ಕನ್ನಡ ಚಿತ್ರಂಗದ ಬೆಳವಣಿಗೆಗೆ ಸರ್ಕಾರ ಸದಾ ಸಿದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು: ಯಾವುದೇ ಭಾಷೆಯ ತಿಳಿವಳಿಕೆ ಇಲ್ಲದೆ ಹೋದರೂ ಸಿನಿಮಾಗಳು ಅರ್ಥವಾಗುತ್ತವೆ. ಸಿನಿಮಾಗಳಿಗೆ ಭಾಷೆಯ ಅಗತ್ಯವಿಲ್ಲ‌. ಚಲನಚಿತ್ರೋತ್ಸವದ ಮೂಲಕ ರಾಜ್ಯದ ಜನರಿಗೆ ಹಲವಾರು ದೇಶದ ಚಿತ್ರಗಳನ್ನ ನೋಡುವ ಅವಕಾಶ ಕಲ್ಪಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ತಿಳಿಸಿದರು.

ವಿಧಾನಸೌಧದ ಬ್ಯಾಕ್ವೆಂಟ್​ ಹಾಲ್​​ನಲ್ಲಿ ನಡೆದ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಭಾಷೆಗಳ ಚಿತ್ರಗಳ ಬಗ್ಗೆ ಚರ್ಚೆ ಮಾಡುವುದಾದರೆ ಬಿ ವಿ ಕಾರಂತ್, ಪುಟ್ಟಣ್ಣ ಕಣಗಾಲ್, ಭಗವಾನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದು ಬಂದಿದ್ದೇವೆ. ಇವತ್ತು ಕನ್ನಡ ಚಿತ್ರರಂಗ 200, 300 ಚಿತ್ರಗಳನ್ನು ಮಾಡುವಂತೆ ಬೆಳೆದಿದೆ. ಅದರೂ ಬೇರೆ ಭಾಷೆಗಳ ಜತೆ ಕಾಂಪೀಟಿಷನ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ ಎಂದರು.

ಕನ್ನಡ ಚಿತ್ರರಂಗದ ಬೆಳವಣಿಗೆಗೆ ನಮ್ಮ ಸರ್ಕಾರದಿಂದ ಏನು ಬೇಕು ಎನ್ನುವ ಕುರಿತು ಬ್ಲೂ ಪ್ರಿಂಟ್‌ ಕೊಟ್ಟರೆ ಅದನ್ನು ನಾವು ಕೊಡಲು ಸಿದ್ಧರಿದ್ದೇವೆ. ಏಕ ಪರದೆ ಚಿತ್ರಮಂದಿರಗಳು ಕಡಿಮೆ ಆಗುತ್ತಿವೆ. ಸಿಂಗಲ್ ಥಿಯೇಟರ್‌ಗಳಲ್ಲಿ ಬರುವಂತಹ ವರಮಾನ ಕಮ್ಮಿ ಆಗಿದೆ. ಎಲ್ಲರೂ ಮಾಲ್‌ಗಳ ಕಡೆ ಹೋಗುತ್ತಿದ್ದಾರೆ. ಚಿತ್ರರಂಗದ ಬೆಳವಣಿಗೆಗೆ ನಮ್ಮಲ್ಲಿ ಒಗ್ಗಟ್ಟು ಇರಬೇಕು. ಬಾಡಿಗೆ‌ಯನ್ನು ನಿರ್ಮಾಪಕ ಕೊಟ್ಟಮೇಲೆ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಎಂದು ಹೇಳಿದರು.

ಚಿತ್ರಕಥೆ, ಗುಣಾತ್ಮಕತೆ, ಮೇಕಿಂಗ್ ಬಗ್ಗೆ ಗಮನಹರಿಸಬೇಕು ಎಂದು ನಮ್ಮ ನಿರ್ದೇಶಕರಲ್ಲಿ ಮನವಿ ಮಾಡುತ್ತೇನೆ. ಅದ್ಧೂರಿ ಏನೂ ಇರಬೇಕು ಎಂದೇನಿಲ್ಲ. ಕಡಿಮೆ ವೆಚ್ಚದಲ್ಲಿ ಬಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚೆನ್ನಾಗಿದೆ. ಒಳ್ಳೆಯ ಕಥೆ ಮಾಡೋಕೆ ಶ್ರಮ ಪಟ್ಟರೆ ಅದಕ್ಕೆ ಯಶಸ್ಸು ಇರುತ್ತದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)