ಉಪ್ಪುನೀರಿಗೆ ಕೃಷಿ ಆಪೋಶನ

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

ಕುಂದಾಪುರ ತಾಲೂಕು ಕಟ್‌ಬೇಲ್ತೂರು ಗ್ರಾಮ ಹರೆಗೋಡು ಪರಿಸರದ ಕೃಷಿ ಬದುಕು ಹರೋಹರ. ಎಲ್ಲವೂ ಅಂದು ಕೊಂಡಂತೆ ನಡೆದಿದ್ದರೆ ವಿಶಾಲ ಕೃಷಿ ಭೂಮಿ ಭತ್ತದ ಪೈರಿನ ಹಚ್ಚ ಹಸಿರು. ಐದು ಎಕರೆ ಪ್ರದೇಶದಲ್ಲಿ ಸಮೃದ್ಧ ಕಬ್ಬಿನ ಬೆಳೆ. ಪರಿಸರದ ಬಾವಿಗಳಲ್ಲಿ ಸಿಹಿನೀರಿನ ಬುಗ್ಗೆ. ಆದರೆ ಹಾಗಾಗದೆ ಜೀವನ ಕಟ್ಟಿಕೊಡುವ ಕೃಷಿ, ಜೀವಜಲ ತಾಣದಲ್ಲಿ ಪ್ರಸಕ್ತ ಉಪ್ಪುನೀರು ದಾಂಗುಡಿ ಇಟ್ಟಿದೆ.

ಕೃಷಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ರೈತರ ಸಮಸ್ಯೆಗೆ ಸ್ಪಂದಿಸಿಲ್ಲ. ಅರಣ್ಯ ಇಲಾಖೆ ನಾಟಿ ಮಾಡಿದ ಕಾಂಡ್ಲಾ ಸವರಿ ಸರ್ಕಾರಿ ಜಾಗದಲ್ಲಿ ಸಿಗಡಿ ಕೃಷಿ ಕೆರೆ ನಿರ್ಮಿಸಿ ಲೀಸಿಗೆ ಕೊಟ್ಟಿದ್ದರೂ, ಕಂದಾಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.

ಹರೆಗೋಡಲ್ಲಿ ಐನೂರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಹಿಂದೆ ಮೂರು ಭತ್ತದ ಬೆಳೆ, ನಂತರ ದವಸ ಧಾನ್ಯ ಬೆಳೆಯುತ್ತಿದ್ದರು. ವಿಶಾಲ ಬಯಲು ಪ್ರದೇಶದಲ್ಲಿದ್ದ ಕಡಿನಕೆರೆ ನೀರು ಬಳಸಿಕೊಂಡು ಐದು ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆ ತೆಗೆಯಲಾಗುತ್ತಿತ್ತು. ಕೆರೆ ಕಾಯಕಲ್ಪ ಯೋಜನೆ ಸಮರ್ಪಕ ಅನುಷ್ಠಾನವಾಗದೆ ಕೆರೆ ಹಳ್ಳಹತ್ತಿ ಹೋಗಿದ್ದು, ಕಬ್ಬು ಕೃಷಿ ಕೈ ಬಿಡಲಾಗಿದೆ.

ಹರೆಗೋಡು ಕೃಷಿ ಪ್ರದೇಶದಲ್ಲಿ ಎರಡು ಕಿಂಡಿ ಅಣೆಕಟ್ಟಿದ್ದು, ಒಂದು ಅಣೆಕಟ್ಟು ಕುಸಿದರೆ, ಮತ್ತೊಂದು ಅಣೆಕಟ್ಟು ಸಿಗಡಿ ಕೃಷಿ ಉಪ್ಪುನೀರಿಗೆ ತಳದಲ್ಲಿ ಕನ್ನ ಕೊರೆಯಲಾಗಿದೆ. ಸಿಗಡಿ ಕೃಷಿ ಹಿನ್ನೆಲೆಯಲ್ಲಿ ಉಪ್ಪುನೀರು ಒಳಗೆ ಬರಲು ಅನುಕೂಲ ಮಾಡಿಕೊಂಡಿದ್ದರಿಂದ ಸುಮಾರು 50 ಎಕರೆ ಭತ್ತದ ಕೃಷಿ ಭೂಮಿಯಲ್ಲಿ ಮೊಳಕಾಲು ಮಟ್ಟ ಉಪ್ಪುನೀರು ನಿಂತಿದೆ. ಈ ಬಾರಿ ಮಳೆಗಾಲದ ಭತ್ತದ ಬೆಳೆ ಕೂಡ ಕಷ್ಟಕರ.

ಸಮಸ್ಯೆ ದೊಡ್ಡದಲ್ಲ: ಹರೆಗೋಡು ರೈತರ ಸಮಸ್ಯೆ ದೊಡ್ಡದೇ ಅಲ್ಲ. ರಾಜಾಡಿ ಸೇತುವೆ ಬಳಿಯಿಂದ ನುಗ್ಗಿಬರುವ ಉಪ್ಪುನೀರು ತಡೆಗೆ ಚಿಕ್ಕದೊಂದು ಒಡ್ಡು ಕಟ್ಟಿದರೆ ಸಮಸ್ಯೆ ಪರಿಹಾರ ಆಗುತ್ತದೆ. ಅದಕ್ಕೆ ಕೋಟಿ ಲೆಕ್ಕದಲ್ಲಿ ಅನುದಾನ ಕೂಡ ಬೇಡ. ಹಿಂದೆ ಪರಿಸರದ ರೈತರು ರಾಜಾಡಿ ಕಾಂಡ್ಲಾ ವನದಿಂದ ಮೇಲಕ್ಕೆ ಬರುವ ಉಪ್ಪುನೀರು ತಡೆಗೆ ಸ್ವಾಭಾವಿಕ ಕಟ್ಟಕಟ್ಟಿಕೊಂಡು ಕಟ್ಟದ ಬುಡದಲ್ಲಿ ಚಿಕ್ಕದೊಂದು ತೂಬು ನಿರ್ಮಿಸಿಕೊಳ್ಳುತ್ತಿದ್ದರು. ತೂಬಿಗೆ ಚಿಕ್ಕದೊಂದು ಬಾಗಿಲು ಮಾಡಿಕೊಳ್ಳುತ್ತಿದ್ದು, ಭರತಕ್ಕೆ ಬಾಗಿಲು ಮುಚ್ಚಿಕೊಂಡರೆ ಇಳಿತಕ್ಕೆ ಬಾಗಿಲು ತೆರದು ಮೇಲಿಂದ ನೀರು ಕೆಳಗೆ ಸೂಸಿ ಹೋಗುವಂತೆ ಮಾಡುತ್ತಿತ್ತು. ರೈತರ ಕಟ್ಟ ಇಂದಿಗೂ ಇದ್ದು ಬಾಗಿಲು ಕೂಡಾ ಇದೆ. ಆದರೆ ಸಿಗಡಿ ಕೃಷಿಕರು ತೂಬಿನ ಬಾಗಿಲಿಗೆ ಹಗ್ಗಕಟ್ಟಿ ತೆರೆದಿಟ್ಟಿದ್ದಾರೆ. ಇದರಿಂದ ಉಪ್ಪುನೀರು ಕೃಷಿ ಭೂಮಿಗೆ ನುಗ್ಗುತ್ತದೆ.

ಗ್ರಾಪಂ ಅಧ್ಯಕ್ಷರು ಕಾರಣ?
ಹರೆಗೋಡು ಕೃಷಿ ಭೂಮಿ ಸಮಸ್ಯೆಗೆ ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ ಕಾರಣ ಎಂಬುದು ಪರಿಸರದ ರೈತರ ನೇರ ಆರೋಪ. ಹರೆಗೋಡು ಪರಿಸರದಲ್ಲಿ ಎಂಟು ಸಿಗಡಿ ಕೆರೆಯಿದ್ದು, ಗ್ರಾಪಂ ಅಧ್ಯಕ್ಷರ ಕೆರೆ ಜತೆ ಉಳಿದ ಕೆರೆಗಳ ಇವರ ಕಣ್ಣಂಚಿನಲ್ಲೇ ನಡೆಯುತ್ತದೆ. ಸರ್ಕಾರಿ ಜಾಗದಲ್ಲೂ ಸಿಗಡಿ ಕೆರೆ ನಿರ್ಮಿಸಿ ಲೀಸ್ ಕೊಡಲಾಗಿದೆ. ಸಿಗಡಿ ಕೆರೆಗಳ ಹಿತ ಕಾಯಲು ಕೃಷಿ ಭೂಮಿ ಹಡೀಲು ಬೀಳುವ ಜತೆ ಕುಡಿವ ನೀರಿಗೂ ಸಮಸ್ಯೆ ಮಾಡುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ಉಪ್ಪು ನೀರಿನ ದಾಂಗುಂಡಿಯಿಂದ ಕೃಷಿ ಮಾಡುವುದೇ ಕಷ್ಟವಾಗಿದ್ದು, ನಮ್ಮನ್ನು ಗೋಳು ಕೇಳುವವರು ಇಲ್ಲ. ಸಂದಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗ್ರಾಮ ಪಂಚಾಯಿುತಿಗೂ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದರೂ ಯಾರೂ ಸ್ಪಂದಿಸಿಲ್ಲ. ಸಿಗಡಿ ಕೆರೆ ಮಾಲೀಕರಿಗೆ ನಮ್ಮ ಕಷ್ಟ ಹೇಳಿದರೆ ನಮಗೆ ಧಮ್ಕಿ ಹಾಕುತ್ತಾರೆ.
|ಶ್ರೀನಿವಾಸ ಗಾಣಿಗ, ಕೃಷಿಕ ಹರೆಗೋಡು.

ಸಿಗಡಿ ಕೆರೆಯಿಂದ ಹರೆಗೋಡಿನ 50 ಎಕರೆ ಕೃಷಿ ಭೂಮಿ ಸಂಪೂರ್ಣ ಹಾಳಾಗಿದೆ. ಲಕ್ಷಾಂತರ ಸುರಿದು ಬಾವಿ ಮಾಡಿದ್ದು, ಬಾವಿ ನೀರು ಉಪ್ಪಾಗಿ ಬೇರೆ ಕಡೆಯಿಂದ ನೀರು ತರುವ ಸ್ಥಿತಿ ಇದೆ. ಗ್ರಾಪಂನಿಂದ ನಳ್ಳಿ ನೀರು ಸೌಲಭ್ಯ ಕೂಡ ಇಲ್ಲ. ಸಮಸ್ಯೆ ಪರಿಹಾರ ಮಾಡದಿದ್ದರೆ ನಮಗೆ ಪ್ರತಿಭಟನೆಯೊಂದೇ ದಾರಿ.
|ವಿಶ್ವನಾಥ ಗಾಣಿಗ, ರಿಕ್ಷಾ ಮಾಲೀಕ ಹಾಗೂ ಕೃಷಿಕ ಹರೆಗೋಡು

ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಒಬ್ಬರೇ ನಮ್ಮ ಸಮಸ್ಯೆ ಕೇಳಿ ಸ್ಥಳಕ್ಕೆ ಬಂದು ಸಮಸ್ಯೆ ಕಣ್ಣಾರೆ ಕಂಡಿದ್ದಾರೆ. ಸ್ಥಳದಿಂದಲೇ ದೂರವಾಣಿ ಮೂಲಕ ಅಧಿಕಾರಿಗಳ ಸಂಪರ್ಕಿಸಿ ಸಮಸ್ಯೆ ಪರಿಹಾರ ಮಾಡುವಂತೆ ತಾಕೀತು ಮಾಡಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ನಮ್ಮ ಕಷ್ಟ ಏನೂ ಅಂತ ಕೇಳಿಲ್ಲ. ಸಮಸ್ಯೆಗೆ ಸ್ಪಂದಿಸದಿದ್ದರೆ ಪ್ರತಿಭಟನೆ ಜತೆ ಚುನಾವಣೆ ಬಹಿಷ್ಕಾರ ಮಾಡುತ್ತೇವೆ.
|ನಾಗರಾಜ್ ಗಾಣಿಗ, ಸ್ಥಳೀಯ ಯುವಕ