ದೇವದುರ್ಗ: ತಾಲೂಕಿನ ಜಾಲಹಳ್ಳಿಯಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಮೃಗಗಳಂತೆ ವರ್ತನೆ ಮಾಡಿ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿ ಪಟ್ಟಣದಲ್ಲಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಕರವೇ (ನಾರಾಯಣಗೌಡ ಬಣ) ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು.
ಜಾಲಹಳ್ಳಿಯಲ್ಲಿ ಮಹಿಳೆ ಮೇಲೆ ನಡೆದ ಹಲ್ಲೆ ಪ್ರಕರಣ ಸಮಾಜವೇ ತಲೆ ತಗ್ಗಿಸುವಂತ ಮಾಡಿದೆ. ಘಟನೆಗೆ ಕಾರಣರಾದವರನ್ನು ಬಂಧನ ಮಾಡುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಇಂಥ ಘಟನೆಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಲಿವೆ. ಮಹಿಳೆಯನ್ನು ಹಾಡಹಗಲೆ ಮರಕ್ಕೆ ಕಟ್ಟಿಹಾಕಿ ಹೊಡೆಯುವ ಸಂಸ್ಕೃತಿಕ ಅನಾಗರಿಕತೆ ತೋರಿಸುತ್ತದೆ ಎಂದು ದೂರಿದರು.
ಕೂಡಲೇ ಹಲ್ಲೆ ಮಾಡಿವರನ್ನು ಬಂಧಿಸಿ ಕಾನೂನು ಪ್ರಕಾರ ಕಠಿಣ ಶಿಕ್ಷೆ ವಿಧಿಸಬೇಕು. ನೊಂದ ಮಹಿಳೆ ಹಾಗೂ ಕುಟುಂಬಕ್ಕೆ ಸೂಕ್ತ ಭದ್ರತೆ ಒಗಿಸಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ನಂದಪ್ಪ ಪಿ.ಮಡ್ಡಿ, ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ, ಭೀಮಣ್ಣ ನಾಯಕ, ಬಸವ ಇದ್ದರು.