ಶ್ರೀಕಂಠೇಗೌಡರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಅಂಬಿ ಅಭಿಮಾನಿಗಳು

ಮಂಡ್ಯ: ಸುಮಲತಾ ಅಂಬರೀಷ್‌ ಅವರು ಮಂಡ್ಯದ ಗೌಡ್ತಿ ಅಲ್ಲವೆಂದು ಹೇಳಿದ್ದ ಜೆಡಿಎಸ್‌ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ನಿವಾಸದ ಬಳಿ ಅಂಬರೀಷ್‌ ಅಭಿಮಾನಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.

ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ಆಕ್ರೋಶಗೊಂಡ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಮಂಡ್ಯದ ಸುಭಾಷ್ ನಗರದಲ್ಲಿರುವ ಶ್ರೀಕಂಠೇಗೌಡರ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ್ದು, ಪೊಲೀಸರು ತಡೆದಿದ್ದರಿಂದ ಅಂಬೇಡ್ಕರ್ ಭವನದ ಬಳಿ ನೂರಾರು ಅಂಬರೀಶ್ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಧರಣಿ ಕೈಗೊಂಡಿದ್ದಾರೆ.

ಶ್ರೀಕಂಠೇಗೌಡರಿಗೆ ಶ್ರದ್ಧಾಂಜಲಿ ಬರಹದ ಭಾವಚಿತ್ರ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಬಳಿಕ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಬೆಂಕಿ ಹಚ್ಚಿ ಕಿಡಿಕಾರಿದ್ದಾರೆ. ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್, ಸುನೀತಾ ರಾಜೇಶ್, ಜ್ಯೋತಿ, ಕನಕ, ನಾಗಮಣಿ, ಸತೀಶ್, ಬುಲೆಟ್ ಕೃಷ್ಣ ಮೊದಲಾದವರು ಭಾಗಿಯಾಗಿದ್ದರು.

ಸುಮಲತಾ ಅಂಬರೀಷ್‌ಗೆ ನನ್ನ ಸಂಪೂರ್ಣ ಬೆಂಬಲವಿದೆ

ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಸ್ಪರ್ಧೆ ವಿಚಾರ ಕುರಿತಂತೆ ಧಾರವಾಡದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿ, ಸುಮಲತಾ ಅವರು ಅರ್ಹರಿದ್ದಾರೆ. ಅವರು ನಮ್ಮ ಸಹೋದರಿ. ಅಂಬರೀಷ್​ ಹೋದ ಬಳಿಕ ಅವರ ಕುಟುಂಬದವರು ರಾಜಕೀಯಕ್ಕೆ ಬರಬೇಕು ಎಂದು ಜನರ ಒತ್ತಾಯವಿದೆ. ಅವರು ಮುಂದೆ ಬಂದರೆ ನಮ್ಮ‌ ಪಕ್ಷ ಬೆಂಬಲ ಕೊಡಲಿದೆ. ನನ್ನ ಸಂಪೂರ್ಣ ಬೆಂಬಲ ಸುಮಲತಾಗೆ ಇದೆ. ಯಾಕೆಂದರೆ ಅಂಬರೀಷ್ ನನ್ನ ಆತ್ಮೀಯ ‌ಸ್ನೇಹಿತ. ಎಂದು ತಿಳಿಸಿದ್ದಾರೆ.

ಅಪರೇಷನ್ ಕಮಲ ಭೀತಿ ಇಲ್ಲ

ಅಧಿವೇಶನ ಹಿನ್ನೆಲೆ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ಮಾಡುತ್ತಿದ್ದೇವೆ. ಅಪರೇಷನ್ ಕಮಲ ಭೀತಿ ಇಲ್ಲ. ಯಾವುದೇ ಅಪರೇಷನ್ ನಡೆಯೋದಿಲ್ಲ. ಏಕೆಂದರೆ ಬಿಜೆಪಿ ಬಳಿ ಅಪರೇಷನ್ ಥಿಯೇಟರ್ ಇಲ್ಲ ಅಪರೇಷನ್ ಟೇಬಲ್ ಕೂಡ ಇಲ್ಲ ಎಂದು ಹೇಳಿದರು.