ದುರ್ಬಲ ಮುಂಗಾರು ನಡುವೆಯೇ ಭತ್ತ ಕೃಷಿಗೆ ಚಾಲನೆ

ಭರತ್ ಶೆಟ್ಟಿಗಾರ್ ಮಂಗಳೂರು

ನಿಗದಿತ ಅವಧಿಗಿಂತ ಸುಮಾರು 15 ದಿನ ತಡವಾಗಿ ಕರಾವಳಿಗೆ ಕಾಲಿರಿಸಿದ ಮುಂಗಾರು ಚುರುಕು ಪಡೆಯದೆ ದುರ್ಬಲವಾಗಿರುವುದರಿಂದ ಭತ್ತ ಕೃಷಿಯ ಮೇಲೆ ಪರಿಣಾಮ ಬೀರಿದೆ.
ಮುಂಗಾರಿನ ಭಾರಿ ಮಳೆ ನಿರೀಕ್ಷೆಯಲ್ಲಿದ್ದ ರೈತರು ಪ್ರಸ್ತುತ ಬಿಸಿಲು-ಮಳೆಯ ವಾತಾವರಣದ ನಡುವೆಯೇ ಆತಂಕದಿಂದ ಉಳುಮೆ-ನಾಟಿ, ಬಿತ್ತನೆ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಕೆಲವೆಡೆ ಬೆಟ್ಟು ಗದ್ದೆಗಳಲ್ಲಿ ನೀರಾಗದೆ ಬಾವಿ, ಕೆರೆಗಳಿಂದ ನೀರು ಹಾಯಿಸಿ ಉಳುಮೆ ಆರಂಭಿಸಲಾಗಿದೆ. ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕಿನಲ್ಲಿ ರೈತರು ಉಳುಮೆ-ಬಿತ್ತನೆ ಕೆಲಸಗಳಿಗೆ ಚಾಲನೆ ಸಿಕ್ಕಿದೆ. ಇದು ಶೇ.10ರಷ್ಟು ಮಂದಿ ಮಾತ್ರ, ಉಳಿದವರು ಮಳೆಯ ನಿರೀಕ್ಷೆಯಲ್ಲಿದ್ದಾರೆ.

ಸಾಮಾನ್ಯವಾಗಿ ಜೂನ್ ಮಧ್ಯದ ವೇಳೆಗೆ ಒಂದು ಹಂತದ ಕೃಷಿ ಚಟುವಟಿಕೆಗಳು ಮುಗಿಯಬೇಕಿತ್ತು. ಕೃಷಿ ಕಾರ್ಮಿಕರ ಸಮಸ್ಯೆಯಿಂದಾಗಿ ನೇಜಿ ನಾಟಿ ಮಾಡುವ ಬದಲು ನೇರ ಬಿತ್ತನೆಗೆ ಹೆಚ್ಚಿನ ರೈತರು ಮುಂದಾಗಿದ್ದು, ನಿರೀಕ್ಷಿತ ಮಳೆಯಾಗದೆ ಇದೂ ಸಾಧ್ಯವಾಗುತ್ತಿಲ್ಲ. ಚಾಪೆ ನೇಜಿ ಮಾಡಿದವರು ಗದ್ದೆ ಉಳುಮೆಯಾಗದೆ ಚಿಂತಿತರಾಗಿದ್ದು, 20 ದಿನದೊಳಗೆ ಅದನ್ನು ನಾಟಿ ಮಾಡದಿದ್ದರೆ ಇಳುವರಿ ಮೇಲೆ ಪರಿಣಾಮ ಬೀಳಲಿದೆ ಎನ್ನುತ್ತಾರೆ ರೈತರು.

ಕಡಿಮೆಯಾದ ಗುರಿ: ಪ್ರತೀ ವರ್ಷ ಭತ್ತಕ್ಕೆ ಇಂತಿಷ್ಟು ಎಂದು ಗುರಿ ನಿಗದಿಪಡಿಸಲಾಗುತ್ತದೆ. ಅದರಂತೆ ಈ ಬಾರಿ ದ.ಕ. ಜಿಲ್ಲೆಯಲ್ಲಿ 15,900 ಹೆಕ್ಟೇರ್ ಹಾಗೂ ಉಡುಪಿಯಲ್ಲಿ 36,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲು ಯೋಜಿಸಲಾಗಿದೆ. ಆದರೆ ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಬಹಳಷ್ಟು ಕಡಿಮೆ. ಕಳೆದ ಸಾಲಿನಲ್ಲಿ ದ.ಕ.ಜಿಲ್ಲೆಯಲ್ಲಿ 28 ಸಾವಿರ ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 44 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಪಡಿಸಿತ್ತು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಕಳೆದ ಬಾರಿ ನಡೆಸಿದ ಜಂಟಿ ಸರ್ವೇಯಲ್ಲಿ ದ.ಕ.ದಲ್ಲಿ 15,900 ಹೆಕ್ಟೇರ್ ಹಾಗೂ ಉಡುಪಿಯಲ್ಲಿ 36,000 ಹೆಕ್ಟೇರ್ ಮಾತ್ರ ಭತ್ತ ಬೆಳೆಯುತ್ತಿರುವುದು ಕಂಡುಬಂದಿದೆ. ಆದ್ದರಿಂದ ಈ ಬಾರಿ ಅದೇ ಗುರಿ ನಿಗದಿ ಪಡಿಸಲಾಗಿದೆ.

ಬೀಜ ಕೊರತೆ ಇಲ್ಲ:  ಈ ಬಾರಿ ಬಿತ್ತನೆ ಬೀಜ ಕೊರತೆಯಾಗದಂತೆ ಮೊದಲೇ ಸಂಗ್ರಹಿಸಿ ಶೇ.90ರಷ್ಟನ್ನು ಈಗಾಗಲೇ ರೈತರಿಗೆ ವಿತರಿಸಲಾಗಿದೆ. ಎಂಒ-4ಗೆ ಹೆಚ್ಚು ಬೇಡಿಕೆಯಿದ್ದು, ಉಳಿದಂತೆ ಜಯ, ಜ್ಯೋತಿ ತಳಿಯೂ ಲಭ್ಯವಿದೆ. ರಸಗೊಬ್ಬರವೂ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹವಿದ್ದು, ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಈ ವೇಳೆಗಾಗಲೇ ಒಂದು ಹಂತದ ಗದ್ದೆಯ ಕೆಲಸ ಮುಗಿದಿತ್ತು. ಆದರೆ ಈ ಬಾರಿ ಮಳೆ ಆರಂಭವೇ ತಡವಾಗಿದೆ. ಉಳುಮೆ ಮಾಡುವಷ್ಟು ನೀರು ಗದ್ದೆಯಲ್ಲಿ ನಿಂತಿಲ್ಲ. ಭತ್ತದ ಬದಲು ತರಕಾರಿ ಬೆಳೆಯುವ ಕುರಿತು ಚಿಂತನೆ ನಡೆಸುತ್ತಿದ್ದೇನೆ.
– ರಘುನಾಥ ಶೆಟ್ಟಿ ಇರಾ, ಕೃಷಿಕ

ಸಾಮಾನ್ಯವಾಗಿ ಮೃಗಶಿರ ನಕ್ಷತ್ರದ ಅಂತ್ಯದ ವೇಳೆ ಬಿತ್ತನೆ ಆರಂಭವಾಗುತ್ತದೆ. ಆದರೆ ಈ ಬಾರಿ ಆರ್ದ್ರಾ ನಕ್ಷತ್ರಾ ಆರಂಭವಾದರೂ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಶೇ.10ರಷ್ಟು ಮಂದಿ ಬಯಲು ಗದ್ದೆ ಇರುವವರು ಮಾತ್ರ ಉಳುಮೆ-ಬಿತ್ತನೆ ಆರಂಭಿಸಿದ್ದಾರೆ. ಇನ್ನು ಕೆಲವರು ಪಂಪ್‌ನಲ್ಲಿ ನೀರು ಹಾಯಿಸಿ ಉಳುಮೆ ಮಾಡುತ್ತಿದ್ದಾರೆ.
– ಧನಕೀರ್ತೀ ಬಲಿಪ, ಕೃಷಿಕ ಮೂಡುಬಿದಿರೆ

ಜಿಲ್ಲೆಯ ಕೆಲವು ಭಾಗಗಳಲ್ಲಿ ಬಿತ್ತನೆ ಆರಂಭವಾಗಿದೆ. ಮುಂಗಾರು ಹಂಗಾಮಿನಲ್ಲಿ ಆ.15ರ ವರೆಗೂ ಭತ್ತದ ಕಾರ್ಯಚಟುವಟಿಕೆ ನಡೆಯುತ್ತದೆ. ಪ್ರಸ್ತುತ ಮಳೆ ಕಡಿಮೆಯಾಗಿರುವುದರಿಂದ ನಾಟಿ ಕಾರ್ಯದ ಮೇಲೆ ನೇರ ಪರಿಣಾಮ ಬೀರದು. ಬಿತ್ತನೆ ಬೀಜ, ಗೊಬ್ಬರವನ್ನು ರೈತ ಸಂಪರ್ಕ ಕೇಂದ್ರದ ಮೂಲಕ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.
– ಡಾ.ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ

Leave a Reply

Your email address will not be published. Required fields are marked *