ರೈಲ್ವೆ ಕೆಳಸೇತುವೆಯಡಿ ಪಾರ್ಕಿಂಗ್

>

ಭರತ್ ಶೆಟ್ಟಿಗಾರ್ ಮಂಗಳೂರು
ರಾಷ್ಟ್ರೀಯ ಹೆದ್ದಾರಿ 75ರ ನಗರದ ಪಡೀಲ್‌ನಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೆ ಕೆಳ ಸೇತುವೆ ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಸೇತುವೆ ಪೂರ್ಣಗೊಂಡರೂ ಸಂಪರ್ಕ ರಸ್ತೆ ನಿರ್ಮಾಣವಾಗದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತಡೆಯಾಗಿದೆ.
ಪರಿಣಾಮ ಸರಕು ಸಾಗಾಟದ ಬೃಹತ್ ಟ್ರಕ್, ಟ್ಯಾಂಕರ್‌ಗಳಿಗೆ ಪಾರ್ಕಿಂಗ್ ಏರಿಯಾ ಆಗಿ ಮಾರ್ಪಟ್ಟಿದೆ. ಸಂಪರ್ಕ ರಸ್ತೆ ನಿರ್ಮಾಣವಾಗಬೇಕಾದ ಸೇತುವೆಯ ಎರಡೂ ಭಾಗದಲ್ಲಿ ಪ್ರತಿ ದಿನ 20-25 ಟ್ರಕ್‌ಗಳನ್ನು ಚಾಲಕರು ವಿಶ್ರಾಂತಿಗಾಗಿ ನಿಲ್ಲಿಸುತ್ತಾರೆ. ರಸ್ತೆ ನಿರ್ಮಾಣಕ್ಕಾಗಿ ತಗ್ಗುಪ್ರದೇಶವನ್ನು ಮಣ್ಣು ಹಾಕಿ ಎತ್ತರ ಮಾಡಲಾಗಿತ್ತು. ಈ ಪ್ರದೇಶ ವಿಶಾಲವಾಗಿದ್ದು, ಕೆಳಸೇತುವೆಯೂ ಅಪೂರ್ಣವಾಗಿದ್ದು, ಟ್ರಕ್ ಪಾರ್ಕಿಂಗ್ ಮಾಡಲು ಉತ್ತಮ ಸ್ಥಳಾವಕಾಶ ಸಿಕ್ಕಿದಂತಾಗಿದೆ.

ವರ್ಷ ಕಳೆದರೂ ಮುಗಿದಿಲ್ಲ ಕಾಮಗಾರಿ
ಪಡೀಲ್‌ನಲ್ಲಿ ರಾ.ಹೆ 75ಕ್ಕೆ ಅಡ್ಡಲಾಗಿ ಸಣ್ಣ ಗುಡ್ಡವೊಂದಿದ್ದು, ಅದರ ಮೇಲೆ ರೈಲು ಮಾರ್ಗ ಹಾದು ಹೋಗುತ್ತದೆ. ಒಂದು ಭಾಗದಲ್ಲಿ ಗುಡ್ಡ ಕೊರೆದು ಸೇತುವೆ ನಿರ್ಮಿಸಿ ಹಳೇ ಹೆದ್ದಾರಿ ನಿರ್ಮಿಸಲಾಗಿತ್ತು. ರಸ್ತೆ ಅಗಲೀಕರಣದ ವೇಳೆ ಎರಡು ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಅದರಂತೆ ಒಂದು ಕೆಳಸೇತುವೆಯನ್ನು ಹೆದ್ದಾರಿ ಇಲಾಖೆಯಿಂದಲೇ ಬಾಕ್ಸ್ ಪುಶ್ಶಿಂಗ್ ಕಾಮಗಾರಿಯ ಮೂಲಕ ನಿರ್ಮಿಸಲಾಗಿತ್ತು. ಈ ಕಾಮಗಾರಿ ಪೂರ್ಣಗೊಂಡ ಬಳಿಕ ಚತುಷ್ಪಥ ರಸ್ತೆಯ ಇನ್ನೊಂದು ಭಾಗದಲ್ಲಿ ಹಳೇ ಸೇತುವೆ ಇದ್ದಲ್ಲಿ 2017ರ ಡಿಸೆಂಬರ್ ತಿಂಗಳಲ್ಲಿ ಅಂಡರ್ ಬ್ರಿಡ್ಜ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ರೈಲ್ವೆ ಇಲಾಖೆಯೇ ಈ ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿತ್ತು. ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿ ಆರಂಭವಾದ ಕಾಮಗಾರಿ ಕುಂಟುತ್ತಾ ಸಾಗಿದ್ದು, ಒಂದು ವರ್ಷ ನಾಲ್ಕು ತಿಂಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ.

ಪಂಪ್‌ವೆಲ್ ಕಾಮಗಾರಿಯಂತೆಯೆ ಇದೂ?
ಕಾಮಗಾರಿ ಮುಗಿಯದ ಕಾರಣ ಹೆದ್ದಾರಿಯ ಈ ಭಾಗದಲ್ಲಿ ವಾಹನಗಳು ಚತುಷ್ಪಥ ರಸ್ತೆಯ ಒಂದೇ ಭಾಗದಲ್ಲಿ ಸಂಚರಿಸುತ್ತದೆ. ಈ ಹಿಂದೆ ಬಾಕ್ಸ್ ಪುಶ್ಶಿಂಗ್ ಕಾಮಗಾರಿ ಮೂಲಕ ಕೆಳಸೇತುವೆ ಪೂಣಗೊಳ್ಳಲು ಸುಮಾರು 4 ವರ್ಷಗಳು ಬೇಕಾಯಿತು. ಈಗ ಇನ್ನೊಂದು ಸೇತುವೆಯೂ ಅದೇ ಹಾದಿಯಲ್ಲಿ ಸಾಗುತ್ತಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದ್ದು, ನಗರದ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಕುರಿತು ಹಲವು ಆರೋಪಗಳೇ ಇವೆ. ಈಗ ಪಡೀಲ್ ಕೆಳ ಸೇತುವೆಯೂ ನಿಧಾನವಾಗಿದ್ದು, ಮಳೆಗಾಲಕ್ಕೆ ಮೊದಲು ಮುಗಿದಿದ್ದರೆ ಮತ್ತೆ ವರ್ಷಾಂತ್ಯದವರೆಗೆ ಕಾಯಲೇಬೇಕು.

6 ಕೋಟಿ ರೂ. ಮೊತ್ತದ ಕಾಮಗಾರಿ:
ಅಂಡರ್ ಬ್ರಿಡ್ಜ್ ಕಾಮಗಾರಿ ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದೆೆ. ಮೊದಲು ನಿರ್ಮಿಸಲಾಗಿದ್ದ, ಬಾಕ್ಸ್ ಪುಶ್ಶಿಂಗ್ ಸೇತುವೆಗೆ 16.50 ಕೋಟಿ ರೂ. ವೆಚ್ಚವಾಗಿತ್ತು. ಇಂಡಿಯನ್ ರೋಡ್ ಕಾಂಗ್ರೆಸ್(ಐಆರ್‌ಸಿ) ನಿಯಮದಂತೆ 5.50ಮೀ.ಎತ್ತರ ಹಾಗೂ 12.50ಮೀ. ಅಗಲದಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ. ಅಂಡರ್‌ಪಾಸ್ ಎತ್ತರವನ್ನು ಹಿಂದೆ ರಸ್ತೆ ಇದ್ದ ಮಟ್ಟದಿಂದ ಹೆದ್ದಾರಿ ಸಹಿತ 1.5 ಮೀ.ನಿಂದ 1.8 ಮೀ.ಗೆ ಏರಿಸಲಾಗಿದ್ದು, ಇದರೊಂದಿಗೆ ಸಂಪರ್ಕ ರಸ್ತೆಯೂ ಎತ್ತರವಾಗಲಿದೆ. ಹಿಂದೆ ಮಳೆಗಾಲದಲ್ಲಿ ನೀರು ನಿಂತು ಸಮಸ್ಯೆಯಾಗುತ್ತಿತ್ತು, ಆದ್ದರಿಂದ ಎತ್ತರ ಮಾಡಲಾಗಿದೆ.

ಉತ್ತರಿಸದ ಅಧಿಕಾರಿ
ಕಾಮಗಾರಿ ಎಂದು ಪೂರ್ಣಗೊಳ್ಳುತ್ತದೆ ಎಂದು ಕಾರಣ ಕೇಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಕರೆ ಮಾಡಿದರೆ, ಅವರು ಸ್ವೀಕರಿಸದೆ ಕಟ್ ಮಾಡಿದ್ದಾರೆ. ಮೊಬೈಲ್ ಸಂದೇಶ ಕಳುಹಿಸಿದರೂ ಅದಕ್ಕೂ ಉತ್ತರವಿಲ್ಲ.

Leave a Reply

Your email address will not be published. Required fields are marked *