ಮತಪತ್ರಗಳನ್ನು ಎಣಿಸಿ, ಎಣಿಸಿ, ದಣಿದು ಪ್ರಾಣಬಿಟ್ಟ 270 ಮಂದಿ, ಅರೆ ಭಾರತದಲ್ಲಿ ಅಲ್ಲ ಸ್ವಾಮಿ… ಮತ್ತೆಲ್ಲಿ..?

ಜಕಾರ್ತಾ: ಯಾವುದೇ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸಿದರೆ, ಅಕ್ರಮವಾಗಬಹುದು ಇಲ್ಲವೇ ಎಣಿಕೆ ತಡವಾಗಬಹುದು ಎಂಬ ಕಾರಣಕ್ಕೆ ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆ ಆರಂಭವಾಗಿದೆ. ಇದರಿಂದಾಗಿ ತುಂಬಾ ಕಡಿಮೆ ಅವಧಿಯಲ್ಲಿ, ಮತ ಎಣಿಕೆ ಮಾಡುವವರಿಗೆ ಹೆಚ್ಚಿನ ಶ್ರಮವಿಲ್ಲದೆ, ಕಡಿಮೆ ಅವಧಿಯಲ್ಲಿ ಫಲಿತಾಂಶ ಘೋಷಿಸಬಹುದಾಗಿದೆ. ಆದರೆ, ಇಲ್ಲೊಂದು ದೇಶವಿದೆ. ಆ ದೇಶದಲ್ಲಿ ಚುನಾವಣೆಗಳಲ್ಲಿ ಇಂದಿಗೂ ಮತಪತ್ರಗಳನ್ನೇ ಬಳಸಲಾಗುತ್ತಿದೆ. ಇವುಗಳನ್ನು ಎಣಿಕೆ ಮಾಡುತ್ತಾ ದಣಿದ ನೂರಾರು ಮಂದಿ ಅಸುನೀಗಿದರೂ, ಇದರ ಬಳಕೆ ಮಾತ್ರ ಅಬಾಧಿತವಾಗಿ ಮುಂದುವರಿದಿದೆ!

ಅದು ಯಾವ ದೇಶ ಎಂದಿರಾ? ಅದು ಇಂಡೋನೇಷ್ಯಾ. ಹತ್ತು ದಿನಗಳ ಹಿಂದಷ್ಟೇ ಈ ದ್ವೀಪ ರಾಷ್ಟ್ರದಲ್ಲಿ ಒಂದೇ ಹಂತದಲ್ಲಿ, ವಿಶ್ವದಲ್ಲೇ ಅತಿದೊಡ್ಡ ಮತದಾನ ಪ್ರಕ್ರಿಯೆ ನಡೆದಿತ್ತು. ಏ.17ರಂದು ನಡೆದಿದ್ದ ಮತದಾನದಲ್ಲಿ ಇದೇ ಮೊದಲ ಬಾರಿಗೆ ಅಧ್ಯಕ್ಷೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸರ್ಕಾರಗಳ ಆಯ್ಕೆಗೆ ಏಕಕಾಲಕ್ಕೆ ಮತದಾನ ಮಾಡಲಾಗಿತ್ತು. ಅಂದಾಜು 260 ದಶಲಕ್ಷ ಅರ್ಹ ಮತದಾರರ ಪೈಕಿ ಶೇ.80 ಜನರು ಅಂದರೆ 193 ದಶಲಕ್ಷ ಜನರು ತಮ್ಮ ಹಕ್ಕು ಚಲಾಯಿಸಿದ್ದರು. ದೇಶದಾದ್ಯಂತ ಅಂದಾಜು 8 ಲಕ್ಷ ಮತಗಟ್ಟೆಗಳಲ್ಲಿ ಇವರೆಲ್ಲರೂ 5 ಮತಪತ್ರಗಳ ಗೊಂಚಲನ್ನು ಮತಪೆಟ್ಟಿಗೆಯೊಳಗೆ ಹಾಕಿದ್ದರು.

ಇದೀಗ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಸಾವಿರಾರು ಜನರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಊಟ, ನಿದ್ದೆ ಬಿಟ್ಟು ಇವರೆಲ್ಲರೂ ತೀವ್ರ ಒತ್ತಡಮಯ ವಾತಾವರಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮ ಇವರ ಆರೋಗ್ಯದ ಮೇಲಾಗುತ್ತಿದೆ. ತೀವ್ರ ಅಸ್ವಸ್ಥಗೊಂಡಿದ್ದ 272 ಮಂದಿ ಮೃತಪಟ್ಟರೆ, ಇನ್ನೂ 1,878 ಜನರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಇವರ ಪೈಕಿ ಬಹುತೇಕ ಜನರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಇಂಡೋನೇಷ್ಯಾದ ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *