ಭತ್ತ ಖರೀದಿ ನೋಂದಣಿಗೆ ಗ್ರಹಣ

ಮಂಡ್ಯ: ಭತ್ತ ಖರೀದಿ ಕೇಂದ್ರ ತೆರೆದು ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ, ಇಂಟರ್‌ನೆಟ್ ಸಮಸ್ಯೆಯಿಂದಾಗಿ ರೈತರು ದಿನವಿಡೀ ನೋಂದಣಿ ಕೇಂದ್ರದಲ್ಲಿ ಕುಳಿತು ಕಾಲ ಕಳೆಯಬೇಕಾದ ದುಸ್ಥಿತಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಮಾತ್ರವಲ್ಲ, ನೋಂದಣಿ ಪ್ರಕ್ರಿಯೆಗೆ ಕೊನೆ ದಿನಾಂಕ ನಿಗದಿ ಮಾಡಿರುವುದರಿಂದ ಇನ್ನೂ ಅನೇಕ ಕಡೆ ಕೊಯ್ಲು ಆರಂಭವಾಗದ ಕಾರಣ ರೈತರು ಆತಂಕಕ್ಕೆ ಸಿಲುಕಿದ್ದಾರೆ. ಭತ್ತ ಖರೀದಿಗೆ ನೋಂದಣಿ ಪ್ರಕ್ರಿಯೆ ಡಿ.5ರಿಂದ ಆರಂಭವಾಗಿದ್ದು, ಪ್ರತಿ ಹೋಬಳಿ ಕೇಂದ್ರದಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.
ಆನ್‌ಲೈನ್ ನೋಂದಣಿ ಮಾಡುತ್ತಿದ್ದು, ನೆಟ್‌ವರ್ಕ್ ಪ್ರಮುಖವಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಕೇಂದ್ರ ತೆರೆದಿದ್ದು, ಬಹುತೇಕ ಕಡೆಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ. ಸರ್ವರ್ ತೀರಾ ಮಂದಗತಿಯಲ್ಲಿ ಕೆಲಸ ಮಾಡುತ್ತಿದೆ.
ಪರಿಣಾಮ ದಿನವೊಂದಕ್ಕೆ ಕೇವಲ 10-15 ರೈತರ ಹೆಸರು ನೋಂದಣಿ ಆಗುತ್ತಿದೆ. ಜತೆಗೆ ಅದು ಪ್ರಿಂಟ್ ಬರಲು ಮತ್ತಷ್ಟು ಸಮಯ ಹಿಡಿಯುತ್ತದೆ. ತಮ್ಮ ಹೆಸರು ನೋಂದಣಿ ಆಗಬಹುದು ಎಂದು ಬೆಳಗ್ಗೆ ಎಲ್ಲ ಕೆಲಸಗಳನ್ನು ಬಿಟ್ಟು ಬರುವ ರೈತರು ದಿನವಿಡೀ ಕಾದು ನಿರಾಸೆಯಿಂದ ವಾಪಸ್ಸಾಗುವ ದುಸ್ಥಿತಿ ಎದುರಾಗಿದೆ.

ಬೇಕಾಬಿಟ್ಟಿ ಕೆಲಸ: ನೋಂದಣಿ ಕಾರ್ಯವನ್ನು ಖಾಸಗಿಯವರಿಗೆ ವಹಿಸಲಾಗಿದೆ. ಕೆಲವೆಡೆ ಗುಣಮಟ್ಟದ ಪರಿಕರಗಳಿದ್ದರೆ, ಕೆಲವೆಡೆ ಸಮರ್ಪಕವಲ್ಲದ ಕಂಪ್ಯೂಟರ್ ಮೊದಲಾದ ಪರಿಕರಗಳಿವೆ. ಅಂತಹ ಕೇಂದ್ರಗಳಲ್ಲಿ ನೋಂದಣಿ ಕಾರ್ಯ ತೀವ್ರ ಮಂದಗತಿಯಲ್ಲಿ ಸಾಗುತ್ತಿದೆ. ಜತೆಗೆ ಆಗಾಗ ವಿದ್ಯುತ್ ಕೈ ಕೊಡುವುದರಿಂದ ರೈತರು ಪರದಾಡುವಂತಾಗಿದೆ.
ಉದಾಹರಣೆಗೆ ಮಂಡ್ಯ ತಾಲೂಕಿನ ದುದ್ದ ನೋಂದಣಿ ಕೇಂದ್ರದಲ್ಲಿ ಗುರುವಾರ ನೋಂದಣಿಯಾದ ರೈತರ ಸಂಖ್ಯೆ ಕೇವಲ 7. ಇದೆ ಪರಿಸ್ಥಿತಿ ಹಲವು ಕೇಂದ್ರಗಳಲ್ಲಿದ್ದು, ಬೆಳಗ್ಗೆ ಮುದ್ದೆ ತಿಂದು ಬಂದ ರೈತರು ಮಧ್ಯಾಹ್ನ, ಕಾಫಿ, ಟೀ ಕುಡಿದು ಕಾಲ ಕಳೆಯುವಂತಹ ಪರಿಸ್ಥಿತಿಯಿಂದಾಗಿ ರೈತರು ಶಾಪ ಹಾಕುತ್ತಿದ್ದಾರೆ.
ಎಲ್ಲ ಸರ್ಕಾರಗಳು ರೈತಪರ ಎನ್ನುತ್ತವೆ. ಆದರೆ, ರೈತರು ನೆಮ್ಮದಿಯಾಗಿ ಬದುಕುವಂಥ ಸನ್ನಿವೇಶ ಸೃಷ್ಟಿಸಲು ಯಾವ ಸರ್ಕಾರಗಳು ಕೂಡ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊನೆ ದಿನದ ಆತಂಕ: ಒಂದೆಡೆ ಸರ್ವರ್‌ಗಳು ಸರಿಯಾಗಿಲ್ಲ. ಮತ್ತೊಂದೆಡೆ ಕರೆಂಟ್ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಇದರ ನಡುವೆ ನೋಂದಣಿಗೆ ಕೊನೆ ದಿನಾಂಕ ನಿಗದಿ ಮಾಡಿರುವುದು ರೈತರ ಆತಂಕ ಹೆಚ್ಚಿಸಿದೆ.
ಇನ್ನೂ ಹಲವೆಡೆ ಕೊಯ್ಲು ಆರಂಭವಾಗಿಲ್ಲ. ಜತೆಗೆ ಕಬ್ಬಿನ ಕಟಾವು ನಡೆಯುತ್ತಿದೆ. ಕೃಷಿ ಕಾರ್ಮಿಕರ ಸಮಸ್ಯೆಯಿಂದ ರೈತರು ದಿಕ್ಕು ತೋಚದಂತಾಗಿದ್ದಾರೆ. ಇಂಥ ಸನ್ನಿವೇಶದಲ್ಲಿ ನೋಂದಣಿಗೆ ಅಂತಿಮ ದಿನಾಂಕ ನಿಗದಿ ಮಾಡಿರುವುದರಿಂದ ರೈತರು ಯಾವ ಕೆಲಸವನ್ನುಮಾಡಲಾಗುತ್ತಿಲ್ಲ ಎನ್ನುತ್ತಾರೆ ಸಾವಯವ ಕೃಷಿಕ ಮರಿದೇಸಿಗೌಡ.
ಕೊನೆ ದಿನ ನಿಗದಿ ಮಾಡುವುದರಿಂದ ರೈತರು ನೋಂದಣಿ ಮಾಡಿಸಲು ಸಮಯ ಸಿಗದೆ ಹೋದರೆ, ಆ ಭತ್ತ ದಲ್ಲಾಳಿಗಳ ಪಾಲಾ ಗುತ್ತದೆ. 3 ತಿಂಗಳು ಶ್ರಮ ಪಟ್ಟು ಬೆಳೆದಿರುವ ರೈತನಿಗಿಂತ ಮೂರು ದಿನ ಶ್ರಮ ಪಡುವ ದಲ್ಲಾಳಿಗೆ ಲಾಭವಾಗುತ್ತದೆ. ಇಂಥ ವ್ಯವಸ್ಥೆ ಕೊನೆಯಾಗಬೇಕೆಂಬುದು ಅವರ ಒತ್ತಾಯ.