ಮತಾಂತರ ವಿರುದ್ಧ ಆಕ್ರೋಶ

ಮೇಲುಕೋಟೆ: ಮತಾಂತರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಮಹಾಪೂರವೇ ವ್ಯಕ್ತವಾಗುತ್ತಿದೆ. ಮತಾಂತರಕ್ಕೆ ಉತ್ತೇಜನ ನೀಡುತ್ತಿರುವ ವ್ಯಕ್ತಿಗಳನ್ನು ಗ್ರಾಮದಿಂದ ಗಡಿಪಾರು ಮಾಡಬೇಕು ಎಂಬ ಒತ್ತಾಯ ವೈರಲ್ ಆಗಿದೆ.

ಮೇಲುಕೋಟೆ ಸಮೀಪದ ಜಕ್ಕನಹಳ್ಳಿ ಗ್ರಾಮದಲ್ಲಿ ಹಿಂದು ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮಹಿಳೆಯೊಬ್ಬರು ಇತ್ತೀಚೆಗೆ ತನ್ನ 80 ವರ್ಷದ ತಾಯಿಯನ್ನು ಮತಾಂತರಕ್ಕೆಂದು ಕರೆದುಕೊಂಡು ಹೋಗುತ್ತಿದ್ದಾಗ ಸ್ಥಳೀಯರು ತಡೆದು ತರಾಟೆಗೆ ತೆಗೆದುಕೊಂಡಿದ್ದರು. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಮತಾಂತರಗೊಂಡ ವ್ಯಕ್ತಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮತಾಂತಗೊಂಡ ವ್ಯಕ್ತಿಗಳು ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋಗಳನ್ನು ಫೇಸ್‌ಬುಕ್, ವಾಟ್ಸ್‌ಆ್ಯಪ್‌ಗಳಲ್ಲಿ ಹರಿಯಬಿಡಲಾಗಿದೆ.

ಬಡವರಿಗೆ ಹಣ ಮತ್ತಿತರ ಆಮಿಷ ಒಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇದನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ಮಾಡುವ ಕುರಿತು ಅಂತರ್ಜಾಲಸದಲ್ಲಿ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ.