Israel : ಮಧ್ಯಪ್ರಾಚ್ಯ ವಿರೋಧಿ ದೇಶಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಎರಡೂ ರಾಷ್ಟ್ರಗಳು ಭಾನುವಾರ ರಾತ್ರಿಯಿಡೀ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ವ್ಯಾಪಕ ಪ್ರಾದೇಶಿಕ ಸಂಘರ್ಷದ ಭಯವನ್ನು ಹೆಚ್ಚಿಸಿದೆ.
ಆಪರೇಷನ್ ರೈಸಿಂಗ್ ಲಯನ್ ಹೆಸರಿನಲ್ಲಿ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಗಳಲ್ಲಿ, ಇರಾನ್‌ಗೆ ಪ್ರಮುಖ ಆರ್ಥಿಕ ಜೀವನಾಡಿಯಾಗಿರುವ ವಿಶ್ವದ ಅತಿದೊಡ್ಡ ಅನಿಲ ಕ್ಷೇತ್ರದ ಮೇಲಿನ ವೈಮಾನಿಕ ದಾಳಿಯೂ ಸೇರಿದೆ. ಇರಾನಿನ ಪ್ರಮುಖ ಸ್ವತ್ತುಗಳನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡು ಇಸ್ರೇಲ್‌ನ ಮಿಲಿಟರಿ ಪಡೆ ದಾಳಿ ನಡೆಸುತ್ತಿರುವುದು ಕಂಡುಬಂದಿದೆ.
ಭಾನುವಾರ ಟೆಹರಾನ್ನಲ್ಲಿ ಅತ್ಯಂತ ಭೀಕರ ದಾಳಿ ನಡೆದಿದ್ದು, ಇಸ್ರೇಲಿ ಕ್ಷಿಪಣಿ ವಸತಿ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 29 ಮಕ್ಕಳು ಸೇರಿದಂತೆ ಕನಿಷ್ಠ 60 ಜನರು ಮೃತಪಟ್ಟಿದ್ದಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನೆ ಇರಾನ್, ಉತ್ತರ ಇಸ್ರೇಲ್‌ನ ಮನೆಯೊಂದರ ಬಳಿ ನಡೆಸಿದ ದಾಳಿಯಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಇರಾನ್‌ನಲ್ಲಿ ಇಸ್ರೇಲ್ ದಾಳಿಯ ಮೊದಲ ಎರಡು ದಿನಗಳಲ್ಲಿ ಒಟ್ಟು 78 ಸಾವುಗಳು ವರದಿಯಾಗಿವೆ. ಕಟ್ಟಡಗಳು ನೆಲಸಮವಾಗಿದ್ದು, ಮೇಲಿನ ಮಹಡಿಗಳು ಕುಸಿದಿರುವುದು ದೃಶ್ಯಗಳಲ್ಲಿ ಕಂಡುಬಂದಿದೆ. ಟೆಹರಾನ್ನಿಂದ ಪದೇಪದೆ ಕ್ಷಿಪಣಿ ಉಡಾವಣೆಯಾದ ನಂತರ ಇರಾನ್‌ನೊಳಗೆ 150ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿಕೊಂಡಿರುವುದಾಗಿ ಇಸ್ರೇಲ್ ಹೇಳಿದೆ. ದಾಳಿಗಳು ಮುಂದುವರಿದಂತೆ, ಇರಾನ್‌ನ ಸ್ಫೋಟಕಗಳು ಒಳಬರುತ್ತಿರುವುದನ್ನು ಇಸ್ರೇಲ್ ಸೇನೆ ವರದಿ ಮಾಡಿದೆ. ಟೆಲ್ ಅವೀವ್ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ.
ಶುಕ್ರವಾರ ಆರಂಭವಾದ ಇಸ್ರೇಲ್-ಇರಾನ್ ಸಂಘರ್ಷ ಇನ್ನಷ್ಟು ತೀವ್ರಗೊಂಡಿದ್ದು, ಶನಿವಾರ ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆ ಇರಾನ್ ಭಾರಿ ವೈಮಾನಿಕ ದಾಳಿ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕೇಂದ್ರ ಕಚೇರಿ ಕೂಡ ದಾಳಿಗೆ ಒಳಗಾಗಿದೆ. ಇರಾನ್ ಮಿಲಿಟರಿಯ ಇನ್ನೂ ಇಬ್ಬರು ಉನ್ನತ ಅಧಿಕಾರಿಗಳು ಹತರಾಗಿದ್ದು ಇಸ್ರೇಲಿ ದಾಳಿಗೆ ಬಲಿಯಾದ ಅಧಿಕಾರಿಗಳ ಸಂಖ್ಯೆ ಐದಕ್ಕೆ ಏರಿದೆ. ಸಶಸ್ತ್ರ ಪಡೆಗಳ ಗುಪ್ತದಳದ ಉಪ ಮುಖ್ಯಸ್ಥ ಘೋಲಾಮ್ರೆಜ್ ಮೆಹ್ರಾಬಿ ಮತ್ತು ಕಾರ್ಯಾಚರಣೆಗಳ ಉಪ ಮುಖ್ಯಸ್ಥ ಮೆಹ್ದಿ ರಬ್ಬಾನಿ ಮೖತಪಟ್ಟಿದ್ದಾರೆಂದು ಇರಾನ್‌ನ ಸರ್ಕಾರಿ ಟೆಲಿವಿಜನ್ ವರದಿ ಮಾಡಿದೆ.