ದಯಾಮರಣ ಕೋರಿ ರೈತರ ಪಾದಯಾತ್ರೆ

ಪಾಂಡವಪುರ: ಗೊರೂರಿನ ಅಣೆಕಟ್ಟೆ ನಿರ್ಮಾಣಕ್ಕೆ ಜಮೀನು ನೀಡಿದ ರೈತರಿಗೆ ಸರ್ಕಾರ ಪರ್ಯಾಯವಾಗಿ ನೀಡಿರುವ ಜಮೀನಿನಲ್ಲಿ ವ್ಯವಸಾಯ ಮಾಡಲು ಅರಣ್ಯಾಧಿಕಾರಿಗಳು ಅವಕಾಶ ನೀಡದ ಕಾರಣ ಬದುಕುವ ಅವಕಾಶ ಕ್ಷೀಣಿಸುತ್ತಿದೆ. ಹೀಗಾಗಿ ದಯಾ ಮರಣ ಕಲ್ಪಿಸುವಂತೆ ಒತ್ತಾಯಿಸಿ ನಿರಾಶ್ರಿತ ಕುಟುಂಬದ ಸದಸ್ಯರು ರಾಜಭವನಕ್ಕೆ ಪಾದಯಾತ್ರೆ ನಡೆಸಿದರು.

ಸರ್ಕಾರ 1976 ರಲ್ಲಿ ಗೊರೂರು ಡ್ಯಾಂ ನಿರ್ಮಾಣಕ್ಕೆ ರೈತರಿಂದ ಜಮೀನು ಸ್ವಾಧೀನಪಡಿಸಿಕೊಂಡು 1992 ರಲ್ಲಿ ಇದಕ್ಕೆ ಪರ್ಯಾಯವಾಗಿ ಕೆಆರ್‌ಪೇಟೆ ತಾಲೂಕು ಬೆಳ್ಳಿಬೆಟ್ಟ ಕಾವಲ್ ಪ್ರದೇಶದಲ್ಲಿ ಜಮೀನು ಕಳೆದುಕೊಂಡ ರೈತರಿಗೆ ತಲಾ ನಾಲ್ಕು ಎಕರೆ ಜಮೀನು ಹಾಗೂ ಮನೆ ನಿರ್ಮಾಣಕ್ಕೆ 26 ಎಕರೆ ಭೂಮಿ ಮಂಜೂರು ಮಾಡಿ ದಾಖಲೆಗಳನ್ನು ನೀಡಿತ್ತು.

ಆದರೆ ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದೆ. ಹೀಗಾಗಿ ಈ ಪ್ರದೇಶದಲ್ಲಿ ಯಾರೂ ಅತಿಕ್ರಮ ಪ್ರವೇಶ ಮಾಡಬಾರದು ಎಂದು ಅರಣ್ಯಾಧಿಕಾರಿಗಳು ತಾಕೀತು ಮಾಡಿ ಈ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿತು. ಜತೆಗೆ ರೈತರ ಮೇಲೆ ಕೇಸು ದಾಖಲಿಸಿರುವ ಪರಿಣಾಮ ಬೇಸತ್ತ ನಿರಾಶ್ರಿತ ರೈತರು ದಯಾ ಮರಣ ಕೋರಿ ಶನಿವಾರ ಕೆಆರ್‌ಪೇಟೆಯಿಂದ ಪಾದಯಾತ್ರೆ ಹೊರಟು ಇಂದು ಪಾಂಡವಪುರ ತಾಲೂಕಿನ ಚಿನಕುರಳಿಗೆ ಆಗಮಿಸಿದ್ದರು.

ಈ ವೇಳೆ ರೈತ ಮುಖಂಡ ಮಂಜೇಗೌಡ ಮಾತನಾಡಿ, ಸರ್ಕಾರ ನೀಡಿರುವ ಜಮೀನಿನಲ್ಲಿ ಬದುಕು ಕಟ್ಟಿಕೊಳ್ಳಲು ಎರಡು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ಆದರೆ ಅಧಿಕಾರಿಗಳು ಮತ್ತು ಪ್ರಭಾವಿ ರಾಜಕಾರಣಿಗಳು ನಮ್ಮ ಹೋರಾಟವನ್ನು ಹತ್ತಿಕ್ಕಿ ಭೂಮಿ ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ಶನಿವಾರ ಇದಕ್ಕಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನಾ ವೇಳೆ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳು ನಂತರ 144 ಸೆಕ್ಷನ್ ಜಾರಿಗೊಳಿಸಿ ನಮ್ಮನ್ನು ಬಂಧಿಸಿದರು. ಅದೇ ದಿನ ತಡರಾತ್ರಿ ಬಿಡುಗಡೆ ಮಾಡಿದರು. ಬಂಧಿಸುವ ವೇಳೆ ಪೊಲೀಸರು ಹೆಂಗಸರು ಮಕ್ಕಳನ್ನು ಲೆಕ್ಕಿಸದೆ ನಮ್ಮ ಗುಡಿಸಲುಗಳಿಗೆ ನುಗ್ಗಿ ದಾಂಧಲೆ ನಡೆಸಿದರು. ಅಲ್ಲದೇ ಕೈಗೆ ಸಿಕ್ಕಿದ ಬೆಲೆ ಬಾಳುವ ಪದಾರ್ಥಗಳನ್ನು ಪೊಲೀಸರು ಒಯ್ದಿದ್ದಾರೆ ಎಂದು ದೂರಿದರು.

ಶಾಸಕರ ಕೈವಾಡ : ಜಮೀನು ಕಳೆದುಕೊಂಡ ರೈತರಿಗೆ ನೀಡಿರುವ ಬೆಲೆ ಬಾಳುವ ಜಮೀನು ಹಾಗೂ ನಿವೇಶನವನ್ನು ಕಬಳಿಸುವ ಹುನ್ನಾರ ಅಡಗಿದ್ದು, ಇದರಲ್ಲಿ ಶಾಸಕ ಕೆ.ಸಿ.ನಾರಾಯಣಗೌಡರ ಕೈವಾಡವಿದೆ. ಶಾಸಕರು ಅಧಿಕಾರಿಗಳ ಮುಖಾಂತರ ಈ ರೀತಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ನೋವಿಗೆ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಸ್ಪಂದಿಸುತ್ತಿಲ್ಲ. ಹೀಗಾಗಿ ಪಾದಯಾತ್ರೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ ಅವರಿಗೂ ಈ ಬಗ್ಗೆ ಮನವರಿಕೆ ಮಾಡಿದ ನಂತರ ರಾಜಭವನಕ್ಕೆ ತೆರಳುವುದಾಗಿ ನಿರಾಶ್ರಿತ ರೈತರು ಹೇಳಿದರು.