ಭತ್ತ ಖರೀದಿ ಕೇಂದ್ರಗಳಲ್ಲೇ ದಲ್ಲಾಳಿಗಳ ಹಾವಳಿ?

ಮಾದರಹಳ್ಳಿ ರಾಜು ಮಂಡ್ಯ: ಮದ್ದೂರು, ಮಳವಳ್ಳಿಯಲ್ಲಿ ಭತ್ತ ಖರೀದಿ ಕೇಂದ್ರಗಳೇ ಆರಂಭವಾಗದೆ ಅನ್ನದಾತರು ಪರದಾಡುತ್ತಿದ್ದರೆ, ಮಂಡ್ಯ, ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಆರಂಭವಾಗಿರುವ ಖರೀದಿ ಕೇಂದ್ರಗಳಲ್ಲೇ ದಲ್ಲಾಳಿ ಕಾಟ ಹೆಚ್ಚಾಗಿ, ಅನ್ನದಾತರ ಪಾಡು ಕೇಳವವರು ಇಲ್ಲದಂತಾಗಿದೆ.
ಸರ್ಕಾರ ರೈತರನ್ನು ರಕ್ಷಿಸುವ ಸಲುವಾಗಿ ತೆರೆಯಬೇಕಾದ ಭತ್ತ ಖರೀದಿ ಕೇಂದ್ರಗಳನ್ನು ನಿಗದಿತ ಸಮಯಕ್ಕಿಂತ 2 ತಿಂಗಳು ತಡವಾಗಿ ತೆರೆಯಿತು. ಆದರೆ, ಭತ್ತ ಖರೀದಿಸುವವರ ನಿಯಮಗಳನ್ನು ಪಾಲಿಸಲಾಗದ ರೈತರು ವಿಧಿಯಿಲ್ಲದೆ ದಲ್ಲಾಳಿಗಳಿಗೆ 1200-1300 ರೂ.ಗೆ ಭತ್ತ ಮಾರಾಟ ಮಾಡಿ ಹೋಗುತ್ತಿದ್ದಾರೆ. ಮನೆಯ ಬಳಿಗೆ ಬಂದು ಈ ದರಕ್ಕೆ ದಲ್ಲಾಳಿಗಳು ಖರೀದಿಸುತ್ತಿದ್ದರು. ಆಗ ಬಾಡಿಗೆ ಬಂಕ ಇರಲಿಲ್ಲ. ಆದರೆ, 1700 ರೂ.ಪ್ರೋತ್ಸಾಹಧನ ಸಿಗುತ್ತದೆ ಎಂದು ಬಂದು ನಷ್ಟ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾರಗೌಡನಹಳ್ಳಿ ಹರೀಶ್ ಆಕ್ರೋಶವ್ಯಕ್ತಪಡಿಸುತ್ತಾರೆ.

ಟ್ರಾೃಕ್ಟರ್, ಗೂಡ್ಸ್ ಆಟೋಗಳನ್ನು ಬಾಡಿಗೆಗೆ ಮಾಡಿಕೊಂಡು ಭತ್ತವನ್ನು ತುಂಬಿಕೊಂಡು ಬಂದರೆ, ತೂಕ ಮಾಡಿಸಲು ಗಂಟೆಗಟ್ಟಲೇ ಕಾಯಬೇಕು. ಅಲ್ಲಿಂದ ಗೋದಾಮಿಗೆ ಹೋದರೆ, ಬಾಗಿಲು ತೆರೆಯುವುದು 11 ಗಂಟೆಗೆ, ಅಲ್ಲಿನ ಪರೀಕ್ಷೆಗಳಿಗೆ ಒಳಪಡಲು ಮತ್ತಷ್ಟು ಗಂಟೆ ಕಾಯಬೇಕು. ಕಾದು ನಿಂತು ಸರದಿ ಬಂದಾಗ ಒಳಗೆ ಹೋದರೆ, ಭತ್ತ ಖರೀದಿಸುವವರು ಪ್ರತಿ ಮೂಟೆಯಲ್ಲಿನ ಭತ್ತವನ್ನು ಪರೀಕ್ಷಿಸುತ್ತಾರೆ. ಒಂದು ಮೂಟೆಯಲ್ಲಿ ಸ್ವಲ್ಪ ಜಳ್ಳು ಸಿಕ್ಕರೆ ಸಂಪೂರ್ಣ ಭತ್ತವನ್ನು ತಿರಸ್ಕರಿಸುತ್ತಾರೆ. ಒಂದು ಮೂಟೆಯಲ್ಲಿ ಸ್ವಲ್ಪ ಹಸಿ ಇರುವ ಭತ್ತ ಇದ್ದರೂ ಕ್ಯಾತೆ ತೆಗೆದು ವಾಪಸ್ ತೆಗೆದುಕೊಂಡು ಹೋಗಲು ಹೇಳುತ್ತಾರೆ. ಪ್ರಶ್ನೆ ಮಾಡಿದರೆ, ರೈತರ ಜತೆ ರೌಡಿಗಳಂತೆ ವರ್ತಿಸುತ್ತಾರೆ ಎಂದವರು ದೂರಿದರು.

ದಲ್ಲಾಳಿಗಳ ಆಟ ಶುರು: ಖರೀದಿ ಕೇಂದ್ರದಲ್ಲಿ ರೈತರು ವಾಪಸ್ ತೆಗೆದುಕೊಂಡು ಹೋಗಬೇಕಾದಂತ ಸನ್ನಿವೇಶ ಸೃಷ್ಟಿಸುತ್ತಾರೆ. ಆಗ ಅಲ್ಲೆ ಕೆಲವರು ಇದ್ದುಕೊಂಡು ಹೋಗಲಿ ನಮಗೆ ಕೊಡಿ 1000 ರೂ. ಕೊಡುತ್ತೇವೆ ಎಂದು ಚೌಕಾಸಿ ಆರಂಭಿಸಿ 1200-1300 ರೂ.ಗಳಿಗೆ ಖರೀದಿಸುತ್ತಾರೆ.
ಮತ್ತೆ ವಾಹನವನ್ನು ಬಾಡಿಗೆಗೆ ಮಾಡಿಕೊಂಡು ಬರಬೇಕಾಗುತ್ತದೆ. ಜತೆಗೆ ತುರ್ತಾಗಿ ಹಣ ಅಗತ್ಯವಿರುವ ಕಾರಣದಿಂದ ರೈತರು ಅನ್ಯದಾರಿ ಕಾಣದೆ ದಲ್ಲಾಳಿಗಳಿಗೆ ಮಾರಾಟ ಮಾಡಿ ತಮಗೆ ತಾವೇ ಶಾಪ ಹಾಕಿಕೊಂಡು ಹಿಂದಿರುಗುತ್ತಿದ್ದಾರೆ. ಖರೀದಿ ಕೇಂದ್ರಗಳು ಕೂಡ ದಲ್ಲಾಳಿಗಳಿಗೆ ಸ್ವರ್ಗದಂತಾಗಿದ್ದು, ರೈತರಿಗೆ ಮೂರ್ಕಾಸು ಸಿಕ್ಕರೆ, ದಲ್ಲಾಳಿಗಳಿಗೆ ಆರ‌್ಕಾಸು ಸಿಗುತ್ತಿದೆ ಎನ್ನುತ್ತಾರೆ ಕಾರಸವಾಡಿ ರೈತ ಮಂಚೇಗೌಡ.


ಲಾರಿಗಳಲ್ಲಿ ಬರುತ್ತಿದೆ ಭತ್ತ
ಮತ್ತೊಂದೆಡೆ ಲಾರಿಗಟ್ಟಲೇ ಭತ್ತ ಖರೀದಿ ಕೇಂದ್ರಗಳಿಗೆ ಬರುತ್ತಿದ್ದು, ಅದನ್ನು ರೈತರು ತಂದಿಲ್ಲ. ರೈತರಿಂದ ಈಗಾಗಲೇ ಚೌಕಾಸಿ ಮಾಡಿ ಖರೀದಿಸಿರುವ ದಲ್ಲಾಳಿಗಳು ರೈತರ ಹೆಸರಿನಲ್ಲಿ ಖರೀದಿ ಕೇಂದ್ರಗಳಿಗೆ ಮಾರಲು ಬರುತ್ತಿದ್ದಾರೆ ಎಂಬ ಆರೋಪಗಳು ರೈತರಿಂದ ಕೇಳಿಬಂದವು.

ಲಾರಿಗಳಲ್ಲಿ ಬರುವ ಭತ್ತವನ್ನು ಖರೀದಿ ಕೇಂದ್ರದಲ್ಲಿ ರೈತರಿಗೆ ವಿಧಿಸುವ ಅರ್ಧದಷ್ಟು ಷರತ್ತುಗಳನ್ನು ವಿಧಿಸದೆ ತೆಗೆದುಕೊಳ್ಳುತ್ತಾರೆ. ಇದನ್ನು ಪ್ರಶ್ನಿಸಿದ ತಮ್ಮ ಭತ್ತ ಖರೀದಿಗೂ ಕೊಕ್ಕೆ ಬೀಳುತ್ತದೆ. ಜತೆಗೆ ಖರೀದಿ ಕೇಂದ್ರದ ಸಿಬ್ಬಂದಿ ಜತೆ ಜಗಳ ಮಾಡಬೇಕಾಗುತ್ತದೆ. ಆದ್ದರಿಂದ ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೂ ಕಣ್ಣು ಮುಚ್ಚಿಕೊಂಡು ಮರಳಬೇಕಿದೆ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ರೈತರು.

ಹಣ ಯಾವಾಗ ಬರುತ್ತೋ…
ಇನ್ನೂ ಸರ್ಕಾರ ನಿಗದಿ ಮಾಡಿರುವ ಪ್ರೋತ್ಸಾಹಧನ ನಂಬಿ ಹಲವು ರೈತರು ಕಾದು, ಹೈರಾಣಾಗಿ ಖರೀದಿ ಕೇಂದ್ರಗಳಿಗೆ ಭತ್ತವನ್ನು ಹಾಕಿದ್ದಾರೆ. ಆದರೆ, ರೈತರಿಗೆ ಯಾವಾಗ ಹಣ ಸಿಗುತ್ತದೆ ಎಂಬುದು ಗೊತ್ತಿಲ್ಲ ಎನ್ನುತ್ತಾರೆ ರೈತರು.ತುರ್ತು ಹಣದ ಅವಶ್ಯಕತೆ ಇರುವುದರಿಂದ ದಲ್ಲಾಳಿಗಳಿಗೆ ಮಾರಾಟ ಮಾಡಿದ್ದರೆ ಚನ್ನಾಗಿರುತ್ತಿತ್ತು ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಒಟ್ಟಾರೆ, ಸರ್ಕಾರ ಭತ್ತ ಖರೀದಿ ಕೇಂದ್ರ ತೆರೆದರೂ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ.