ರೈತರಿಗೆ ಬ್ಯಾಂಕ್‌ನಿಂದ ನೋಟಿಸ್


ವಿಜಯವಾಣಿ ಸುದ್ದಿಜಾಲಹಾಸನ
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡಿಸಿದ್ದರೂ ಬ್ಯಾಂಕ್‌ನಿಂದ ನೋಟಿಸ್ ಜಾರಿ ಪ್ರಕ್ರಿಯೆ ಮುಂದುವರಿದಿದೆ ಎಂದು ಆರೋಪಿಸಿ ರೈತ ಸಂಘದ ಕಾರ್ಯಕರ್ತರು ಸೋಮವಾರ ನೋಟಿಸ್ ಪ್ರತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಎಪಿಎಂಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ರೈತರ ಉಳಿವಿಗಾಗಿ ಕೈಗೊಳ್ಳಬೇಕಾದ ಹೋರಾಟ ಕ್ರಮಗಳ ಕುರಿತು ಚರ್ಚಿಸಲಾಯಿತು. ನಂತರ ಬ್ಯಾಂಕ್‌ನಿಂದ ಜಾರಿಯಾಗುವ ಸಾಲ ಪಾವತಿ ನೋಟಿಸ್‌ಗೆ ಬೆಂಕಿ ಹಚ್ಚಿದರು. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದರು. ಅಧಿಕಾರದ ಚುಕ್ಕಾಣಿ ಹಿಡಿದು ವರ್ಷ ಮುಗಿದರೂ ಸಾಲ ಮನ್ನಾ ಮಾಡಿಲ್ಲ. ಕೇವಲ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಿಗೆ ಜಾಹೀರಾತು ನೀಡುವುದೇ ರಾಜ್ಯ ಸರ್ಕಾರದ ಕೆಲಸವಾಗಿದೆ ಎಂದು ಟೀಕಿಸಿದರು.
ಸಾಲಮನ್ನಾಗೆ ಸಂಬಂಧಿಸಿದಂತೆ ನೂರಾರು ಷರತ್ತುಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಸರ್ಕಾರ ನೀಡಿರುವ ಋಣಮುಕ್ತ ಪತ್ರ ಗಳಿಗೆ ಬ್ಯಾಂಕ್‌ನಲ್ಲಿ ಕಿಮ್ಮತ್ತಿಲ್ಲ. ಅಧಿಕಾರಿಗಳು ಕೋರ್ಟ್‌ಗೆ ಹಾಜರಾಗುವಂತೆ ಎಚ್ಚರಿಕೆ ನೀಡುತ್ತಾರೆ. ಮಳೆ ಕೊರತೆಯಿಂದ ಇಳು ವರಿಯಿಲ್ಲದೆ ಕಂಗೆಟ್ಟಿರುವ ರೈತರಿಗೆ ಸಾಲಬಾಧೆ ವಿಪರೀತ ಕಾಡುತ್ತಿದೆ ಎಂದರು.
ಪರಿಹಾರ ಸಿಕ್ಕಿಲ್ಲ: ಅರಕಲಗೂಡು ತಾಲೂಕಿನ ಗ್ರಾಮವೊಂದರ ಬಸವೇಗೌಡ ಎಂಬುವರು ಕೃಷಿಗಾಗಿ ಮಾಡಿದ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದುವರೆಗೆ ಮೃತರ ಕುಟುಂಬಕ್ಕೆ ಪರಿಹಾರ ದೊರೆತಿಲ್ಲ. ಮನೆಯ ಯಜಮಾನ ಸತ್ತು ಹೋದ ಬಳಿಕ ಕುಟುಂಬದ ಇತರ ಸದಸ್ಯರು ಅಕ್ಷರಶ: ಬೀದಿ ಪಾಲಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಖರ್ಚು, ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.
ರೈತರ ಸಮಸ್ಯೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್, ಉಪಾಧ್ಯಕ್ಷ ಬಳ್ಳೂರು ಸ್ವಾಮೀಗೌಡ, ಶ್ರೀಕಂಠ ದೊಡ್ಡೇರಿ, ಮಲ್ಲೇಶ್, ಯೋಗಣ್ಣ, ಹೊಳೆನರಸೀಪುರದ ರುದ್ರೇಗೌಡ, ಸುರೇಶ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *