ಭತ್ತ ಬೆಳೆಗೆ ಕಾಡುತ್ತಿದೆ ರೋಗಭೀತಿ

ಅನ್ಸಾರ್ ಇನೋಳಿ ಉಳ್ಳಾಲ
ಅವರ ಕುಟುಂಬ ಕೃಷಿ ಮೂಲದ್ದು. ತಂದೆ ಕಷ್ಟಪಟ್ಟು ಮಾಡಿಟ್ಟ ಕೃಷಿ ಆದಾಯದಲ್ಲಿ ಬದುಕುತ್ತಿರುವ ಕುಟುಂಬಕ್ಕೆ ಭತ್ತ ಬೆಳೆಯುವ ಕನಸು. ಇದಕ್ಕಾಗಿ ಮಳೆಗಾಲ ಬಳಿಕ ಮೂರು ಲಕ್ಷ ರೂ. ಖರ್ಚು ಮಾಡಿ, ಬೀಜ ಬಿತ್ತಿಯೂ ಆಗಿದೆ. ಆದರೆ ರೋಗಭೀತಿ ಎದುರಾಗಿದ್ದು, ಕುಟುಂಬಕ್ಕೆ ನುಂಗಲಾರದ ತುತ್ತಾಗಿದೆ.

ಇದು ಮಂಗಳೂರು ತಾಲೂಕಿನಿಂದ 30 ಕಿ.ಮೀ. ದೂರದಲ್ಲಿರುವ ಪಾವೂರು ಗ್ರಾಮದ ರೈತನೋರ್ವನ ಕಥೆ. ಮಲಾರ್ ಅಚ್ಚುಗುರಿ ಬಾಂಬೈಲ್ ಎನ್ನುವುದು ಕಲ್ಲುಗಳಿಂದ ಆವೃತ್ತವಾಗಿರುವ ಅತ್ಯಂತ ಇಳಿಜಾರು ಪ್ರದೇಶ. ಇಲ್ಲಿ ವಾಸವಿದ್ದ ಡೆನಿಸ್ ಲೋಬೊ ಸಾಧ್ಯವಾದಷ್ಟು ಮಟ್ಟಿಗೆ ಜಮೀನು ಸಮತಟ್ಟುಗೊಳಿಸಿ ತೋಟ ನಿರ್ಮಿಸಿದ್ದಲ್ಲದೆ ಸಣ್ಣ ಜಮೀನನ್ನು ಗದ್ದೆಯಾಗಿ ಪರಿವರ್ತಿಸಿದ್ದರು. ಇತರ ತರಕಾರಿ ಬೆಳೆ ಮೂಲಕ ಕುಟುಂಬ ನಿರ್ವಹಿಸಿದ್ದರು. ಕ್ರಮೇಣ ನೀರಿನ ಸಮಸ್ಯೆಯಿಂದಾಗಿ ಗದ್ದೆಯೂ ತೋಟವಾಗಿ ಮಾರ್ಪಾಡಾಗಿದ್ದು, ತರಕಾರಿ ಕೃಷಿ ಮಳೆಗಾಲಕ್ಕೆ ಮಾತ್ರ ಸೀಮಿತವಾಯಿತು.

ಮುಂದುವರಿದ ಮಗನ ಪ್ರಯತ್ನ: 13 ವರ್ಷಗಳ ಹಿಂದೆ ಡೆನಿಸ್ ಲೋಬೊ ನಿಧನರಾದ ಬಳಿಕ ಅವರ ಮಗ ವಿಲಿಯಂ ಮಾರ್ಕ್ ಲೋಬೊ ಪತ್ನಿ ಜತೆಗೂಡಿ ಕೃಷಿ ಕೆಲಸ ಮುಂದುವರಿಸಿದರು. ತೆಂಗು, ಅಡಕೆ, ಬಾಳೆ ಮಾತ್ರವಲ್ಲದೆ ಮಳೆಗಾಲದಲ್ಲಿ ತರಕಾರಿ ಬೆಳೆಯಲ್ಲಿ ಸಿಗುವ ಆದಾಯದಿಂದ ಜೀವನ ಕಂಡುಕೊಂಡರು. ತಂದೆ ಮಾಡಿಟ್ಟ ತೋಟ ನಿರ್ವಹಿಸುವ ಬದಲು ಏನಾದರೂ ಹೊಸತನ ಮಾಡಬೇಕೆಂಬ ತುಡಿತ ಮಾರ್ಕ್ ಲೋಬೊ ಅವರದ್ದು. ತಮ್ಮಲ್ಲಿರುವ ಆರು ಎಕರೆ ಜಮೀನಿನಲ್ಲಿ ಪಾಳುಬಿದ್ದ ಗುಡ್ಡ ಸಮತಟ್ಟುಗೊಳಿಸಿ ಗದ್ದೆ ನಿರ್ಮಿಸುವ ಸಾಹಸಕ್ಕೆ ಕೈ ಹಾಕಿದರು. ಅದಕ್ಕಾಗಿ ಮನೆಯಿಂದ ಎರಡು ಕಿ.ಮೀ. ಎತ್ತರದಲ್ಲಿರುವ ಮುಖ್ಯ ರಸ್ತೆಯಿಂದ ತಮ್ಮ ಜಮೀನಿನ ತನಕ ರಸ್ತೆ ನಿರ್ಮಿಸಿ ಗದ್ದೆಗಾಗಿ ಒಂದು ಎಕರೆ ಜಮೀನು ಸಮತಟ್ಟುಗೊಳಿಸಿದರು. ಎರಡು ತಿಂಗಳ ಹಿಂದೆ ಟ್ರಾೃಕ್ಟರ್ ಬಳಸಿ ಸಂಪೂರ್ಣ ಸಾವಯವ ಗೊಬ್ಬರ ಬಳಸಿ ಭತ್ತ ಬೀಜ ಬಿತ್ತಿದ್ದು, ಇದಕ್ಕಾಗಿ ಬರೋಬ್ಬರಿ ಮೂರು ಲಕ್ಷ ರೂ. ಖರ್ಚು ಮಾಡಿದ್ದಾರೆ. ಎಲ್ಲ ರೈತರು ಮಳೆಗಾಲದಲ್ಲಿ ಗದ್ದೆ ಕೆಲಸ ಮಾಡಿದರೆ ಮಾರ್ಕ್ ಲೋಬೊ ಅವರು ಮಳೆಗಾಲ ಮುಗಿದ ಬಳಿಕ ಗದ್ದೆ ನಿರ್ಮಿಸಿ ಸಾಹಸ ಮಾಡಿದ್ದಾರೆ.

ರೋಗಭೀತಿಯಲ್ಲಿ ಭತ್ತ ಬೆಳೆ!: ಜ್ಯೋತಿ ತಳಿಯನ್ನು ಬಿತ್ತನೆ ಮಾಡಲಾಗಿದ್ದು, ಎರಡು ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಿಡಗಳು ಮೇಲಕ್ಕೆ ಬರದಿದ್ದು, ರೋಗಭೀತಿ ಕಾಡುತ್ತಿದೆ. ಆದರೂ ದೇವರ ಮೇಲೆ ಭಾರ ಹಾಕಿರುವ ಮಾರ್ಕ್ ಲೋಬೊ, ನೇಜಿ ನಾಟಿಯತ್ತ ಚಿತ್ತ ಇಟ್ಟಿದ್ದಾರೆ. ಕಾರ್ಮಿಕರ ಆಶ್ರವಿಲ್ಲದೆ ಪತ್ನಿಯ ಸಹಕಾರದಲ್ಲೇ ಕೃಷಿ ಕೆಲಸ ಮಾಡುತ್ತಿದ್ದು, ಸರ್ಕಾರದ ಸವಲತ್ತಿನ ಬಗ್ಗೆ ಇವರಲ್ಲಿ ಮಾಹಿತಿಯಿಲ್ಲ. ಅಧಿಕಾರಿಗಳು ಮಾರ್ಗದರ್ಶನ ನೀಡಿದಲ್ಲಿ ಉತ್ತಮ ರೀತಿಯಲ್ಲಿ ಭತ್ತ ಕೃಷಿ ನಿರ್ವಹಿಸುವ ಇರಾದೆ ಹೊಂದಿದ್ದಾರೆ.

ಕೈಕೊಡುತ್ತಿದೆ ಕೊಳವೆ ಬಾವಿ: ಕೃಷಿ ಕೆಲಸಕ್ಕೆ ನೀರು ಮುಖ್ಯ ಪಾತ್ರ ವಹಿಸುತ್ತದೆ. ಆದರೆ ಮಾರ್ಕ್ ಲೋಬೊ ಅವರ ಜಮೀನಿನಲ್ಲಿ ನೀರಿನ ಮೂಲ ಮೇಲ್ಮಟ್ಟದಲ್ಲಿ ಇಲ್ಲದ ಕಾರಣ ತೋಡಿಸಿದ ಆರು ಕೊಳವೆ ಬಾವಿಗಳು ಕೈಕೊಟ್ಟಿವೆ. ಏಳನೇ ಕೊಳವೆ ಬಾವಿಯಲ್ಲಿ ನೀರಿದ್ದರೂ ಕೆಲವು ತಿಂಗಳಿಂದ ಒರತೆ ಕಡಿಮೆಯಾಗಿದೆ. ಕೊಳವೆಬಾವಿ ನೀರನ್ನೇ ನಂಬಿ ಗದ್ದೆ ನಿರ್ಮಿಸಿರುವ ಅವರಿಗೆ ನೀರಿನ ಒರತೆ ಕಡಿಮೆಯಾಗಿರುವುದು ಚಿಂತೆಗೀಡು ಮಾಡಿದೆ. ಮುಂದೆ ಕೊಳವೆ ಬಾವಿ ಬದಲು ಕೆರೆ ನಿರ್ಮಿಸುವ ಕನಸು ಕಾಣುತ್ತಿದ್ದಾರೆ. ಇವರ ಕನಸು ನನಸಾಗಬೇಕಾದರೆ ಕೃಷಿ ಮತ್ತು ತೋಟಗಾರಿಕಾ ಇಲಾಖಾಧಿಕಾರಿಗಳ ಮಾರ್ಗದರ್ಶನ ಅನಿವಾರ್ಯ.

ಕಳೆದ 18 ವರ್ಷಗಳಿಂದ ಕೃಷಿಯಿಂದ ಜೀವನ ನಿರ್ವಹಿಸುತ್ತಿದ್ದೇವೆ. ಈ ವರ್ಷ ಮಳೆಗಾಲ ಮುಗಿದ ಬಳಿಕ ಗುಡ್ಡ ಸಮತಟ್ಟುಗೊಳಿಸಿ ಗದ್ದೆ ಮಾಡಿದ್ದೇನೆ. ಆದರೆ ಭತ್ತದ ಗಿಡಗಳಿಗೆ ರೋಗ ಬಂದಂತೆ ಕಾಣುತ್ತಿದೆ. ಕೊಳವೆ ಬಾವಿಯಲ್ಲಿ ನೀರಿನ ಒರತೆಯೂ ಕಡಿಮೆಯಾಗಿದೆ.
| ವಿಲಿಯಂ ಮಾರ್ಕ್ ಲೋಬೊ ಕೃಷಿಕ

ಸರ್ಕಾರ ಕೃಷಿಕರಿಗೆ ಸಾಕಷ್ಟು ಅನುದಾನ ನೀಡುತ್ತಿದ್ದು ಮಾರ್ಕ್ ಲೋಬೊ ಪ್ರಯೋಜನ ಪಡೆಯಬೇಕಾಗಿದೆ. ಮಳೆಗಾಲ ಮುಗಿದ ಬಳಿಕ ಕೊಳವೆ ಬಾವಿಯ ನೀರು ನಂಬಿ ಗದ್ದೆ ನಿರ್ಮಾಣ ಮಾಡಿರುವ ಅವರ ಧೈರ್ಯ ಮೆಚ್ಚತಕ್ಕದ್ದು. ಕೃಷಿ ಅಧಿಕಾರಿಗಳು ಮಾರ್ಗದರ್ಶನ ನೀಡುವ ಮೂಲಕ ಬೆಂಬಲಕ್ಕೆ ನಿಲ್ಲಬೇಕಿದೆ.
| ವಿನ್ಸೆಂಟ್ ಡಿಸೋಜ ಬೋಳಿಯಾರ್, ಕೃಷಿಕ