ದಲಿತರಿಗೆ ರಕ್ಷಣೆ ಇಲ್ಲವೆಂದು ಆಕ್ರೋಶ

ಹುಣಸೂರು: ದಲಿತ ಯುವಕನ ಬೆತ್ತಲೆ ಮೆರವಣಿಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಇನ್ನಿತರ ಸಂಘಟನೆಗಳ ಸದಸ್ಯರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂದೆ ಜಮಾವಣೆಗೊಂಡ ಪ್ರತಿಭಟನಾಕಾರರು, ದಲಿತರಿಗೆ ರಕ್ಷಣೆ ನೀಡುತ್ತಿಲ್ಲವೆಂದು ಆರೋಪಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು.

ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮಾತನಾಡಿ, ಸಮಾಜದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಬೇರೂರಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ ಎಂದರು.

ಒಂದು ವೇಳೆ ಯುವಕ ದೇವಾಲಯಕ್ಕೆ ಧಕ್ಕೆ ಉಂಟುಮಾಡಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಬಹುದಿತ್ತು. ಆದರೆ, ಅದನ್ನು ಬಿಟ್ಟು ಕೆಲವರು ಕಾನೂನನ್ನು ಕೈಗೆ ತೆಗೆದುಕೊಂಡು, ಯುವಕನನ್ನು ಅಮಾನವೀಯವಾಗಿ ನಡೆಸಿಕೊಂಡಿರುವುದು ಖಂಡನೀಯ. ಸಹಬಾಳ್ವೆ, ಸಹೋದರತ್ವ ಮತ್ತು ಸಮಾನತೆ ಆಶಯದ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಕೆಲವು ವಿಕೃತ ಮನಸ್ಸುಗಳ ಇಂತಹ ನಡವಳಿಕೆ ಸಮಾಜದಲ್ಲಿ ಅಶಾಂತಿಗೆ ಕಾರಣವಾಗುತ್ತದೆ. ಆದ್ದರಿಂದ ಆರೋಪಿಗಳನ್ನು ಶೀಘ್ರ ಬಂಧಿಸಿ, ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನಾಕಾರರಿಂದ ತಹಸೀಲ್ದಾರ್ ಐ.ಇ.ಬಸವರಾಜು ಮನವಿ ಸ್ವೀಕರಿಸಿದರು.ಮುಖಂಡರಾದ ಕಿರಿಜಾಜಿ ಗಜೇಂದ್ರ, ಕಟ್ಟೆಮಳಲವಾಡಿ ದೇವೇಂದ್ರ, ನಸ್ರುಲ್ಲಾಖಾನ್, ಬಾಚಳ್ಳಿ ರಾಜು, ಬಲ್ಲೇನಹಳ್ಳಿ ಕೆಂಪರಾಜು ಇತರರಿದ್ದರು.

Leave a Reply

Your email address will not be published. Required fields are marked *