ಅತಿವೃಷ್ಟಿ ನಡುವೆಯೂ ಭತ್ತ ಬೆಳೆ ಸಮೃದ್ಧ

ಭರತ್ ಶೆಟ್ಟಿಗಾರ್ ಮಂಗಳೂರು
ಉಭಯ ಜಿಲ್ಲೆಗಳಲ್ಲಿ ಅತಿವೃಷ್ಟಿ ನಡುವೆಯೂ ಈ ಬಾರಿ ಭತ್ತದ ಬೆಳೆ ಉತ್ತಮವಾಗಿ ಬಂದಿದೆ. ಬೆಳೆಗೆ ಅನುಗುಣವಾಗಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ ಕೃಷಿಕರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 28,000 ಹೆಕ್ಟೇರ್ ಗುರಿ ಇದ್ದು, 25,125 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಉಡುಪಿಯಲ್ಲಿ 44 ಸಾವಿರ ಹೆಕ್ಟೇರ್ ಗುರಿಯಲ್ಲಿ 42,547 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ದ.ಕ ಜಿಲ್ಲೆಯಲ್ಲಿ ಶೇ.80 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ.96.7 ಸಾಧನೆಯಾಗಿದೆ.
ಎಂಒ4, ಜಯಾ, ಜ್ಯೋತಿ, ಉಮಾ ಭತ್ತ ತಳಿ ರೈತರು ಆಯ್ಕೆ ಮಾಡಿದ್ದು, ರಸಗೊಬ್ಬರ ಕೊರತೆ ಇರಲಿಲ್ಲ. ಆದರೆ ಭಾರಿ ಮಳೆಯಿಂದಾಗಿ ದ.ಕ. ಜಿಲ್ಲೆಯಲ್ಲಿ 232.84 ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 154 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗೆ ಹಾನಿಯಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 182.74 ಹೆಕ್ಟೇರ್ ಪ್ರದೇಶಕ್ಕೆ ಹೆಕ್ಟೇರ್‌ಗೆ 6800 ರೂ.ನಂತೆ 12.03 ಲಕ್ಷ ರೂ. ಪರಿಹಾರ ನೀಡಲು ತಹಸೀಲ್ದಾರ್ ಕಚೇರಿಗೆ ವರದಿ ಕಳುಹಿಸಲಾಗಿದೆ. ಉಡುಪಿಯಲ್ಲಿ 10.4 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ.
ಉಭಯ ಜಿಲ್ಲೆಗಳಲ್ಲಿ ಮಳೆ-ನೆರೆಯಿಂದ ಬೆಳೆ ಹಾನಿ ಅನುಭವಿಸಿದ ರೈತರು ಮತ್ತೆ ಬೆಳೆ ಮಾಡಲು ಮುಂದಾಗಿಲ್ಲ. ಇದು ಶೇ.100 ಸಾಧನೆಗೆ ಅಡ್ಡಿಯಾಗಿದೆ. ಮತ್ತೆ ಮಳೆಯಾಗಿ ಹಾನಿ ಸಂಭವಿಸಬಹುದು ಎಂಬ ಭಯ ರೈತರಲ್ಲಿದೆ. ಮಳೆ ಉತ್ತಮವಾಗಿರುವುದರಿಂದ ಹಿಂಗಾರಿನಲ್ಲಿ ನೀರಿಗೆ ಸಮಸ್ಯೆಯಾಗದು, ಹಿಂಗಾರಿನಲ್ಲಿ ಬೆಳೆ ತೆಗೆಯಬಹುದು ಎಂಬುದು ರೈತರ ಅಭಿಪ್ರಾಯ.

ವಾಡಿಕೆಗಿಂತ ಹೆಚ್ಚು ಮಳೆ: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ದ.ಕ. ಜಿಲ್ಲೆಯಲ್ಲಿ ಜನವರಿಯಿಂದ ಆಗಸ್ಟ್ ವರೆಗಿನ ವಾಡಿಕೆ ಮಳೆ 3249.6 ಮಿಮೀ. ಈ ಬಾರಿ 4114.7 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ 865.1 ಮಿ.ಮೀ ಅಧಿಕ. ಆಗಸ್ಟ್ ತಿಂಗಳ ವಾಡಿಕೆ ಮಳೆ 856.4 ಮಿ.ಮೀ. ಈ ಬಾರಿ ಆ.27ರ ವರೆಗೆ 1142.1 ಮಿ.ಮೀ ಮಳೆಯಾಗಿದೆ.

 

ಭತ್ತದ ಗದ್ದೆಯಲ್ಲಿ ಒಂದೆರಡು ದಿನ ಮಳೆ ನೀರು ನಿಂತು ಹರಿದರೆ ಬೆಳೆಗೆ ಲಾಭವಾಗುತ್ತದೆ. ಹೆಚ್ಚು ದಿನ ನೀರು ನಿಲ್ಲುವುದು ಅಪಾಯ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಈ ಬಾರಿ ಉತ್ತಮ ಬೆಳೆ ಬಂದಿದ್ದು, ಒಳ್ಳೆಯ ಫಸಲಿನ ನಿರೀಕ್ಷೆಯಿದೆ.
ಡಾ. ಕೆಂಪೇಗೌಡ, ಜಂಟಿ ನಿರ್ದೇಶಕ, ಕೃಷಿ ಇಲಾಖೆ, ಉಡುಪಿ ಜಿಲ್ಲೆ

 

ದ.ಕ. ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಬೆಳೆ ಬಂದಿದೆ. ಹಾನಿಯಾದ ಪ್ರದೇಶಗಳ ಸರ್ವೇ ನಡೆಸಲಾಗಿದ್ದು, ಜಿಲ್ಲೆಯಲ್ಲಿ 218 ರೈತರು ಬೆಳೆದ ಭತ್ತದ ಬೆಳೆ ಫಸಲಿಗೆ ಮುನ್ನವೇ ನಾಶವಾಗಿದೆ. ಪರಿಹಾರ ನೀಡಲು ತಹಸೀಲ್ದಾರ್ ಕಚೇರಿಗೆ ವರದಿ ಕಳುಹಿಸಲಾಗಿದೆ.
ವೀಣಾ, ತಾಂತ್ರಿಕ ಅಧಿಕಾರಿ, ಕೃಷಿ ಜಂಟಿ ನಿರ್ದೇಶಕರ ಕಚೇರಿ ದ.ಕ.

 

ಈ ಬಾರಿ ಬೇಗನೆ ಮಳೆ ಆರಂಭವಾಗಿದ್ದು, ಭತ್ತದ ಬೆಳೆಗೆ ಪೂರಕವಾಗಿತ್ತು. ಕಳೆದ ವರ್ಷದಂತೆ ಉತ್ತಮ ಬೆಳೆಯಾಗಿದ್ದು, ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿದ್ದೇವೆ.
ಡೊಂಬಯ್ಯ ಗೌಡ, ಮಡಂತ್ಯಾರು, ಕೃಷಿಕ