ಸವಣೂರ: ರೈತರು ತಿರುಗಿ ಬಿದ್ದರೆ ಯಾವುದೇ ಸರ್ಕಾರ ಉಳಿಯುವುದಿಲ್ಲ. ಕಡಕೋಳ ಗ್ರಾಮವಷ್ಟೇ ಅಲ್ಲ, ರಾಜ್ಯದ ಯಾವುದೇ ರೈತರ ಜಮೀನು ಅನ್ಯಾಯವಾಗಿ ವಕ್ಪ್ಗೆ ಹೋಗಲು ಬಿಡುವುದಿಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ರೈತರ ಜಮೀನಿನ ಪಹಣಿಯಲ್ಲಿ ವಕ್ಪ್ ಸೇರಿಸಿದ್ದರ ಹಿನ್ನೆಲೆಯಲ್ಲಿ ಗಲಭೆ ಉಂಟಾಗಿ ಪೊಲೀಸರು 32 ಜನರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದ ತಾಲೂಕಿನ ಕಡಕೋಳ ಗ್ರಾಮಕ್ಕೆ ಸೋಮವಾರ ಮಾಜಿ ಸಚಿವರಾದ ಸಿ.ಟಿ. ರವಿ, ಪಿ. ರಾಜು ಅವರೊಂದಿಗೆ ಭೇಟಿ ನೀಡಿ, ಗ್ರಾಮಸ್ಥರಿಗೆ ಧೈರ್ಯ ತುಂಬಿದರು.
ಕ್ಷೇತ್ರದ ಪ್ರತಿನಿಧಿಯಾಗಿ ಒಂದಿಂಚು ಜಮೀನು ಕೂಡ ಅನ್ಯಾಯವಾಗಿ ವಕ್ಪ್ಗೆ ಹೋಗದಂತೆ ನೋಡಿಕೊಳ್ಳುತ್ತೇನೆ. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ವಕ್ಪ್ ಅದಾಲತ್, ಮಂತ್ರಿ, ಡಿಸಿ ಏನೂ ಮಾಡಲು ಸಾಧ್ಯವಿಲ್ಲ. ಪ್ರಧಾನ ಮಂತ್ರಿ ವಕ್ಪ್ ಕಾನೂನು ಸಂಪೂರ್ಣ ತಿದ್ದುಪಡಿ ಮಾಡಲು ತೀರ್ಮಾನ ಮಾಡಿದ್ದಾರೆ. ಕಂದಾಯ ಇಲಾಖೆ ಜಮೀನು ವಿಚಾರ ನೋಡಿಕೊಳ್ಳಬೇಕು. ಇದರ ವಿವರ ಕೇಳಲು ಸಿಇಒ ಯಾರು ? ರೈತರ ಬಳಿ ನೂರಾರು ವರ್ಷದ ಜಮೀನು ಖರೀದಿ ದಾಖಲೆ ಇದೆ. ಆದರೂ ರಾಜ್ಯ ಸರ್ಕಾರ ರಾತ್ರೋ ರಾತ್ರಿ ಕಳ್ಳತನದಿಂದ ಖಾತೆ ಬದಲು ಮಾಡಲು ಹೊರಟಿದೆ. ರಾಜ್ಯ ಸರ್ಕಾರದ ವಿರುದ್ಧ ಹಳ್ಳಿ ಹಳ್ಳಿಯಲ್ಲೂ ಆಕ್ರೋಶ ಹಬ್ಬಿದೆ. ಈಗ ಜನಶಕ್ತಿ ಮತ್ತು ಅಧಿಕಾರ ಶಾಹಿ ನಡುವೆ ಸಂಘರ್ಷ ನಡೆದಿದೆ. ಜನ ಶಕ್ತಿಯ ಮುಂದೆ ಯಾವ ಶಕ್ತಿಯೂ ನಿಲ್ಲುವುದಿಲ್ಲ ಎಂದರು.
ಮಾಜಿ ಸಚಿವ ಸಿ.ಟಿ. ರವಿ ಮಾತನಾಡಿ, ನಮ್ಮ ರೈತರ ಆಸ್ತಿ, ಮಠ, ಸ್ಮಶಾನವನ್ನು ವಕ್ಪ್ ಹೆಸರಿನಲ್ಲಿ ಕಬಳಿಸಲು ಬಂದರೆ, ಕಡಕೋಳ ಜನರು ಒಬ್ಬಂಟಿ ಅಲ್ಲ, ನಾವು ನಿಮ್ಮೊಂದಿಗೆ ಜೀವಕ್ಕೆ ಜೀವ ಕೊಡಲು ಸಿದ್ದರಿದ್ದೇವೆ. ಅನ್ಯಾಯವಾಗಿ ನಮ್ಮ ಜಮೀನು ವಶಪಡಿಸಿಕೊಳ್ಳಲು ಬಂದರೆ, ಅದಕ್ಕೆ ಉತ್ತರ ಕೊಡಲು ನಮಗೂ ಗೊತ್ತಿದೆ. ಸಂವಿಧಾನ ಉಳಿಸಲು ಕೋಮುವಾದಿಕರಣ ಮಾಡುತ್ತಿರುವ ಕಾಂಗ್ರೆಸ್ಗೆ ಪಾಠ ಕಲಿಸಬೇಕು. ಈ ಉಪ ಚುನಾವಣೆ ನಮ್ಮ ಆಸ್ತಿ ಉಳಿಸಿಕೊಳ್ಳಲು, ನಮ್ಮ ಮಠ, ಸ್ಮಶಾನ, ಸಂವಿಧಾನ, ದೇಶ ಉಳಿಸಲು ಕಾಂಗ್ರೆಸ್ನ್ನು ಸೋಲಿಸಬೇಕು ಎಂದರು.
ಮಾಜಿ ಸಚಿವರಾದ ಪಿ.ರಾಜೀವ, ಶಾಸಕರಾದ ರಾಜೂಗೌಡ ಕಾಗೆ, ಅರವಿಂದ ಬೆಲ್ಲದ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಗಂಗಾಧರ ಬಾಣದ, ತಿಪ್ಪಣ್ಣ ಸುಬ್ಬಣ್ಣನವರ, ಸುಭಾಸ ಗಡೆಪ್ಪನವರ, ಬಸವರಾಜ ಕಳಸೂರ, ರಾಜಶೇಖರ ಬಳ್ಳಾರಿ, ಬಸವರಾಜ ಮತ್ತೂರ, ಮಾರುತಿ ಕಲ್ಯಾಣಿ, ಕಲ್ಲಪ್ಪ ಗುಂಜಳ, ಸುರೇಶ ಗುಜ್ಜರಿ, ಶೇಖಪ್ಪ ಭಜಂತ್ರಿ, ಚನ್ನಪ್ಪ ಧರೆಯಪ್ಪನವರ, ಕೊಡೆಪ್ಪ ಮೂಗದೂರ, ಶಂಭಣ್ಣ ಗುಂಜಳ ಹಾಗೂ ಇತರರು ಇದ್ದರು.