ಸರ್ಕಾರದ ಸವಲತ್ತು ಕೊಡಿಸುವುದಾಗಿ ಮುಗ್ದರಿಗೆ ವಂಚನೆ

ತೀರ್ಥಹಳ್ಳಿ: ಪ್ರಧಾನಮಂತ್ರಿ ಕೌಶಲ ಯೋಜನೆ ಹೆಸರಿನಲ್ಲಿ ಸರ್ಕಾರದ ಸವಲತ್ತುಗಳನ್ನು ಕೊಡಿಸುವ ನೆಪದಲ್ಲಿ ಮುಗ್ದರನ್ನು ವಂಚಿಸಿ ಲಕ್ಷಾಂತರ ರೂ ಲಪಟಾಯಿಸಿ ಪರಾರಿಯಾದ ಘಟನೆ ಒಂದೂವರೆ ತಿಂಗಳ ಬಳಿಕ ಬೆಳಕಿಗೆ ಬಂದಿದೆ.

ಆರೋಪಿ ಹೊಸದುರ್ಗದವನಾಗಿದ್ದು ಒಂದು ವರ್ಷದ ಹಿಂದೆ ಪಟ್ಟಣದ ಆಗುಂಬೆ ವೃತ್ತದಲ್ಲಿರುವ ಕಾಮತ್ ಕಟ್ಟಡ ಸಂಕೀರ್ಣದಲ್ಲಿ ಮಾಸಿಕ 5 ಸಾವಿರ ರೂ. ಬಾಡಿಗೆಗೆ ಮಳಿಗೆಯನ್ನು ಪಡೆದು ಪ್ರಧಾನಮಂತ್ರಿ ಕೌಶಲ ಯೋಜನೆ ಹೆಸರಿನಲ್ಲಿ ಜನರಿಗೆ ನಂಬಿಕೆ ಬರುವಂತೆ ಕೇಂದ್ರವನ್ನು ವ್ಯವಸ್ಥಿತವಾಗಿ ತೆರೆದಿದ್ದ.

ಪಹಣಿ, ಆಧಾರ್, ರೇಶನ್ ಕಾರ್ಡ್, ಮತದಾರರ ಚೀಟಿ ಮಾಡಿಕೊಡುವುದರ ಜತೆಗೆ ಸರ್ಕಾರದಿಂದ ಸಬ್ಸಿಡಿ ಸಾಲ, ಮನೆ ಮತ್ತು ನಿವೇಶನಗಳ ಖರೀದಿಗೆ ಆರ್ಥಿಕ ನೆರವು, ಉದ್ಯೋಗ ಕೊಡಿಸುವುದಾಗಿ ಜನರಿಂದ ಸಾವಿರಾರು ರೂ. ಪಡೆದಿದ್ದನೆಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.

ಈತನಿಂದ ವಂಚಿತರಾದ ಕುಂದಾಪುರದ ವ್ಯಕ್ತಿಯೊಬ್ಬರು ತರಾಟೆ ತೆಗೆದುಕೊಂಡಾಗ ಬಣ್ಣ ಬಯಲಾಗಿದೆ. ಕುಂದಾಪುರದಲ್ಲಿ ಕೌಶಲ ಕೇಂದ್ರ ಮಂಜೂರು ಮಾಡಿಸಿ ಕೊಡುವುದಾಗಿ ಅವರಿಂದ 20 ಸಾವಿರ ಹಣ ಪಡೆದಿದ್ದ. ಹಣ ಕೊಡದಿದ್ದರೆ ಕಂಪ್ಯೂಟರ್ ಎತ್ತಿಕೊಂಡು ಹೋಗುವುದಾಗಿ ಗಲಾಟೆ ಮಾಡಿದಾಗ ಕಟ್ಟಡ ಮಾಲೀಕರ ಕಾಲು ಹಿಡಿದು ಕಟ್ಟಡಕ್ಕೆ ಮುಂಗಡ ನೀಡಿದ್ದ ಹಣದಲ್ಲಿ 20 ಸಾವಿರ ರೂ. ಪಡೆದು ಕುಂದಾಪುರದ ವ್ಯಕ್ತಿಗೆ ಹಿಂತಿರುಗಿಸಿದ್ದಾನೆ.

ಆರೋಪಿಯ ಹಗರಣ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಕಟ್ಟಡ ಮಾಲೀಕ ಮಹೇಶ್ ಕಾಮತ್, ಮಳಿಗೆಯನ್ನು ತೆರವುಗೊಳಿಸುವಂತೆ ತಾಕೀತು ಮಾಡಿದ್ದರು. ಹೀಗಾಗಿ ಹಣ ನೀಡಿದವರು ಕಂಪ್ಯೂಟರ್, ಮೇಜು ಕುರ್ಚಿ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಯುವತಿಯರಿಗೂ ವೇತನ ನೀಡಿಲ್ಲ. ಇಷ್ಟಾದರೂ ಈ ವರೆಗೂ ಈ ಬಗ್ಗೆ ಯಾರೂ ಪೋಲಿಸರಿಗೆ ದೂರು ನೀಡದಿರುವುದು ವಿಶೇಷ.