂದಿರುವ ಸೇನೆ, ‘ಕನ್ನಡಿಗರು ಇಂತಹ ವಿಷಯದಲ್ಲಿ ಪಕ್ಷಭೇದ ಮರೆಯಬೇಕು. ಸಿನಿಮಾಗಳ ವಿಷಯದಲ್ಲಿ ಬೇರೆ ಭಾಷೆಯ ಕಲಾವಿದರು ಪ್ರಶಸ್ತಿ ಪಡೆಯುತ್ತಲೇ ಇದ್ದಾರೆ. ಆದರೆ, ಕನ್ನಡ ಚಿತ್ರರಂಗ ಮಾತ್ರ ರಾಷ್ಟ್ರ ಪ್ರಶಸ್ತಿಗಳಿಂದ ವಂಚಿತವಾಗುತ್ತಲೇ ಇದೆ. ಈ ವಿಷಯವಾಗಿ ಕನ್ನಡದ ಎಲ್ಲ ನಟರ ಅಭಿಮಾನಿಗಳು ಒಗ್ಗಟಿನ ಬಲ ಪ್ರದರ್ಶಿಸಬೇಕಿದೆ’ ಎಂದು ಸೇನೆ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನ ಪ್ರಾರಂಭಿಸಿದೆ. ಇದಕ್ಕೆ ಕನ್ನಡ ಚಿತ್ರರಂಗವೂ ಧ್ವನಿಗೂಡಿಸಿದೆ.
ನಿರ್ದೇಶಕ ಸಿಂಪಲ್ ಸುನಿ ಈ ಕುರಿತು ಟ್ವೀಟ್ ಮಾಡಿ, ದಕ್ಷಿಣ ಭಾರತ ಚಿತ್ರರಂಗವನ್ನು ಕಡೆಗಣಿಸಿ ಬರೀ ಬಾಲಿವುಡ್ ಮಂದಿಗೆ ಮಾತ್ರ ಮಣೆ ಹಾಕುತ್ತಿರುವುದು ಬೇಸರದ ವಿಷಯ ಎಂದಿದ್ದಾರೆ. ‘ಕಂಗನಾ ರಣಾವತ್ ಅವರಿಗೆ ಪದ್ಮಶ್ರೀ ಬಂದಿರುವುದಕ್ಕೆ ನನ್ನ ಅಪಸ್ವರವಿಲ್ಲ. ಆದರೆ, ಅನಂತ್ನಾಗ್ ಹಾಗೂ ಶಿವರಾಜಕುಮಾರ್ ಅವರಂಥ ಶ್ರೇಷ್ಠ ಕಲಾವಿದರು ಹಾಗೂ ಇನ್ನುಳಿದ ಚಿತ್ರರಂಗದ ಹಿರಿಯ ಕಲಾವಿದರಿಗೆ ಮನ್ನಣೆ ಮತ್ತು ಆದ್ಯತೆ ಕೊಡದೆ, ದಕ್ಷಿಣ ಭಾರತ ಚಿತ್ರರಂಗವನ್ನು ಕಡೆಗಣಿಸಿ, ಬರೀ ಬಾಲಿವುಡ್ ಮಂದಿಗೆ ಮಾತ್ರ ಮಣೆ ಹಾಕುತ್ತಿರುವುದು ಬೇಸರದ ವಿಷಯ’ ಎಂದು ಸುನಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೂ ಮೊದಲು ಸಹ, ಬಾಲಿವುಡ್ ಮಂದಿಗೆ ಹೋಲಿಸಿದರೆ, ದಕ್ಷಿಣ ಭಾರತದ ಸಾಕಷ್ಟು ಪ್ರತಿಭಾವಂತರು ಪ್ರಶಸ್ತಿ ವಂಚಿತರಾಗಿದ್ದಾರೆ. ಈ ಬಾರಿ ಸಹ ಅದು ಮುಂದುವರಿದಿದ್ದರಿಂದ ಕನ್ನಡ ಚಿತ್ರರಂಗದಲ್ಲಿ ಅಸಮಾಧಾನ ಭುಗಿಲೆದ್ದಿದೆ.