ಬಸವನಬಾಗೇವಾಡಿ: ಪಂಚಮಸಾಲಿ ಸಮುದಾಯದ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಲಾಠಿಚಾರ್ಜ್ ನಡೆಸಿದನ್ನು ಖಂಡಿಸಿ, ಬಸವೇಶ್ವರ ವೃತ್ತದಲ್ಲಿ ಗುರುವಾರ ಮನಗುಳಿ- ಬಿಜ್ಜಳ ಹಾಗೂ ಬಾರಖೇಡ- ಬೀಳಗಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ಕ್ಷಮೆಯಾಚಿಸಬೇಕು. ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಬೇಕು ಹಾಗೂ ಬಂಧನಕ್ಕೊಳಗಾದ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕು. ಈ ಘಟನೆಯ ಹಿಂದೆ ಕಾಣದ ಕೈಗಳು ಕುತಂತ್ರವಿದ್ದು, ಇದನ್ನು ಸೂಕ್ತ ತನಿಖೆ ಮಾಡಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ವಿಜಯಪುರ ಜಿಲ್ಲಾ ಕೇಂದ್ರ ಸರ್ಕಾರಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ, ಡಾ. ಮಾಂತೇಶ್ ಜಾಲಗೇರಿ, ನ್ಯಾಯವಾದಿ ಸದಾನಂದ ಬಶೆಟ್ಟಿ, ಶ್ರೀಕಾಂತ ಕೊಟ್ರಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಹಾರಿವಾಳ ಆಗ್ರಹಿಸಿದರು.
ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಸಿದ್ದಣ್ಣ ಕಲ್ಲೂರ, ಶ್ರೀಶೈಲ ಮಾಳಜಿ, ರವಿ ಚಿಕ್ಕೊಂಡ ಮಾತನಾಡಿದರು. ಬಾಲಚಂದ್ರ ಮುಂಜಾನೆ, ರವಿ ಪಟ್ಟಣಶೆಟ್ಟಿ, ಸುನಿಲ ಚಿಕ್ಕೊಂಡ, ಮುರುಗೇಶ ನಾಯ್ಕೋಡಿ, ಬಸವರಾಜ ಕೋಟಿ, ಸಂಗನಬಸು ಪೂಜಾರಿ, ಮಂಜುನಾಥ ಜಾಲಗೇರಿ, ಬಸನಗೌಡ ಪಾಟೀಲ, ಪ್ರವೀಣ ಪೂಜಾರಿ, ಪ್ರಕಾಶ ಬೆಣ್ಣೂರ, ಬಸವರಾಜ ಕೋಟ್ಲಿ, ಭೀಮನಗೌಡ ಚಿಕ್ಕೋಂಡ, ಅರವಿಂದ ಗೊಳಸಂಗಿ, ಬಾಬು ಮಸಬಿನಾಳ, ಬದ್ರೂ ಮಣ್ಣೂರ ಮತ್ತಿತರರಿದ್ದರು.
ಈ ಕುರಿತು ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಮನವಿ ಪತ್ರವನ್ನು ಪಂಚಮಸಾಲಿ ತಾಲೂಕು ಯುವ ಘಟಕದ ಅಧ್ಯಕ್ಷ ಸಂಜು ಬಿರಾದಾರ ಓದಿ ನಂತರ ತಹಸೀಲ್ದಾರ್ ಯಮನಪ್ಪ ಸೋಮನಕಟ್ಟಿ ಅವರಿಗೆ ಸಲ್ಲಿಸಲಾಯಿತು.
ಸಾರ್ವಜನಿಕರಿಗೆ ತೊಂದರೆ: ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಾಜ್ಯ ಹೆದ್ದಾರಿ ತಡೆದಿದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.