ಹೊಳೆನರಸೀಪುರ: ಗಣರಾಜ್ಯೋತ್ಸವ ಆಚರಣೆ ಸಂಬಂಧ ಶನಿವಾರ ತಾಲೂಕು ಆಡಳಿತ ಕರೆದಿದ್ದ ಪೂರ್ವಭಾವಿ ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ಗೈರಾಗಿದ್ದ ಹಿನ್ನೆಲೆಯಲ್ಲಿ ್ದ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.
ನೀರಾವರಿ, ಲೋಕೋಪಯೋಗಿ, ಮೀನುಗಾರಿಕೆ ಇಲಾಖೆ, ತಾಲೂಕು ಆರೋಗ್ಯಾಧಿಕಾರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಮತ್ತು ಗೃಹ ವಿಜ್ಞಾನ ಕಾಲೇಜು, ಕಾನೂನು ಕಾಲೇಜಿನ ಯಾರೊಬ್ಬರೂ ಸಭೆಗೆ ಬಂದಿರಲಿಲ್ಲ. ಪ್ರತಿ ಬಾರಿಯೂ ಪೂರ್ವಭಾವಿ ಸಭೆಗೆ ಅನೇಕ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಅಂತಹವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ಸಭೆ ಆರಂಭವಾಗುತ್ತಿದ್ದಂತೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಸಭೆಗೆ ಗೈರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಅವರು ಯವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ ಸಭೆಗೆ ತಿಳಿಸಿದರು. ತಕ್ಷಣ ಮಧ್ಯಪ್ರೇಶಿಸಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಓಹಿಲೇಶ್, ಯಾರೆಲ್ಲ ಗೈರಾಗಿದ್ದಾರೆ ಅವರ ವಿವಿರ ನೀಡಿದರೆ ಅಂತಹವರ ವಿರುದ್ಧ ಪ್ರತಿಭಟನೆ ಮಾಡಲಾಗುವುದು ಎಂದರು.
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿ, ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸುವುದರ ಜತೆಗೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ತಿಂಡಿ ವ್ಯವಸ್ಥೆ, ಸ್ತಬ್ಧ ಚಿತ್ರ, ಪಥಸಂಚಲನ, ನಡೆಸಲು ತೀರ್ಮಾನಿಸಲಾಯಿತು. ಮುಖ್ಯಭಾಷಣಕಾರರಾಗಿ ಉಪನ್ಯಾಸಕ ಗಿರೀಶ್ ಅವರಿಗೆ ಅವಕಾಶ ನೀಡಲು ನಿರ್ಧರಿಸಲಾಯಿತು.
ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪ್ರೇಮಾ ಮಂಜುನಾಥ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ಕುಮುದಾ ರಂಗನಾಥ್, ಸಮಾಜ ಕಲ್ಯಾಣ ಇಲಾಖೆಯ ಕೌಸರ್ ಅಹಮದ್, ಹಿಂದುಳಿದ ವರ್ಗಗಳ ಇಲಾಖೆಯ ಮಂಜುನಾಥ್, ರೇಷ್ಮೆ ಇಲಾಖೆ ಅಧಿಕಾರಿ ಬಸವರಾಜಪ್ಪ, ಡಾ.ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯಿತಿ ಎಇಇ ಪ್ರಶಾಂತ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಎಚ್.ಎಸ್.ಪುಟ್ಟಸೋಮಪ್ಪ, ಶಂಕರ್ ನಾರಾಯಣ್ ಐತಾಳ್ ಇತರರು ಸಭೆಯಲ್ಲಿ ಭಾಗವಹಿಸಿದ್ದರು.