ನಮ್ಮ ಹೋರಾಟ ಕಾಶ್ಮೀರಕ್ಕಾಗಿಯೇ ಹೊರತು ಕಾಶ್ಮೀರಗಳ ಮೇಲಲ್ಲ: ನರೇಂದ್ರ ಮೋದಿ

ಟೊಂಕ್‌: ಪುಲ್ವಾಮಾ ಉಗ್ರ ದಾಳಿಯನ್ನು ಮುಂದಿಟ್ಟುಕೊಂಡು ದೇಶದ ವಿವಿಧೆಡೆ ಕಾಶ್ಮೀರಿಗಳನ್ನು ಗುರಿಯಾಗಿಸಿಕೊಳ್ಳುವವರಿಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದು, ನಮ್ಮ ಹೋರಾಟವು ಕಾಶ್ಮೀರಕ್ಕಾಗಿ ಹೊರತು ಕಾಶ್ಮೀರಿಗಳ ವಿರುದ್ಧವಲ್ಲ ಎಂದು ಹೇಳಿದ್ದಾರೆ.

ರಾಜಸ್ಥಾನದ ಟೊಂಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಗೆ ಕಾಶ್ಮೀರಿಗಳು ತತ್ತರಿಸಿ ಹೋಗುತ್ತಿದ್ದಾರೆ ಮತ್ತು ದೇಶವು ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ನಮ್ಮ ಹೋರಾಟವು ಕಾಶ್ಮೀರಿಗಳ ಮೇಲಲ್ಲ. ಆದರೆ ಭಯೋತ್ಪಾದನೆಯ ವಿರುದ್ಧವಾಗಬೇಕು. ಮಾನವೀಯತೆಯಿಲ್ಲದ ಶತ್ರುಗಳ ವಿರುದ್ಧ ಹೋರಾಟವಾಗಬೇಕು ಮತ್ತು ಕಳೆದ ಕೆಲ ದಿನಗಳಿಂದ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಆಗುತ್ತಿರುವ ದೌರ್ಜನ್ಯವು ಈ ದೇಶದಲ್ಲಿ ನಡೆಯಬಾರದು ಎಂದು ಹೇಳಿದರು.

ಪುಲ್ವಾಮಾ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ 40 ಜನ ಯೋಧರನ್ನು ಬಲಿತೆಗೆದುಕೊಂಡ ಬೆನ್ನಲ್ಲೇ ದೇಶಾದ್ಯಂತ ಕಾಶ್ಮೀರಿಗಳ ಮೇಲಿನ ದಾಳಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಕಾಶ್ಮೀರಿಗಳನ್ನು ಬಹಿಷ್ಕರಿಸಬೇಕು ಎಂಬ ಕುರಿತು ವರದಿಯಾಗುತ್ತಿತ್ತು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಕೂಡ ಶುಕ್ರವಾರ ಈ ರೀತಿಯ ಘಟನೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ 10 ರಾಜ್ಯಗಳಿಗೆ ಸೂಚಿಸಿತ್ತು. (ಏಜೆನ್ಸೀಸ್)