ಐದನೇ ಬಾರಿ ಮುಳುಗಿದ ಹೆಬ್ಬಾಳೆ ಸೇತುವೆ

ಕಳಸ: ಹೋಬಳಿಲ್ಲಿ ಪುನರ್ವಸು ಮಳೆ ಜೋರಾಗಿದ್ದು, ಭದ್ರಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಬುಧವಾರ ಬೆಳಗ್ಗೆಯಿಂದ ಮಳೆ ಬಿರುಸುಗೊಂಡಿದ್ದರಿಂದ ಕಳಸ-ಹೊರನಾಡು ಸಂಪರ್ಕ ಕಲ್ಪಿಸುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮತ್ತೆ ಮುಳುಗಡೆಯಾಗಿದೆ.

ಸಂಚಾರ ಅಸ್ತವ್ಯಸ್ತವಾಗಿದ್ದು, ಸಂಜೆವರೆಗೂ ಸೇತುವೆ ದಾಟಲಾಗದೆ ಪ್ರವಾಸಿಗರು, ಗ್ರಾಮಸ್ಥರು ತೊಂದರೆ ಅನುಭವಿಸಿದರು. ಕೆಲ ಪ್ರಯಾಣಿಕರು ಹಳುವಳ್ಳಿಯಿಂದ ಬದಲಿ ಮಾರ್ಗದಲ್ಲಿ ಪ್ರಯಾಣ ಬೆಳೆಸಿದರು. 25 ದಿನಗಳ ಅವಧಿಯಲ್ಲಿ ಐದು ಬಾರಿ ಈ ಸೇತುವೆ ಮುಳುಗಡೆಯಾಗಿ ದಾಖಲೆ ಬರೆಯಿತು. ಮಳೆಯಂದಾಗಿ ಕಳಸ ಹೊರನಾಡಿಗೆ ಬಂದಿರುವ ಪ್ರವಾಸಿಗರು ಮಳೆಯ ಅಬ್ಬರದಿಂದ ಕಂಗೆಟಿದ್ದಾರೆ.

ಕಳಸ-ಕಳಕ್ಕೂಡು ರಸ್ತೆ ಸಂಪೂರ್ಣ ಶಿಥಿಲಗೊಂಡು ರಸ್ತೆ ಮೇಲೆ ಒಂದು ಅಡಿ ನೀರು ನಿಂತಿದೆ. ಕಳಕ್ಕೋಡು, ಹೊಸೂರು, ಅನ್​ವುಗೆ, ಕಾರ್ಲೆ ಮುಂತಾದ ಗ್ರಾಮಗಳಿಗೆ ತೆರಳುವ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಾರ್ಲೆ ಗ್ರಾಮದಲ್ಲಿ ಹರಿಯುವ ಹಳ್ಳವೊಂದಕ್ಕೆ ಸೇತುವೆ ಇಲ್ಲದ್ದರಿಂದ ಗ್ರಾಮಸ್ಥರು ಹಳ್ಳ ದಾಟಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾರ್ಲೆಯಲ್ಲಿ ಹಳ್ಳವೊಂದಕ್ಕೆ ಮೂರು ವರ್ಷಗಳ ಹಿಂದೆ ಕಟ್ಟಿದ್ದ ಸೇತುವೆ ಶಿಥಿಲಗೊಂಡು ಕೊಚ್ಚಿಹೋಗುವ ಸ್ಥಿತಿಯಲ್ಲಿದೆ.

ನದಿ ಆಸುಪಾಸಿನ ಅಡಕೆ ತೋಟಗಳು, ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿದೆ. ಬಹುತೇಕ ನದಿಯ ಅಂಚಿನ ತಡೆಗೋಡೆಗಳು ನೀರಿನಲ್ಲಿ ಕೊಚ್ಚಿ ಹೋಗಿ ಅಪಾರ ಪ್ರಮಾಣದ ಅಡಕೆ ಗಿಡಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಪದೇಪದೆ ವಿದ್ಯುತ್ ಕೈಕೊಡುತ್ತಿರುವುದರಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ.