ಗುಂಡ್ಲುಪೇಟೆ: ವಿವಿಧ ಸರ್ಕಾರಿ ಇಲಾಖೆಗಳ ಕಾರ್ಯವೈಫಲ್ಯದ ವಿರುದ್ಧ ರೈತಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಹಸಿರು ಸೇನೆ ಮತ್ತು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಗುರುಪ್ರಸಾದ್ ನೇತೃತ್ವದಲ್ಲಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ್, ಅರಣ್ಯ, ಪರಿಸರ, ಪ್ರಾದೇಶಿಕ ಸಾರಿಗೆ, ರಸ್ತೆ ಸಾರಿಗೆ, ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಮುಜರಾಯಿ, ಲೀಡ್ ಬ್ಯಾಂಕ್ ಹಾಗೂ ಪೊಲೀಸ್ ಇಲಾಖೆಗಳ ಲೋಪದೋಷಗಳಿಂದ ಆಗುತ್ತಿರುವ ಅರಾಜಕತೆ ಮತ್ತು ಅವ್ಯವಸ್ಥೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಆಯಾ ಇಲಾಖೆಯ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡರು.
ರೈತ ಸಂಘದ ಜಿಲ್ಲಾಧ್ಯಕ್ಷ ಕುಂದಕೆರೆ ಸಂಪತ್ತು ಮಾತನಾಡಿ, ಪಟ್ಟಣದ ಡಿಪೋದಲ್ಲಿ 134 ಬಸ್‌ಗಳಿದ್ದರೂ ಗ್ರಾಮಾಂತರ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸದ ಬಗ್ಗೆ ಪಟ್ಟಣದ ಸಾರಿಗೆ ಡಿಪೋ ಮ್ಯಾನೇಜರ್ ತ್ಯಾಗರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು. ಬೈಕ್‌ಗಳಲ್ಲಿ ಮೂವರು ಪ್ರಯಾಣಿಸಿದರೆ ದಂಡ ವಿಧಿಸುವ ಪೊಲೀಸರು, ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡದೆ 70-80 ಜನರನ್ನು ಕುರಿಗಳಂತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆ ತನಗಿಷ್ಟ ಬಂದಂತೆ ನಡೆದುಕೊಳ್ಳುತ್ತಿದೆ. ಬೆಟ್ಟಕ್ಕೆ ಹೋಗುವ ಪ್ರಯಾಣಿಕರಿಗೆ ಸಾರಿಗೆ ಬಸ್ ಇದ್ದರೂ ಅರಣ್ಯ ಅಭಿವೃದ್ಧಿ ಸಮಿತಿಯ ಜೀಪುಗಳ ಮೂಲಕ ತಮಗೆ ಬೇಕಾದವರನ್ನು ಕಳುಹಿಸುತ್ತಿದೆ. ಒಂದು ಸಾರಿಗೆ ಬಸ್‌ಗಳ ಸಂಚಾರ ನಿಲ್ಲಿಸಿ, ಇಲ್ಲವೇ ಅರಣ್ಯ ಇಲಾಖೆ ತನ್ನ ಜೀಪುಗಳ ಸಂಚಾರವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಆದಾಯ ಸಂಗ್ರಹ, ಡೀಸೆಲ್ ಉಳಿತಾಯದಲ್ಲಿ ರಾಜ್ಯದಲ್ಲಿಯೇ ಪಟ್ಟಣದ ಸಾರಿಗೆ ಬಸ್ ಡಿಪೋ ನಂ 1 ಸ್ಥಾನದಲ್ಲಿದೆ ಎಂದು ತ್ಯಾಗರಾಜು ಉತ್ತರಿಸಿದ್ದು ಪ್ರತಿಭಟನಾಕಾರರ ಅಪಹಾಸ್ಯಕ್ಕೊಳಗಾಯಿತು. ಡಿಪೋದಲ್ಲಿರುವ ಹೆಚ್ಚಿನ ಬಸ್‌ಗಳು ಹೊಗೆ ಉಗುಳುತ್ತಿದ್ದರೂ ರಿಪೇರಿ ಮಾಡಿಸುತ್ತಿಲ್ಲ. ಡಿಪೋದಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಬಸ್‌ಗಳು ಎಲ್ಲಿ ಎಂದರೆ ಅಲ್ಲಿ ಕೆಟ್ಟು ನಿಲ್ಲುತ್ತಿವೆ. ಇನ್ನಾದರೂ ಸರಿಯಾಗಿ ನಿರ್ವಹಣೆ ಮಾಡಲು ಕ್ರಮಕೈಗೊಳ್ಳದಿದ್ದರೆ ಡಿಪೋ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬಂಡೀಪುರ ಹುಲಿ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಜಿಲ್ಲಾಧಿಕಾರಿಗಳ ಸಭೆಗೆ ಹೋಗಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳು ನಿರ್ದೇಶನ ನೀಡಿದ್ದರಿಂದ ಗೋಪಾಲಸ್ವಾಮಿಬೆಟ್ಟದಲ್ಲಿ ಚಿತ್ರೀಕರಣ ಮಾಡಲು ಅವಕಾಶ ನೀಡಲಾಗಿತ್ತು ಎಂದು ಬಂಡೀಪುರ ಉಪವಿಭಾಗದ ಎಸಿಎಫ್ ಎನ್.ಪಿ.ನವೀನ್ ಕುಮಾರ್ ಉತ್ತರಿಸಿದರು.
ಸೆಸ್ಕ್ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಕೆ ಮಾಡಬಾರದು ಹಿಂದಿನಂತೆ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು ಎಂದು ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ ಅವರಿಗೆ ಒತ್ತಾಯಿಸಿದರು.
ತಾಲೂಕಿನಲ್ಲಿ ಅಕ್ರಮ ಗಣಿಗಾರಿಕೆ, ನೆರೆ ರಾಜ್ಯಗಳಿಗೆ ಕಲ್ಲು ಸಾಗಣೆ ದಂಧೆ ಹೆಚ್ಚಾಗಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಸಾರಿಗೆ ಇಲಾಖೆಗಳು ಕಣ್ಣುಮುಚ್ಚಿ ಕುಳಿತಿವೆ. ಗೋಪಾಲಸ್ವಾಮಿ ಬೆಟ್ಟದಲ್ಲಿ ಅಕ್ರಮ ಚಿತ್ರೀಕರಣಕ್ಕೆ ಪರೋಕ್ಷವಾಗಿ ಸಹಕರಿಸಿದ ಅರಣ್ಯ ಸಂರಕ್ಷಣಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಇಲಾಖೆ ಕಾರ್ಯದರ್ಶಿ, ತಹಸೀಲ್ದಾರ್ ನೆರವಾಗಿದ್ದು ಸಂವಿಧಾನದ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಆದ್ದರಿಂದ ಇವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ದೂರು ನೀಡಿದರು.
ಡಾ.ಗುರುಪ್ರಸಾದ್, ಮಾಡ್ರಹಳ್ಳಿ ಮಹದೇವಪ್ಪ, ಹಾಲಹಳ್ಳಿ ಮಹೇಶ್, ಕಬ್ಬಹಳ್ಳಿ ಪ್ರಕಾಶ್, ಬೆಟ್ಟದಮಾದಹಳ್ಳಿ ಲೋಕೇಶ್, ಮೂರ್ತಿ, ಹಾಲಹಳ್ಳಿ ಮೂರ್ತಿ, ಚಿಕ್ಕಣ್ಣ, ಮಹೇಶ್ ಚಂದ್ರ, ಬೆಟ್ಟಹಳ್ಳಿ ಗುರು ಇತರರು ಇದ್ದರು.