ಮಾಯಕೊಂಡ: 15 ದಿನಗಳ ಹಿಂದೆ ಬಿತ್ತನೆ ಮಾಡಿರುವ ಮುಂಗಾರು ಹಂಗಾಮಿನ ಮೆಕ್ಕೆಜೋಳ ಬೆಳೆಗೆ ಎತ್ತಿನ ಬೇಸಾಯದಲ್ಲಿ ರೈತರು ಬುಡುಗುಂಟೆ ಹೊಡೆಯಲು ಪ್ರಾರಂಭಿಸಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ, ಆನಗೋಡು ಹಾಗೂ ಅಣಜಿ ಹೋಬಳಿಗಳ ನೂರಾರು ಗ್ರಾಮಗಳಲ್ಲಿ ರೋಹಿಣಿ ಮಳೆಗೆ ಮೆಕ್ಕೆಜೋಳವನ್ನು ಬಿತ್ತುವ ಕಾರ್ಯ ಮುಗಿಯುವ ಹಂತದಲ್ಲಿದೆ. ಆದರೆ ಎತ್ತಿನ ಬೇಸಾಯದಲ್ಲಿ ಬುಡುಗುಂಟೆ ಹೊಡೆಯುವ ಕಾರ್ಯ ಚುರುಕಾಗಿದೆ.
ಈ ಭಾಗದಲ್ಲಿ ಮಳೆ ಕಡಿಮೆಯಾಗಿದ್ದು ಬಿಸಿಲು ಜೋರಾಗಿದೆ. ಕುಂಟೆ ಹೊಡೆಯಲು ಈ ವಾತಾವರಣ ಹದವಾಗಿದ್ದು ರೈತರು ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಮುಳ್ಳುಸಜ್ಜೆ ಕಳೆ ಮೆಕ್ಕೆಜೋಳದ ಜತೆಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದು ಬಿಸಿಲಿನಲ್ಲಿ ಕುಂಟೆ ಹೊಡೆದು ನಿಯಂತ್ರಣ ಮಾಡಬೇಕು, ಇಲ್ಲವಾದಲ್ಲಿ ಅದನ್ನು ನಾಶ ಪಡಿಸಲು ಕಷ್ಟಸಾಧ್ಯ ಎನ್ನುತ್ತಾರೆ ರೈತರು.
ಎತ್ತಿನ ಬೇಸಾಯ ದರ ದುಬಾರಿ: ಪ್ರಸ್ತುತ ಕೃಷಿ ಚಟುವಟಿಕೆಗಳು ಸಂಪೂರ್ಣ ಟ್ರ್ಯಾಕ್ಟರ್ ಹಾಗೂ ವಿವಿಧ ಯಂತ್ರೋಪಕರಣಗಳಿಂದ ನಡೆಯುತ್ತಿದೆ. ಹೀಗಾಗಿ ಎತ್ತಿನ ಸಂಖ್ಯೆ ಕಡಿಮೆಯಾಗಿವೆ. ಕೆಲ ಗ್ರಾಮಗಳಲ್ಲಿ ಒಂದು ಜತೆ ಎತ್ತುಗಳು ಸಹ ಇಲ್ಲದಂತಾಗಿವೆ. ಮೆಕ್ಕೆಜೋಳ ಬುಡುಗುಂಟೆ ಹೊಡೆಯಲು ಎತ್ತುಗಳು ಅವಶ್ಯಕವಾಗಿದ್ದರಿಂದ ಎತ್ತುಗಳ ಬೇಸಾಯ ದರ ದುಬಾರಿಯಾಗಿದೆ. ಒಂದು ಎಕರೆಗೆ 650 ರಿಂದ 700 ರೂ. ನಿಗದಿಯಾಗಿದೆ. ದಿನಕ್ಕೆ 3 ರಿಂದ 4 ಎಕರೆ ಕುಂಟೆ ಹೊಡೆಯುತ್ತಾರೆ.
ಮಾಯಕೊಂಡ ಹೋಬಳಿಯ ರೈತರು ಕೃಷಿ ಕಾರ್ಯಕ್ಕೆ ಯಂತ್ರಗಳನ್ನೇ ಅವಲಂಬಿಸಿರುವ ಕಾರಣ ಎತ್ತುಗಳ ಸಂಖ್ಯೆ ತೀರಾ ಕಡಿಮೆಯಾಗಿವೆ. ಮೆಕ್ಕೆಜೋಳದಲ್ಲಿ ಕುಂಟೆ ಹೊಡೆಯಲು ಎತ್ತುಗಳಿಲ್ಲದೆ ಪರದಾಡುವ ಸ್ಥಿತಿ ಬಂದಿದೆ. ಹೀಗಾಗಿ ಎತ್ತಿನ ಬೇಸಾಯದ ದರ ದುಬಾರಿಯಾಗಿದೆ.
| ಅಶೋಕ್ ಗೌಡ್ರು, ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಪುಟ್ಟಣ್ಣಯ್ಯ ಬಣ)
ಟ್ರ್ಯಾಕ್ಟರ್ ಬಳಸಿ ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು, ಮುಳ್ಳುಸಜ್ಜೆ ಕಳೆ ನಾಶ ಮಾಡಲು ಕುಂಟೆ ಹೊಡೆಯುವುದಕ್ಕೆ ಎತ್ತುಗಳ ಬೇಸಾಯದ ಅನಿವಾರ್ಯವಿದೆ. ಕೃಷಿಕರು ಯಂತ್ರೋಪಕರಣಗಳ ಜತೆ ಎತ್ತುಗಳನ್ನು ಮನೆಗಳಲ್ಲಿ ಸಾಕುವುದು ಅವಶ್ಯವಾಗಿದೆ.
| ಡಿ ಎಂ. ಶ್ರೀಧರ್ವುೂರ್ತಿ, ಸಹಾಯಕ ಕೃಷಿ ನಿರ್ದೇಶಕ, ದಾವಣಗೆರೆ ತಾಲೂಕು.