ನವದೆಹಲಿ: ಆದಾಯ ತೆರಿಗೆ ಮತ್ತು ಅಕ್ರಮ ಹಣಕಾಸು ತಡೆ ಕಾನೂನಿನ (ಪಿಎಂಎಲ್ಎ) ವ್ಯಾಪ್ತಿಯಲ್ಲಿ ಬರುವ ಅಪರಾಧಗಳನ್ನು ಕ್ರಿಮಿನಲ್ ಸ್ವರೂಪದಿಂದ ಹೊರಗಿಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಫೆಬ್ರವರಿ 1ರಂದು ಮಂಡಿಸುವ ಆಯವ್ಯಯ ಪತ್ರದಲ್ಲೇ ಹಣಕಾಸು ಸಚಿವೆ ಈ ಕುರಿತು ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಉದ್ಯಮ ವಲಯದಲ್ಲಿ ವಿಶ್ವಾಸ ವೃದ್ಧಿಸಲು ಈ ಸುಧಾರಣೆ ತರಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಆರ್ಥಿಕ ಅಪರಾಧ ಎಸಗುವವರಿಗೆ ಕ್ರಿಮಿನಲ್ ಪ್ರಕರಣಗಳಂತೆ ಶಿಕ್ಷೆ ನೀಡದೆ ಕೇವಲ ದಂಡ ವಿಧಿಸಲು ಐಟಿ ಹಾಗೂ ಪಿಎಂಎಲ್ಎ ಕಾನೂನಿಗೆ ತಿದ್ದುಪಡಿ ತರುವ ಉದ್ದೇಶವಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ದೇಶವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿಯತ್ತ ಕೊಂಡೊಯ್ಯಲು ಇದೊಂದು ಮಹತ್ವದ ಹೆಜ್ಜೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಕಾರ್ಪೆರೇಟ್ ಕಾನೂನುಗಳನ್ನು ಕ್ರಿಮಿನಲ್ ಸ್ವರೂಪದಿಂದ ಹೊರಗಿಡುವುದು, ತೆರಿಗೆ ವಿವಾದಗಳನ್ನು ಬಗೆಹರಿಸುವುದು ಮತ್ತು ಸರ್ಕಾರಿ ಉದ್ದಿಮೆಗಳನ್ನು ಅತಿ ವೇಗದಲ್ಲಿ ಖಾಸಗೀಕರಣಗೊಳಿಸುವುದು ಗುರಿ ಸಾಧನೆಗೆ ತೆಗೆದುಕೊಳ್ಳುವ ಕ್ರಮಗಳಲ್ಲಿ ಸೇರಿವೆ ಎಂದು ವಿಚಾರ ಸಂಕಿರಣವೊಂದರಲ್ಲಿ ನಿರ್ಮಲಾ ವಿವರಿಸಿದ್ದಾರೆ.
ಕಂಪನಿಗಳ ಕಾನೂನಿನ ಕೆಲವು ನಿಯಮಗಳಲ್ಲಿನ ಕ್ರಿಮಿನಲ್ ಸ್ವರೂಪ ತೆಗೆದುಹಾಕಲಾಗುತ್ತದೆ. ನಂತರ ಅದನ್ನು ಆದಾಯ ತೆರಿಗೆ ಮತ್ತು ಪಿಎಂಎಲ್ಎ ಕಾನೂನಿಗೂ ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.