ವೈದ್ಯರ ಮುಷ್ಕರಕ್ಕೆ ಜಿಲ್ಲಾದ್ಯಂತ ಬೆಂಬಲ


ವಿಜಯವಾಣಿ ಸುದ್ದಿಜಾಲ ಹಾಸನ
ಪಶ್ಚಿಮ ಬಂಗಾಳದಲ್ಲಿ ಕಿರಿಯ ವೈದ್ಯರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಸೋಮವಾರ ಕರೆ ಕೊಟ್ಟಿದ್ದ ಮುಷ್ಕರಕ್ಕೆ ಜಿಲ್ಲಾದ್ಯಂತ ಬೆಂಬಲ ವ್ಯಕ್ತವಾಯಿತು.
ಬೆಳಗ್ಗೆ 6 ರಿಂದಲೇ ಆಸ್ಪತ್ರೆ ಬಾಗಿಲು ಮುಚ್ಚಿ ವೈದ್ಯರ ರಕ್ಷಣೆಗೆ ಸೂಕ್ತ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ 75 ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಎದುರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸ ಲಾಯಿತು. ಸರ್ಕಾರಿ ವೈದ್ಯರು ಬೆಳಗ್ಗೆ 10 ರಿಂದ 10.45ರವರೆಗೆ ಧರಣಿ ನಡೆಸಿ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ತುರ್ತು ಚಿಕಿತ್ಸೆ ಲಭ್ಯ: ಖಾಸಗಿ ಕ್ಲಿನಿಕ್, ಲ್ಯಾಬ್ ಸೇವೆ ಸಂಪೂರ್ಣವಾಗಿ ಬಂದ್ ಆಗಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸಾ ಸೇವೆ ಹೊರತುಪಡಿಸಿ ಉಳಿದ ಎಲ್ಲ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಮಾಹಿತಿ ಸಮಸ್ಯೆಯಿಂದ ಆಸ್ಪತ್ರೆಗೆ ಬಂದ ರೋಗಿಗಳು ತೊಂದರೆ ಎದುರಿಸಬೇಕಾಯಿತು. ಎಲ್ಲ ಖಾಸಗಿ ಆಸ್ಪತ್ರೆಗಳ ಮುಂದೆ ಬಂದ್‌ನ ಸೂಚನಾ ಫಲಕ ಅಳವಡಿಸಲಾಗಿತ್ತು.
ವೈದ್ಯರ ಮುಷ್ಕರದ ಪರಿಣಾಮ ಎದುರಿಸಲು ಸಜ್ಜಾಗಿದ್ದ ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿದವು. ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೋಮವಾರ 1800 ಹೊರ ರೋಗಿಗಳು ದಾಖಲಾಗಿದ್ದಾರೆ. ಪ್ರತಿದಿನ ಈ ಪ್ರಮಾಣ 1500ಗೆ ಸೀಮಿತವಾಗಿರುತ್ತದೆ. ಖಾಸಗಿ ವೈದ್ಯರ ಮುಷ್ಕರಿಂದ ಸರ್ಕಾರಿ ಆಸ್ಪತ್ರೆಗೆ ಬಂದವರ ಸಂಖ್ಯೆ ಹೆಚ್ಚಾಯಿತು. ಸರ್ಕಾರಿ ವೈದ್ಯರಿಗೆ ಸೋಮವಾರದ ರಜೆ ಕಡಿತಗೊಳಿಸಲಾಗಿತ್ತು. ಹೆಚ್ಚುವರಿ ಕೆಲಸ ಮಾಡುವಂತೆ ಆದೇಶಿಸಲಾಗಿತ್ತು. ವೈದ್ಯಕೀಯ ವಿದ್ಯಾರ್ಥಿಗಳು ಹಿರಿಯ ವೈದ್ಯರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸಿದರು.
ಸರ್ಕಾರ ಕ್ರಮ ಕೈಗೊಳ್ಳಲಿ:
ವೈದ್ಯರನ್ನು ದೇವರೆಂದು ಕರೆಯಲಾಗುತ್ತದೆ. ಆದರೆ, ಯಾವುದೇ ತಪ್ಪು ಮಾಡದ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವುದು ಯಾವ ನ್ಯಾಯ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಪಶ್ಚಿಮ ಬಂಗಾಳ ಸಿಎಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವ ವೈದ್ಯರೂ ರಾಜಕೀಯ ಲಾಭಕ್ಕಾಗಿ ಹೋರಾಡುತ್ತಿಲ್ಲ. ವೃತ್ತಿ ಮೇಲೆ ಗೌರವವಿಟ್ಟು ಸಹೋದ್ಯೋಗಿಯೊಬ್ಬರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ ಎಂದರು.
ಜೂನ್ 10 ರಂದು ಕೊಲ್ಕತಾದ ಎನ್‌ಆರ್‌ಎಸ್ ವೈದ್ಯಕೀಯ ಮಹಾವಿದ್ಯಾಲಯದ ಡಾ. ಪರಿಬಾಹ ಮುಖರ್ಜಿ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ರೀತಿಯ ಪ್ರಕರಣಗಳು ಮರುಕಳಿಸುತ್ತಿವೆ. ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆ ನಡೆಸಿದರೆ ಮೂರು ವರ್ಷ ಕಠಿಣ ಶಿಕ್ಷೆಯ ಕಾನೂನು ಜಾರಿಯಲ್ಲಿದೆ. ಅದನ್ನು ಏಳು ವರ್ಷಕ್ಕೆ ಏರಿಸಬೇಕು. ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ವೈದ್ಯರ ಮೇಲೆ ನಡೆಯುತ್ತಿರುವ ನಿರಂತರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೆ ಭಾರತೀಯ ವೈದ್ಯಕೀಯ ಸಂಘ ಸರ್ಕಾರದ ಗಮನ ಸೆಳೆದಿದ್ದರೂ ಯಾವ ಸರ್ಕಾರವೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ವೈದ್ಯರೂ ಮನುಷ್ಯರೆಂದು ತಿಳಿದು ಚಿಕಿತ್ಸೆ ಸಂದರ್ಭದಲ್ಲಿ ವೈದ್ಯರಿಗೆ ಬೆಂಬಲ ನೀಡಬೇಕು ಎಂದರು. ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಶಿವಪ್ರಸಾದ್, ಪ್ರವೀಣ್, ಡಾ. ಕೆ. ನಾಗೇಶ್ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *