ಪಚ್ಚನಾಡಿ ನಿವಾಸಿಗಳ ಬದುಕು ಯಾತನೆ

ಹರೀಶ್ ಮೋಟುಕಾನ ಮಂಗಳೂರು

ಆಗಾಗ ಕಾಣಿಸಿಕೊಳ್ಳುವ ಬೆಂಕಿ, ದಟ್ಟ ಹೊಗೆ, ಗಬ್ಬು ವಾಸನೆ, ಸೊಳ್ಳೆ, ಬೀದಿ ನಾಯಿಗಳ ಕಾಟ, ಬಾವಿಯಲ್ಲಿ ಕಪ್ಪು ನೀರು, ಊಟ ಮಾಡಲಾಗದ ಸ್ಥಿತಿ, ಶ್ವಾಸಕೋಶ ಸಂಬಂಧಿ ರೋಗ ಭೀತಿ…

ಇದು ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನ ದುಷ್ಪರಿಣಾಮದಿಂದ ಮಂಗಳ ನಗರ, ಸಂತೋಷ್ ನಗರ, ಮಂದಾರ, ಕಂಜಿರಡಿ, ಪಚ್ಚನಾಡಿ ಗುಂಡಿ ಪರಿಸರದ ಸುಮಾರು 700ಕ್ಕೂ ಅಧಿಕ ಮನೆಗಳ 2500ಕ್ಕೂ ಅಧಿಕ ನಿವಾಸಿಗಳು ಪ್ರತಿ ನಿತ್ಯ ಯಾತನೆಯ ಬದುಕು ನಡೆಸುವಂತಾಗಿದೆ.

ಡಂಪಿಂಗ್ ಯಾರ್ಡ್‌ನಲ್ಲಿ ಆಗಾಗ ಬೆಂಕಿ ಹಾಗೂ ದಟ್ಟ ಹೊಗೆ ಕಾಣಿಸಿಕೊಳ್ಳುತ್ತದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ಉಸಿರಾಡಲು ಆಗದ ಸ್ಥಿತಿ ಉಂಟಾಗುತ್ತಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡರೆ ಅದನ್ನು ಶಮನ ಮಾಡಲು ಅಗ್ನಿಶಾಮಕದಳದ ವಾಹನಗಳು ಬಂದರೂ ಅಲ್ಲಿಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ ಪೂರ್ಣ ಪ್ರಮಾಣದಲ್ಲಿ ಬೆಂಕಿ ಶಮನ ಮಾಡಲು ಅಸಾಧ್ಯವಾಗಿದೆ.

ಎರಡು ತಿಂಗಳ ಹಿಂದೆ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಸಂದರ್ಭ ಇಲ್ಲಿನ ಬಹಳಷ್ಟು ಮಂದಿ ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ಹೋಗಿದ್ದರು. ಕುಡುಪು ದೇವಸ್ಥಾನದಲ್ಲೂ ಉಳಿದು ಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದರು ಎಂದು ಮಂಗಳ ನಗರ ನಿವಾಸಿ ರೀಟಾ ವಿಜಯವಾಣಿಗೆ ತಿಳಿಸಿದರು.

ಹಲವು ಶಾಲಾ-ಕಾಲೇಜು: ಪಚ್ಚನಾಡಿ ಡಂಪಿಂಗ್ ಯಾರ್ಡ್ ಪರಿಸರದಲ್ಲೇ ಎಸ್‌ಡಿಎಂ ಸಮಗ್ರ ಶಾಲೆ, ಐಟಿಐ ಕಾಲೇಜು, ಸಂತ ರೇಮಂಡ್ ಹೈಸ್ಕೂಲ್, ಕರಾವಳಿ ಕಾಲೇಜು, ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿವೆ. ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಾವಿರಾರು ಮಕ್ಕಳ ಆರೋಗ್ಯದ ಮೇಲೆ ಇಲ್ಲಿನ ದಟ್ಟ ಹೊಗೆ, ಗಬ್ಬು ವಾಸನೆ ದುಷ್ಪರಿಣಾಮ ಉಂಟು ಮಾಡುತ್ತಿದೆ ಎಂದು ಮಂದಾರ ನಿವಾಸಿ ರವೀಂದ್ರ ಭಟ್ ತಿಳಿಸಿದರು.

ಬಾವಿಯಲ್ಲೂ ಕಪ್ಪು ನೀರು: ಡಂಪಿಂಗ್ ಯಾರ್ಡ್‌ನಿಂದ ತಗ್ಗು ಪ್ರದೇಶದಲ್ಲಿ ಮಂದಾರ, ಕಂಜಿರಡಿಯಲ್ಲಿ ಅಡಕೆ, ತೆಂಗು ಕೃಷಿ ಇದೆ. ಡಂಪಿಂಗ್ ಯಾರ್ಡ್‌ನಿಂದ ಗಬ್ಬು ವಾಸನೆಯಿಂದ ಕೂಡಿದ ಕಪ್ಪು ನೀರು ಹರಿದು ಬರುತ್ತಿದೆ. ಇಲ್ಲಿನ ಬಾವಿಗಳಲ್ಲೂ ಕಪ್ಪು ನೀರು ತುಂಬಿ ಕೊಂಡಿದೆ. ಆದ್ದರಿಂದ ಇಲ್ಲಿನ ನೀರು ಕುಡಿಯಲು ಅಯೋಗ್ಯವಾಗಿದೆ. ಹದ್ದುಗಳು ಮಾಂಸದ ತುಂಡುಗಳನ್ನು ತಂದು ನೀರಿಗೆ ಹಾಕುತ್ತಿವೆ. ದನಗಳು ತ್ಯಾಜ್ಯ, ಪ್ಲಾಸ್ಟಿಕ್ ತಿಂದು ಸಾವನ್ನಪ್ಪುತ್ತಿವೆ ಎಂದು ಕುಂಜಿರಡಿ ನಿವಾಸಿ ನಾಗೇಶ್ ತಿಳಿಸಿದ್ದಾರೆ.

ಬಂಟ್ವಾಳದಿಂದ ತ್ಯಾಜ್ಯ: ಬಂಟ್ವಾಳ, ಉಳ್ಳಾಲ, ಸುರತ್ಕಲ್ ಮೊದಲಾದ ಕಡೆಯಿಂದ ಪಚ್ಚನಾಡಿಗೆ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಅಲ್ಲಿನ ಸ್ಥಳೀಯಾಡಳಿತ ಅಲ್ಲಿಯೇ ತ್ಯಾಜ್ಯ ಹಾಕಲು ಡಂಪಿಂಗ್ ಯಾರ್ಡ್ ಮಾಡಬೇಕು. ಕಸಾಯಿಖಾನೆಯಿಂದ ಮಾಂಸದ ತ್ಯಾಜ್ಯಗಳನ್ನು ತಂದು ಇಲ್ಲಿ ಹಾಕುತ್ತಾರೆ. ಇದರಿಂದ ಗಬ್ಬು ವಾಸನೆ ಬೀರುತ್ತಿದೆ. ರಸ್ತೆಯಲ್ಲೂ ತ್ಯಾಜ್ಯ ಚೆಲ್ಲುತ್ತಿದ್ದರು. ಪ್ರತಿಭಟನೆ ನಡೆಸಿದ ಬಳಿಕ ಒಂದಷ್ಟು ಕಡಿಮೆಯಾಗಿದೆ ಎಂದು ಸ್ಥಳೀಯ ನಿವಾಸಿ ವಿನೋದ್ ಶೆಟ್ಟಿ ತಿಳಿಸಿದ್ದಾರೆ.

ಪ್ರತಿ ದಿನ 350 ಟನ್ ತ್ಯಾಜ್ಯ ಡಂಪಿಂಗ್ ಯಾರ್ಡ್‌ಗೆ ಬಂದು ಬೀಳುತ್ತಿವೆ. ಅದನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವಲ್ಲಿ ಮಹಾನಗರಪಾಲಿಕೆ ವಿಫಲವಾಗಿದೆ. ಸುಧಾರಿತ ತಂತ್ರಜ್ಞಾನಗಳು ಬಂದಿದ್ದರೂ ಅದನ್ನು ಬಳಸಿಕೊಳ್ಳಲು ಪಾಲಿಕೆ ಮುಂದಾಗದಿರುವುದು ದುರಂತ. ಅನಗತ್ಯ ವಿಚಾರಗಳಿಗೆ ಕೋಟ್ಯಂತರ ರೂ. ಖರ್ಚು ಮಾಡುವ ಪಾಲಿಕೆ ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
|ರವೀಂದ್ರ ಭಟ್ ಮಂದಾರ ನಿವಾಸಿ

ಪಚ್ಚನಾಡಿ ಪರಿಸರದಲ್ಲಿ ವಾಸ ಮಾಡಲು ಅಸಾಧ್ಯವಾಗಿದೆ. ಜನರು ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗ ಭೀತಿಯಲ್ಲಿದ್ದಾರೆ. ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಇದರಿಂದ ಸಾರ್ವಜನಿಕರು ಓಡಾಡಲು ಕಷ್ಟವಾಗಿದೆ. ಕೆಲವೊಮ್ಮೆ ರಸ್ತೆ ಕಾಣದಷ್ಟು ಹೊಗೆ ಬರುತ್ತದೆ.
|ನಾಗೇಶ್ ಕಂಜಿರಡಿ ನಿವಾಸಿ

ಪಚ್ಚನಾಡಿ ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡುವ ಯಾವುದೇ ಪ್ರಸ್ತಾವನೆ ಮನಪಾದಲ್ಲಿಲ್ಲ. ಸುಧಾರಿತ ತಂತ್ರಜ್ಞಾನ ಬಳಸಿ ಶಾಶ್ವತ ಪರಿಹಾರ ಕಲ್ಪಿಸುವ ಚಿಂತನೆ ಇದೆ.
|ಮೊಹಮ್ಮದ್ ನಝೀರ್ ಮನಪಾ ಆಯುಕ್ತ