ಹವಾಮಾನ ವೈಪರೀತ್ಯಕ್ಕೆ 1,425ಕ್ಕೂ ಅಧಿಕ ಬಲಿ

ಬೆಂಗಳೂರು: ಕಳೆದ ವರ್ಷ ಭಾರಿ ಮಳೆ, ನೆರೆ, ಶೀತಗಾಳಿ ಸೇರಿ ತೀವ್ರ ಸ್ವರೂಪದ ಹವಾಮಾನ ವೈಪರೀತ್ಯಕ್ಕೆ ದೇಶಾದ್ಯಂತ 1,425ಕ್ಕೂ ಅಧಿಕ ಜನ ಮೃತಪಟ್ಟಿದ್ದಾರೆ. 2018ನೇ ಸಾಲಿನಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪಗಳಿಂದಾದ ಪ್ರಾಣಹಾನಿ ಕುರಿತು ಹವಾಮಾನ ಇಲಾಖೆ ಬುಧವಾರ (ಜ.16)ವರದಿ ಪ್ರಕಟಿಸಿದೆ. 2018ರಲ್ಲಿ 6 ಚಂಡಮಾರುತ ಸೃಷ್ಟಿಯಾಗಿದ್ದು, ತಿತ್ಲಿ, ಗಜ ಹಾಗೂ ಪೆಥಾಯ್ ಚಂಡಮಾರುತದಿಂದ ಆಸ್ತಿ-ಪ್ರಾಣ ಹಾನಿ ಸಂಭವಿಸಿದೆ. ಚಂಡಮಾರುತ, ವಾಯುಭಾರ ಕುಸಿತದಿಂದಾಗಿ ಕೇರಳ, ತಮಿಳುನಾಡು, ರಾಜ್ಯದ ಕೊಡಗು ಸೇರಿ ಹಲವೆಡೆ ಕುಂಭದ್ರೋಣ ಮಳೆಯಿಂದ ಹೆಚ್ಚಿನ ಪ್ರಾಣ ಹಾನಿಯಾಗಿತ್ತು.

800ಕ್ಕೂ ಅಧಿಕ ಮಂದಿ ಬಲಿ: ಮುಂಗಾರು-ಹಿಂಗಾರು ಅವಧಿಯಲ್ಲಿ ಭಾರಿ ಮಳೆ, ನೆರೆಯಿಂದಾಗಿ ದೇಶಾದ್ಯಂತ 800ಕ್ಕೂ ಅಧಿಕ ಜನ ಮೃತಪಟ್ಟಿದ್ದರು. ಇದರಲ್ಲಿ ಆ.8 ರಿಂದ 23ರವರೆಗೆ ಕೇರಳದಲ್ಲಿ ಉಂಟಾಗಿದ್ದ ಮೇಘಸ್ಪೋಟಕ್ಕೆ 223 ಜನ ಬಲಿಯಾಗಿದ್ದರು. ಭಾರಿ ಮಳೆ, ನೆರೆಗೆ ಉತ್ತರ ಪ್ರದೇಶದಲ್ಲಿ 158, ಮಹಾರಾಷ್ಟ್ರದಲ್ಲಿ 139, ಪಶ್ಚಿಮ ಬಂಗಾಳ ರಾಜ್ಯದಲ್ಲಿ 116 ಜನ ಮೃತಪಟ್ಟಿದ್ದರು. ಏಪ್ರಿಲ್-ಮೇನಲ್ಲಿ ಉತ್ತರ ಪ್ರದೇಶದಲ್ಲಿ ಸಿಡಿಲಿಗೆ 166, ಜೂನ್-ಜುಲೈನಲ್ಲಿ ಜಾರ್ಖಂಡ್​ನಲ್ಲಿ 75 ಜನ ಮೃತಪಟ್ಟಿದ್ದರು. ರಾಜ್ಯದ ಕೊಡಗು, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 20ಕ್ಕೂ ಅಧಿಕ ಜನ ಮೃತಪಟ್ಟಿದ್ದು, 2 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು. ಏಪ್ರಿಲ್-ಆಗಸ್ಟ್ ಅವಧಿಯಲ್ಲಿ ರಾಜ್ಯದಲ್ಲಿ 103 ಜನ ಸಿಡಿಲು ಬಡಿದು, 38 ಜನ ಮನೆ ಮತ್ತು ಮರ ಬಿದ್ದು, 9 ಜನ ಮುಳುಗಿ ಹಾಗೂ 16 ಜನ ಭೂಕುಸಿತಕ್ಕೆ ಸಿಲುಕಿ ಮೃತಪಟ್ಟಿದ್ದರು.

ನಾಲ್ಕು ವರ್ಷಗಳಲ್ಲೇ ಅಧಿಕ: 2014ರಲ್ಲಿ ತೀವ್ರ ಬರ ಸೇರಿ ಇತರ ನೈಸರ್ಗಿಕ ವಿಕೋಪಕ್ಕೆ 218 ಜನ ಮೃತಪಟ್ಟಿದ್ದರು. 2015ರಲ್ಲಿ 128, 2016ರಲ್ಲಿ 113, 2017ರಲ್ಲಿ 160 ಜನ ಮೃತಪಟ್ಟಿದ್ದರು. 2014ರ ನಂತರ ರಾಜ್ಯದಲ್ಲಿ ಸಂಭವಿಸಿದ ಅತಿ ಹೆಚ್ಚು ಸಾವು-ನೋವು ಇದಾಗಿದೆ.

ಕನಿಷ್ಠ ತಾಪಮಾನ ಒಂದಂಕಿಗೆ ಕುಸಿತ

ಉತ್ತರ ಕರ್ನಾಟಕದ ಬಳಿಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ಶೀತಗಾಳಿ ವಾತಾವರಣವಿದ್ದು, ಕನಿಷ್ಠ ತಾಪಮಾನ ಒಂದಂಕಿಗೆ ಕುಸಿದಿದೆ. ರಾಜ್ಯದ ಅತಿ ಕನಿಷ್ಠ ತಾಪಮಾನ ಚಾಮರಾಜನಗರದಲ್ಲಿ (8 ಡಿಗ್ರಿ ಸೆಲ್ಸಿಯಸ್) ದಾಖಲಾಗಿದೆ. ಸದ್ಯ ಉತ್ತರ ಕರ್ನಾಟಕಕ್ಕೆ ಹೋಲಿಸಿದರೆ ದಕ್ಷಿಣ ಒಳನಾಡಿನಲ್ಲೇ ಚಳಿ ಹೆಚ್ಚಾಗಿದೆ. ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ವಾಡಿಕೆಗಿಂತ 2-4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇದೆ. ಹೀಗಾಗಿ ಚಳಿ ಏರುತ್ತಿದೆ. ರಾಜ್ಯದೆಲ್ಲೆಡೆ ಒಣಹವೆ ಮುಂದುವರಿಯುವ ಮುನ್ಸೂಚನೆ ಇದ್ದು, ಗರಿಷ್ಠ-ಕನಿಷ್ಠ ತಾಪಮಾನ ಎರಡೂ ಏರಿಳಿತವಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.