ತೆಲಂಗಾಣ ಸಿಎಂ ಕೆಸಿಆರ್​ ಪುತ್ರಿ ವಿರುದ್ಧ 200ಕ್ಕೂ ಹೆಚ್ಚು ರೈತರಿಂದ ನಾಮಪತ್ರ ಸಲ್ಲಿಕೆ

ಹೈದರಾಬಾದ್​: ನಿಜಾಮಾಬಾದ್​ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್​ ರಾವ್​ ಅವರ ಪುತ್ರಿ ಟಿ.ಆರ್​.ಎಸ್.​ ಪಕ್ಷದ ಅಭ್ಯರ್ಥಿ ಕೆ. ಕವಿತಾ ಅವರ ವಿರುದ್ಧ 200 ಕ್ಕೂ ಹೆಚ್ಚು ರೈತರು ನಾಮಪತ್ರ ಸಲ್ಲಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ನೀಡುತ್ತಿಲ್ಲ. ತಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾರ್ಥವಾಗಿ 200 ಕ್ಕೂ ಹೆಚ್ಚು ಅರಿಶಿನ ಮತ್ತು ಜೋಳ ಬೆಳೆಗಾರರು ಹಾಗೂ ಕೆಲವು ಕಬ್ಬು ಬೆಳೆಗಾರರು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ಸಮಸ್ಯೆಗಳ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆಯಲು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣಾ ಕಣಕ್ಕೆ ಇಳಿಯಲು ತೀರ್ಮಾನಿಸಿದ್ದಾರೆ. 1000 ಕ್ಕೂ ಹೆಚ್ಚು ರೈತರಿಂದ ನಾಮಪತ್ರ ಸಲ್ಲಿಸಬೇಕು ಎಂದು ಯೋಜನೆ ರೂಪಿಸಿದ್ದೇವೆ. ಆದರೆ, ಈಗ 200 ಕ್ಕೂ ಹೆಚ್ಚು ರೈತರು ಮಾತ್ರ ನಾಮಪತ್ರ ಸಲ್ಲಿಸಿದ್ದರು ಎಂದು ರೈತ ಮುಖಂಡರು ತಿಳಿಸಿದ್ದಾರೆ.

ಈ ಕ್ಷೇತ್ರದಲ್ಲಿ ಒಟ್ಟು 245 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆ ಬಳಿಕ 189 ನಾಮಪತ್ರಗಳು ಮಾತ್ರ ಸಿಂಧುವಾಗಿದ್ದು, ಒಟ್ಟು 189 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ. ಹೊಸ ಮತಯಂತ್ರಗಳಲ್ಲೂ ಇಷ್ಟೂ ಅಭ್ಯರ್ಥಿಗಳಿಗೆ ಸ್ಥಾನ ಕಲ್ಪಿಸಬಹುದಾಗಿದೆ. ಅಗತ್ಯ ಬಿದ್ದರೆ ಬ್ಯಾಲೆಟ್​ ಪೇಪರ್​ ಬಳಕೆ ಮಾಡುವ ಕುರಿತೂ ಚಿಂತನೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.