ಕ್ಯಾನ್ಸರ್​ ಮಹಾಮಾರಿಗೆ ಈ ವರ್ಷ 8 ಲಕ್ಷ ಜನರು ಬಲಿ: ಕೇಂದ್ರ

ನವದೆಹಲಿ: ಈ ವರ್ಷ ಕ್ಯಾನ್ಸರ್​ ರೋಗದಿಂದಾಗಿ 8 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್​ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಪ್ರಕಾರ ಈ ವರ್ಷ 8,01,374 ಜನರು ಕ್ಯಾನ್ಸರ್​ನಿಂದ ಮೃತಪಟ್ಟಿದ್ದಾರೆ. 2017ರಲ್ಲಿ 7,66,348 ಜನರು ಮೃತಪಟ್ಟಿದ್ದರು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ಯಾನ್ಸರ್​ಗೆ ಬಲಿಯಾದವರ ಸಂಖ್ಯೆ ಸ್ವಲ್ಪ ಹೆಚ್ಚಳವಾಗಿದೆ. ಈ ವರ್ಷ 15,86,571 ಜನರಿಗೆ ಕ್ಯಾನ್ಸರ್​ ರೋಗ ತಗುಲಿದೆ. 2017ರಲ್ಲಿ ಕ್ಯಾನ್ಸರ್​ ರೋಗಿಗಳ ಸಂಖ್ಯೆ 15,17,426 ಇತ್ತು. 2016ರಲ್ಲಿ 14,51,417 ಮತ್ತು 2015ರಲ್ಲಿ 13,88,397 ಜನರಲ್ಲಿ ಕ್ಯಾನ್ಸರ್​ ರೋಗ ಪತ್ತೆಯಾಗಿತ್ತು ಎಂದು ಅನುಪ್ರಿಯಾ ಲೋಕಸಭೆಗೆ ಮಾಹಿತಿ ನೀಡಿದರು.

ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶದಲ್ಲಿ ಕ್ಯಾನ್ಸರ್​ ರೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನ್ಯಾಷನಲ್​ ಹೆಲ್ತ್​ ಮಿಷನ್​ ಅಡಿಯಲ್ಲಿ ಕ್ಯಾನ್ಸರ್​, ಮಧುಮೇಹ, ಹೃದಯಸಂಬಂಧಿ ರೋಗಗಳು ಹಾಗೂ ಪಾರ್ಶ್ವವಾಯುವಿನಂತಹ ರೋಗಗಳನ್ನು ತಡೆಯಲು ಕಾರ್ಯಕ್ರಮವನ್ನು ರೂಪಿಸಿದೆ. ಅದರಲ್ಲೂ ಮುಖ್ಯವಾಗಿ ಬಾಯಿ ಕ್ಯಾನ್ಸರ್​, ಸ್ತನ ಕ್ಯಾನರ್​ ಮತ್ತು ಸರ್ವಿಕಲ್​ ಕ್ಯಾನ್ಸರ್​ ತಡೆಯಲು ಹೆಚ್ಚಿನ ಗಮನ ಹರಿಸಿದ್ದೇವೆ ಎಂದು ಸಚಿವೆ ತಿಳಿಸಿದ್ದಾರೆ. (ಏಜೆನ್ಸೀಸ್​)