More

    ಬದಾಮಿ ತಾಲೂಕಿನ ಬನಶಂಕರಿ ದೇವಿ ರಥೋತ್ಸವ ಸಂಭ್ರಮದ ಮಧ್ಯೆ ಸೂತಕದ ಛಾಯೆ

    ರೋಣ: ಉತ್ತರ ಕರ್ನಾಟಕದ ಪ್ರಸಿದ್ಧ ಬದಾಮಿ ತಾಲೂಕಿನ ಬನಶಂಕರಿ ದೇವಿ ರಥೋತ್ಸವ ಎಳೆಯುವ ಹಗ್ಗಗಳನ್ನು ಸಂಪ್ರದಾಯದಂತೆ ಬಂಡಿ ಮೂಲಕ ಒದಗಿಸಿ ಗ್ರಾಮಕ್ಕೆ ಮರಳುವಾಗ ಬಂಡಿ ಎಳೆಯುತ್ತಿದ್ದ ಹೋರಿಯೊಂದು ಹೃದಯಾಘಾತದಿಂದ ಅಸುನೀಗಿದೆ.

    ತಾಲೂಕಿನ ಮಾಡಲಗೇರಿ ಗ್ರಾಮದಿಂದ ಹಗ್ಗಗಳನ್ನು ಬಂಡಿಯಲ್ಲಿಟ್ಟುಕೊಂಡು ಎತ್ತುಗಳನ್ನು ಹೂಡಿಕೊಂಡು ಬನಶಂಕರಿ ತೇರಿಗೆ ಕೊಟ್ಟು ಬರುವುದು ನಡೆದುಕೊಂಡು ಬಂದ ಸಂಪ್ರದಾಯ. ಅದೇ ರೀತಿ ಈ ವರ್ಷವೂ ರಥದ ಹಗ್ಗಗಳನ್ನು ಕೊಟ್ಟುಬರಲು ಎರಡು ಹೊಸ ಎತ್ತುಗಳನ್ನು ಖರೀದಿಸಿ ಸಿದ್ಧಗೊಳಿಸಲಾಗಿತ್ತು. ಅದೇ ರೀತಿ ಎತ್ತುಗಳು ಹುರುಪಿನಿಂದ ಹಗ್ಗಗಳನ್ನೊಳಗೊಂಡ ಬಂಡಿಯನ್ನು ಎಳೆದುಕೊಂಡು ಹೋದವು. ಹಗ್ಗಗಳನ್ನು ಬನಶಂಕರಿಯಲ್ಲಿ ಇಳಿಸಿ ವಾಪಸ್ ಬರುತ್ತಿರುವಾಗ ಭಾನುವಾರ ಸಂಜೆ ಇನ್ನೇನು ಗ್ರಾಮದ ಅಗಸಿ ಹತ್ತಿರ ಬಂದಂತೆ ಹೃದಯಾಘಾತಕ್ಕೆ ಒಳಗಾಗಿ ಒಂದು ಎತ್ತು ಕೊನೆಯುಸಿರೆಳೆಯಿತು. ಇದರ ಜೋಡಿ ಬಂಡಿ ಎಳೆದ ಎತ್ತು ಆರೋಗ್ಯವಾಗಿದೆ.

    ಹಳಿ ಬಂಡಿಯನ್ನು ಎಳೆಯುವ ಸಲುವಾಗಿ ಗ್ರಾಮದ ಅಣ್ಣಪ್ಪ ಮೇಟಿ ಅವರು ನೆರೆಯ ಹುನಗುಂಡಿ ಗ್ರಾಮದಿಂದ 1 ಲಕ್ಷ ರೂ. ನೀಡಿ ಈ ಎತ್ತನ್ನು ಖರೀದಿಸಿದ್ದರು ಎನ್ನಲಾಗಿದೆ. ತನಗೆ ನೀಡಲಾದ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಿ ನಂತರ ಎತ್ತು ಅಸುನೀಗಿದೆ.

    ಗ್ರಾಮದಲ್ಲಿ ಸೂತಕದ ಛಾಯೆ: ಪ್ರತಿ ವರ್ಷದಂತೆ ಹಳಿ ಬಂಡಿ ಮೂಲಕ ರಥೋತ್ಸವಕ್ಕೆ ಹಗ್ಗ ಕೊಂಡೊಯ್ದು ಮರಳಿ ಗ್ರಾಮಕ್ಕೆ ಬಂದ ನಂತರ ರಾತ್ರಿ ಗ್ರಾಮದಲ್ಲಿ ಹಳಿ ಬಂಡಿಯ ಮೆರವಣಿಗೆ ಹಾಗೂ ರಸಮಂಜರಿ ಕಾರ್ಯಕ್ರಮಗಳು ಜರುಗುತ್ತಿದ್ದವು. ಆದರೆ, ನೆಚ್ಚಿನ ಹೊರಿಯ ಅಗಲಿಕೆಯಿಂದಾಗಿ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸಿತು.

    ತುಂಬಿದ ಮಲಪ್ರಭೆ ನದಿ ದಾಟಿದ ಹಳಿಬಂಡಿ: ಶುಕ್ರವಾರ ಅಂದಾಜು 5 ಕ್ವಿಂಟಾಲ್​ನಷ್ಟು ಭಾರದ ಹಳಿಬಂಡಿ ಹಾಗೂ ಹಗ್ಗವನ್ನು ಹೊತ್ತು ಮಲಪ್ರಭೆ ನದಿಯ ಎದೆ ಎತ್ತರದ ನೀರನ್ನು ಧೈರ್ಯದಿಂದ ದಾಟಿ ನೆರೆದಿದ್ದ ಸಾವಿರಾರು ಜನರಿಂದ ಸೈ ಎನಿಸಿಕೊಂಡಿದ್ದ ಹೋರಿ ಇನ್ನು ನೆನಪು ಮಾತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts