ನವದೆಹಲಿ: ಕಳೇದ ಎರಡು ಹಣಕಾಸು ವರ್ಷದ ಅವಧಿಯಲ್ಲಿ 3.38 ಲಕ್ಷಕ್ಕೂ ಹೆಚ್ಚಿನ ಕಂಪನಿಗಳು ನೊಂದಣಿ ಕಳೆದುಕೊಂಡಿವೆ ಎಂಬುದನ್ನು ಕೇಂದ್ರ ಸರ್ಕಾರದ ಅಂಕಿ ಅಂಶಗಳು ಬಹಿರಂಗಪಡಿಸಿವೆ.
ಕಾರ್ಪೊರೇಟ್ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಯಲ್ಲಿ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಇದರಂತೆ, 2017-18 ಮತ್ತು 2018-19ರ ಅವಧಿಯಲ್ಲಿ ರಿಜಿಸ್ಟ್ರಾರ್ ಆಫ್ ಕಂಪನೀಸ್ ಒಟ್ಟು 3,38,963 ಕಂಪನಿಗಳ ನೋಂದಣಿ ರದ್ದುಗೊಳಿಸಿದೆ. ಕಂಪನಿಗಳ ಅಂಕಿ ಅಂಶಗಳಿಗೆ ಸಂಬಂಧಿಸಿದಂತೆ ರಿಜಿಸ್ಟ್ರಾರ್ ಆಫ್ ಕಂಪನೀಸ್ ಅಧಿಕೃತ ಸಂಸ್ಥೆಯಾಗಿದ್ದು, ನೋಂದಣಿಗಳನ್ನು ಮತ್ತು ಅವುಗಳ ವಹಿವಾಟನ್ನು ಗಮನಿಸುತ್ತದೆ.
ನೋಂದಣಿ ಕಳೆದುಕೊಂಡ ಕಂಪನಿಗಳು ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷದ ವಾರ್ಷಿಕ ರಿಟರ್ನ್ಸ್ ವಿವರವನ್ನು ರಿಜಿಸ್ಟ್ರಾರ್ ಆಫ್ ನೋಂದಣಿಗೆ ಸಲ್ಲಿಸಿಲ್ಲ. ಹೀಗಾಗಿ ನಿಯಮ ಪ್ರಕಾರವೇ ಈ ಕಂಪನಿಗಳು ನೋಂದಣಿ ಕಳೆದುಕೊಂಡಿವೆ ಎಂದು ಸರ್ಕಾರ ಲೋಕಸಭೆಗೆ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)