ನಮ್ಮ ರೈತರ ಉದ್ಧಾರಕ್ಕೆ ಬೇಕು ನೂರು ವರ್ಷ!

| ಡಾ.ಕೆ.ವಿದ್ಯಾಶಂಕರ್

ಬಹುಬಗೆ-ಇದು ಭಾರತದ ಬೆಡಗು. ಬಹುಬಗೆ ಹೆಗ್ಗಳಿಕೆಯೂ ಹೌದು. ಸಹಜವೂ ಹೌದು. ಆದರೆ, ನಮ್ಮ ತೊಂದರೆ ತಾಪತ್ರಯ ಇರುವುದು ಇಲ್ಲೇ. ತಲೆಗೆಲ್ಲ ಒಂದೇ ಮಂತ್ರ ಎಂಬುದು ನಮ್ಮ ಜಾಯಮಾನ.

ಅದು ಎಂದಿಗೂ ಸಲ್ಲದು. ಬಹುಬಗೆ ಇರುವಾಗ ತಲೆಗೆಲ್ಲ ಒಂದೇ ಮಂತ್ರ ಇರುವುದಾದರೂ ಹೇಗೆ? ಇದೇ ನಮ್ಮ ರೈತರ ಸಮಸ್ಯೆ, ದೇಶದ ಕೃಷಿ ಸಮಸ್ಯೆ. ಭಾರತದಲ್ಲಿ ಕೃಷಿಯಲ್ಲಿ ದೊಡ್ಡ ವಿಭಜನೆ ಇದೆ! ಅದೆಂದರೆ, ಅಕ್ಕಿ-ಗೋಧಿ ಜೋಡಿಯ ಸೀಮೆ ಒಂದು. ಇಲ್ಲಿದೆ ನೀರಾವರಿ, ಕೃಷಿಗೆ ಬೇಕಾದ ಸಾಮಗ್ರಿಗಳ ಅಗ್ಗದ ದರದ ಪೂರೈಕೆ, ಕೃಷಿ ಉಪಕರಣಗಳು-ಯಂತ್ರಗಳ ಬಳಕೆ, ಇಲ್ಲಿದೆ ಧಾನ್ಯ ಸಂಗ್ರಹಣೆ ವ್ಯವಸ್ಥೆ, ಇಲ್ಲಿದೆ ಬೆಂಬಲ ಬೆಲೆಯ ಅಭಯಹಸ್ತ. ಇಷ್ಟೆಲ್ಲ ಇರುವ ಸಾಹುಕಾರಿ ಬೇಸಾಯ ಇರುವುದು ಉತ್ತರ ಭಾರತದಲ್ಲಿ!

ಕೃಷಿ ವಿಭಜನೆಯ ಇನ್ನೊಂದು ಬಗೆಯೆಂದರೆ, ನೀರಾವರಿ ಇಲ್ಲದ ಮಳೆ ಆಧರಿಸಿದ ಬೇಸಾಯ. ಇಲ್ಲಿ ಬೆಳೆ ಪೈರು ಸಂಗ್ರಹಣೆ ವ್ಯವಸ್ಥೆ ಇಲ್ಲ, ಬದಲಾಗಿ ಮಾರುಕಟ್ಟೆಯ ನಿರ್ಬಂಧಗಳಿವೆ. ಇಂಥ ಅನೇಕ ಉಪದ್ರವಗಳು ಇಲ್ಲಿವೆ. ಇಲ್ಲಿ ಅಕ್ಕಿ-ಗೋಧಿ ಬಿಟ್ಟು ಇನ್ನೆಲ್ಲ ಬೆಳೆಗಳಿವೆ. ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ, ಹತ್ತಿ, ಹಾಗೂ ಶೇಂಗಾ, ಸೋಯಾ, ಸೂರ್ಯಕಾಂತಿ ಇತ್ಯಾದಿ ಎಣ್ಣೆ ಬೀಜಗಳು, ತೊಗರಿಬೇಳೆ ಇತ್ಯಾದಿ ನಾನಾ ಬೇಳೆಗಳು, ತರಕಾರಿ, ಹಣ್ಣುಹಂಪಲುಗಳು ಇಲ್ಲಿವೆ. ಜತೆಗೆ, ಇಲ್ಲಿ ಜೀವನಾಧಾರ ಆಗಿರುವುದು ಪಶುಪಾಲನೆಯೇ. ಇದು, ಉತ್ತರದ ರಾಜಸ್ಥಾನದಿಂದ ದಕ್ಷಿಣದ ಕರ್ನಾಟಕದವರೆಗೆ ಇರುವ ರಾಜ್ಯಗಳದ್ದು. ಒಂದು ಬಂಗಾಳಕೊಲ್ಲಿ ಸೇರುವ ನದಿಗಳ ಸೀಮೆಯಲ್ಲಿರುವ ಕೃಷಿ ರಾಜ್ಯಗಳು. ಇದು ಅಕ್ಕಿ-ಗೋಧಿ-ಕಬ್ಬು ವಲಯ. ಇನ್ನೊಂದು, ಅರಬ್ಬಿ ಸಮುದ್ರದ ಕಿನಾರೆ ಹೊಂದಿರುವ ರಾಜ್ಯಗಳು. ಇವೆರಡರ ಕೃಷಿ ಪರಿಸ್ಥಿತಿ ಪೂರ್ತಿ ವಿರುದ್ಧ-ಅಜಗಜಾಂತರ. ಆದರೆ, ನಮ್ಮ ದೇಶದ ಕೃಷಿ ಮಾತು ಬಂದಾಗ ಎರಡೂ ಒಂದೇ! ನೀರಾವರಿ ಸೀಮೆಯೂ ಒಂದೇ, ಮಳೆ ಆಧಾರಿತ ಕೃಷಿ ಪ್ರದೇಶವೂ ಒಂದೇ! ಬರ ಪ್ರದೇಶದ ರಾಜ್ಯಗಳು ಒಂದೇ!!

ಕೃಷಿ ನಮ್ಮಲ್ಲಿ ಅತ್ಯಂತ ಸುಸ್ಥಿತಿಯಲ್ಲಿದೆ ಎಂಬುದೇ ಬಹುತೇಕರ ನಂಬಿಕೆ. ಅಕ್ಕಿಗೆ ಬರ ಇಲ್ಲ, ಗೋಧಿಗೆ ಬರ ಇಲ್ಲ, ಸಕ್ಕರೆಯಂತೂ ಸುಗ್ಗಿಯ ಹೊಳೆ ಕಂಡಿದೆ. ಹೀಗಿರುವಾಗ ಕೃಷಿ ವಲಯ ಸುಭಿಕ್ಷೆಯಲ್ಲಿದೆ ಎಂಬ ಭಾವನೆ ದೇಶದಲ್ಲಿ ವ್ಯಾಪಕವಾಗಿದೆ. ಆದರೆ ವಾಸ್ತವ ಸ್ಥಿತಿ ಭಯಾನಕವಾಗಿದೆ. ಕರ್ನಾಟಕ, ಮಹಾರಾಷ್ಟ್ರ ಗುಜರಾತ್, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ (ಒಂದು ಭಾಗ) ಬರಪೀಡಿತ ರಾಜ್ಯಗಳಾಗಿವೆ. ಇಲ್ಲಿ ಕಳೆದ ಐದು ವರ್ಷಗಳಲ್ಲಿ ಮೂರು ವರ್ಷಗಳ ಬರಗಾಲವು ಕೃಷಿಕರಿಗೆ ಬರೆ ಹಾಕಿದೆ. ಮಳೆ ಕೊರತೆ ಹಾಗೂ ಬಿರುಬಿಸಿಲು ಎರಡೂ ಇಲ್ಲಿ ಕಾಡುತ್ತದೆ. ಅಕ್ಕಿ ಗೋಧಿ ಸೀಮೆಯನ್ನು ಕೂಡ ಹವಾಮಾನ ವೈಪರೀತ್ಯ ಕಾಡುತ್ತದೆ ನಿಜ. ಆದರೆ ಅದರ ಪರಿಣಾಮ ಅಲ್ಲಿಯೇ ಬೇರೆ, ಇಲ್ಲಿಯೇ ಬೇರೆ. ನೀರಾವರಿ ಇರುವ ನಾಡಿನಲ್ಲಿ ಬಿಸಿಲಾಗಲಿ, ಮಳೆ ಕೊರತೆಯಾಗಲಿ, ಅಲ್ಲಿನ ರೈತರ ಆದಾಯ ನಷ್ಟ ಶೇ. 7ರವರೆಗೆ ಆಗಬಹುದು. ಆದರೆ, ಬರಪೀಡಿತ ರಾಜ್ಯಗಳಲ್ಲಿ ಈ ಹವಾಮಾನ ವೈಪರೀತ್ಯದ ಪರಿಣಾಮ ಘೊರ. ಇಲ್ಲಿ ಮಳೆ ಕಡಿಮೆಯಾದರೆ ಹಿಂಗಾರಿನಲ್ಲಿ ರೈತರಿಗೆ ನಷ್ಟ ಶೇ. 7ರಷ್ಟು ಆಗಬಹುದು. ಮುಂಗಾರಿನಲ್ಲಿ ರೈತರ ಆದಾಯ ಶೇ. 15ರಷ್ಟು ಕುಸಿಯಬಹುದು. ಈ ಬೆಳೆ ನಷ್ಟವು ಶೇ.25ರವರೆಗೂ ಹಿಗ್ಗಬಹುದು! ಇಂತಹ ಘೊರ ಪರಿಸ್ಥಿತಿ ಎದುರಿಸುತ್ತಿರುವ ಬರಪೀಡಿತ ರಾಜ್ಯಗಳ ರೈತರು ನಿಜಕ್ಕೂ ಸಾಲಮನ್ನಾಕ್ಕೆ ಅರ್ಹರು.

ಒಂದು ವಿಚಾರ. ಎರಡು ಹೆಕ್ಟೇರ್ ಮಿತಿಯಲ್ಲಿ ಸಾಲಮನ್ನಾ ಮಾಡುವುದುಂಟು. ಎರಡು ಲಕ್ಷ ರೂಪಾಯಿ ಮಿತಿಯಲ್ಲಿ ಸಾಲಮನ್ನಾ ಮಾಡುವುದು ವಾಡಿಕೆ ಆಗಿದೆ. ಆದರೆ ಇದು ರಾವಣಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಅಷ್ಟೆ. ದೇಶದಲ್ಲಿ ಎಷ್ಟು ಬಹುಬಗೆಯ ವಾತಾವರಣ ಇದೆಯೆಂದರೆ, ಒಟ್ಟಾರೆ ಲೆಕ್ಕಾಚಾರ ಹಾಕಿ ದೇಶದ ಸರಾಸರಿ ಕೊಡುವುದು ರೈತಾಪಿ ವರ್ಗಕ್ಕೆ ಮಹಾ ಅನ್ಯಾಯ ಮಾಡಿದಂತೆ. ಏಕೆಂದರೆ ನೀರಾವರಿ ಪ್ರದೇಶದಲ್ಲಿ ಎರಡು ಹೆಕ್ಟೇರಿಗಿಂತ ಹೆಚ್ಚಿನವರು ಬೇಸಾಯ ಆಧರಿಸಿ ಬದುಕಬಹುದು. ಅವರ ಆದಾಯದಲ್ಲಿ ಶೇ.54ರಷ್ಟು ಕೃಷಿ ಆದಾಯ ಎಂದು ಒಂದು ಸರಾಸರಿ ಹೇಳುತ್ತದೆ. ಈ ಧೋರಣೆ ಬರಗಾಲದ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಪಂಜಾಬ್, ಹರಿಯಾಣ ರೈತರಿಗೆ ಇದು ಓಕೆ ಇರಬಹುದು, ಇಲ್ಲಿ ಅಲ್ಲ. ಪಂಜಾಬಿನಲ್ಲಿ ಎರಡು ಹೆಕ್ಟೇರ್ ಭೂಮಿ ಇದ್ದರೆ ಅವನು ಸಣ್ಣರೈತ ಎಂಬುದು ಲೆಕ್ಕ! ಇಲ್ಲಿ? ಈಚೆಗೆ ಗೆಳೆಯರೊಬ್ಬರು ಫೋನ್ ಮಾಡಿದ್ದರು. ಅವರಿಗೆ ಉತ್ತರ ಕರ್ನಾಟಕದಲ್ಲಿ ಐವತ್ತು ಎಕರೆಗೂ ಹೆಚ್ಚು ಭೂಮಿ ಇದೆ. ಅವರ ಸ್ಥಿತಿ ಹೇಗಿದೆ ಎಂದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಮಾಡಿ ಈಗ ಬಾಡಿಗೆಮನೆಯಲ್ಲಿ ಇದ್ದಾರೆ! ಬರಗಾಲ ಪ್ರದೇಶದ ರೈತರ ಹೆಣಗಾಟ ಇದು. ಎಷ್ಟು ಕಾಲ ಹೀಗೆ?

ನಮ್ಮ ದೇಶದಲ್ಲಿ ಕೃಷಿ ಭೂಮಿಗೆ ನೀರಾವರಿ ಇರುವುದು ಶೇ. 41 ಮಾತ್ರ. ಮೂರನೇ ಎರಡರಷ್ಟು ಭೂಮಿಗೆ ನೀರಾವರಿ ಇಲ್ಲ. ಅದು ಓಕೆ ಎನ್ನುತ್ತದೆ ಈಗಿನ ನಾಡಿನ ದೊರೆಗಳ ಧೋರಣೆ. ಈ ಪರಿಸ್ಥಿತಿಯಲ್ಲಿ ಕೃಷಿಯಲ್ಲಿ ಸ್ವಲ್ಪವಾದರೂ ಬದಲಾವಣೆ ಉತ್ತಮ ಸ್ಥಿತಿಗಾಗಿ ಬರಬೇಕೆಂದರೆ ಒಂದು ಮಾರ್ಗ ಇದೆ. ಅದೇ ಮೈಕ್ರೋ ನೀರಾವರಿ-ಹನಿ ನೀರಾವರಿ ಪ್ಲಸ್ ತುಂತುರು ನೀರಾವರಿ. ಈ ಮೂಲಕ ಫಸಲನ್ನು ಶೇ. 150ರಷ್ಟು ಹೆಚ್ಚು ಪಡೆಯಬಹುದು.

ಈಗ ದೇಶದಲ್ಲಿ ಮೈಕ್ರೋ ನೀರಾವರಿಯು 8.6 ಮಿಲಿಯನ್ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಜಾರಿಯಲ್ಲಿದೆ. ಇದರಲ್ಲಿ ರಾಜಸ್ಥಾನ ಶೇ. 20, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಶೇ. 15ರಷ್ಟು, ಗುಜರಾತ್ ಶೇ. 13 ಹಾಗೂ ಕರ್ನಾಟಕ ಶೇ. 11ರಷ್ಟು ಪಾಲು ಹೊಂದಿವೆ. ತುಂತುರು ನೀರಾವರಿ ರಾಜಸ್ಥಾನದಲ್ಲಿ ಹೆಚ್ಚು. ಆಂಧ್ರ, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಲ್ಲಿ ಹನಿನೀರಾವರಿ ಹೆಚ್ಚು. ಹನಿ-ತುಂತುರು ನೀರಾವರಿ ಹೆಚ್ಚು ಇಲ್ಲದ ರಾಜ್ಯಗಳು ಎಂದರೆ ಹರಿಯಾಣ, ಪಂಜಾಬ್, ಮಧ್ಯಪ್ರದೇಶ, ತಮಿಳುನಾಡು, ಛತ್ತೀಸ್​ಗಢ, ಬಿಹಾರ, ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್ ಮೊದಲಾದ ರಾಜ್ಯಗಳು. ಇವೇ ಈ ಹನಿ-ತುಂತುರು ನೀರಾವರಿ ಬೇಕಿಲ್ಲದ ರಾಜ್ಯಗಳು. ದೇಶಕ್ಕೆ ಬೇಕಾದ ಅಕ್ಕಿ-ಗೋಧಿ-ಸಕ್ಕರೆ ಒದಗಿಸುತ್ತಿವೆ ಈ ರಾಜ್ಯಗಳು. ಇಲ್ಲಿಗೇ ಸರ್ಕಾರದ ಸವಲತ್ತುಗಳು ಸೇರುತ್ತಿವೆ. ಹೀಗಾದರೆ, ಉಳಿದ ರಾಜ್ಯಗಳ ಗತಿಯೇನು?

ಈಗ ಸ್ಥಿತಿ ಹೀಗಿದೆ ಎಂದರೆ, ಕೃಷಿ ವಿಷಯವು ರಾಜ್ಯ ಸರ್ಕಾರಗಳ ವ್ಯಾಪ್ತಿಯದು ಎಂಬುದು ಕೇಂದ್ರ ಸರ್ಕಾರದ ಧೋರಣೆ. ಹೀಗಾಗಿ ಅಲ್ಲಿಂದ ನೀರಾವರಿ ವಿಚಾರಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಬರುವುದೇ ಇಲ್ಲ. ಕೇಂದ್ರ ಸರ್ಕಾರವು ನೀರಾವರಿಗೆ ಇಟ್ಟಿರುವ ಹಣ 9400 ಕೋಟಿ ರೂಪಾಯಿ, ಗೊಬ್ಬರಕ್ಕೆ 70,000 ಕೋಟಿ ರೂಪಾಯಿ, ಆಹಾರ ಸಬ್ಸಿಡಿಗೆ 1,70,000 ಕೋಟಿ ರೂಪಾಯಿ. ಅಂದರೆ ದಿಲ್ಲಿ ದೊರೆಗಳ ಪಟ್ಟಿಯಲ್ಲಿ ಬರ ರಾಜ್ಯಗಳ ನೀರಾವರಿಗೆ ಎಂಟ್ರಿ ಇಲ್ಲ!

ಇನ್ನು ರಾಜ್ಯಗಳ ಪಾಲು ಹೀಗಿದೆ-ರೈತರ ಸಾಲ ಮನ್ನಾ ಮಾಡಿರುವ ರಾಜ್ಯಗಳು ನೀರಾವರಿಗಾಗಿ ತಮ್ಮ ಬಜೆಟ್ ಖರ್ಚಿನಲ್ಲೇ ಕೊಟ್ಟಿರುವ ಪಾಲು ಕೇವಲ ಶೇ. 3.81 ಮಾತ್ರ. ಇನ್ನು ಬರ ಇಲ್ಲದ ರಾಜ್ಯಗಳು ಕೊಟ್ಟಿರುವ ಬಜೆಟ್ ಖರ್ಚಿನ ಪಾಲು ಶೇ.1.95 ಮಾತ್ರ. ಬರಪೀಡಿತ ರಾಜ್ಯಗಳು, ಸಾಲ ಮನ್ನಾ ಮಾಡಿರುವ ರಾಜ್ಯಗಳೂ ಸೇರಿ ಒಟ್ಟಾಗಿ ನೀರಾವರಿಗೆ ಬಜೆಟ್​ನಲ್ಲಿ ಇಟ್ಟಿರುವ ಹಣದ ಪಾಲು ಶೇಕಡ 5.9 ಮಾತ್ರ. ಎಂಥ ಅನಾಹುತವೇ ಆಗಿದೆ ನೋಡಿ.

ನೀರಾವರಿ-ಹನಿ ಕಣ್ಣೀರಾವರಿ!

ನಮ್ಮ ದೇಶದಲ್ಲಿ ನೀರಾವರಿ ಜಮೀನು ಒಟ್ಟು ಕೃಷಿ ಭೂಮಿಯಲ್ಲಿ 2012ರಲ್ಲಿ ಶೇ.41 ಮಾತ್ರ ಇತ್ತು! ಇದು ಆಘಾತಕಾರಿ. ಇಲ್ಲ, ಶೇ.52 ಕೃಷಿ ಭೂಮಿಗೆ ನೀರಾವರಿ ಇದೆ ಎನ್ನುವವರೂ ಇರಬಹುದು. ಆದರೆ ನಿಜಸ್ಥಿತಿ ಇದೆಲ್ಲಕ್ಕಿಂತ ಘೊರವಾಗಿದೆ. ಎರಡು ಮೂರು ಬೆಳೆ ಬೆಳೆಯುವ ಪ್ರದೇಶದಲ್ಲಿ ನೀರಾವರಿ ಇದೆ ಎಂದು ಹೇಳುವುದಾದರೆ ಅದು ಸರಿ ಕೂಡ! ಹಿಂಗಾರಿನಲ್ಲೂ ಅಕ್ಕಿ ಗೋಧಿ ಬೆಳೆಯಲು ನೀರಾವರಿ ಪ್ರದೇಶದಲ್ಲಿ ಮಾತ್ರ ಸಾಧ್ಯ. ಈಗಿನ ಹಿಂಗಾರಿನಲ್ಲಿ ಅಕ್ಕಿ ಗೋಧಿ ಬೆಳೆಯುತ್ತಿರುವ ಪ್ರದೇಶ 31 ಮಿಲಿಯನ್ ಹೆಕ್ಟೇರ್ ಆಗಿದೆ. ಹೋದ ವರ್ಷ ಇದು 32 ಮಿಲಿಯನ್ ಹೆಕ್ಟೇರ್ ಇತ್ತು. ಈಗ ನೋಡಿ, ದೇಶದಲ್ಲಿ 141 ಮಿಲಿಯನ್ ಹೆಕ್ಟೇರ್ ಭೂಮಿಯಲ್ಲಿ ಬೇಸಾಯ ನಡೆಯುತ್ತಿದೆ. ಇದರಲ್ಲಿ ಕೇವಲ 31-32 ಮಿಲಿಯನ್ ಹೆಕ್ಟೇರ್ ಭೂಮಿಗೆ ಮಾತ್ರ ನೀರಾವರಿ ಇದೆ ಎಂದರೆ ಭಯಾನಕ ಪರಿಸ್ಥಿತಿ ನಮ್ಮದು ಎಂದರ್ಥ. ಏಕೆಂದರೆ ದೇಶದ ಕೃಷಿ ಭೂಮಿಯಲ್ಲಿ ನಾಲ್ಕನೇ ಒಂದು ಭಾಗದ ಭೂಮಿಗೂ ನೀರಾವರಿ ಇಲ್ಲ!

ಇನ್ನೊಂದು ಮಾತು. ಬರಪೀಡಿತ ರಾಜ್ಯಗಳ ನೀರಾವರಿಗೆ ಹನಿ-ತುಂತುರು ನೀರಾವರಿಗೆ ಸಂಜೀವನಿ ಎಂಬ ಮಾತಿದೆ. ಇದಾದರೂ ಹೇಗೆ ಸಾಗಿದೆ ದೇಶದಲ್ಲಿ? 70 ಮಿಲಿಯನ್ ಹೆಕ್ಟೇರ್​ನಲ್ಲಿ ಈ ಮೈಕ್ರೋ ನೀರಾವರಿ ಮಾಡಬಹುದು ಎಂದು ಗುರುತಿಸಲಾಗಿದೆ. ನಮ್ಮ ಈಗಿನ ಸ್ಥಿತಿ ಏನು? ನಾವು ವರ್ಷಕ್ಕೆ ಅರ್ಧ ಮಿಲಿಯನ್ ಹೆಕ್ಟೇರ್ ಒಣಭೂಮಿಯನ್ನು ಮಾತ್ರ ಹನಿ-ತುಂತುರು ನೀರಾವರಿಗೆ ತರುತ್ತಿದ್ದೇವೆ! ಹಾಗಾದರೆ ಎಪ್ಪತ್ತು ಮಿಲಿಯನ್ ಮುಟ್ಟುವುದಾದರೂ ಯಾವಾಗ? ಈಗಿನ ಗತಿಯಲ್ಲಿ ಸಾಗಿದರೆ ಇನ್ನು ನೂರು ವರ್ಷವಾದರೂ ಅದು ಆಗದು!! ಅಂದರೆ ನೂರು ವರ್ಷವಾದರೂ ಇಲ್ಲಿನ ರೈತರ ಉದ್ಧಾರ ಅಸಾಧ್ಯ. ಇದು ಸರ್ವಥಾ ಸರಿಯಲ್ಲ. ಇದು ಬಜೆಟ್ ಕಾಲ. ಬರಪೀಡಿತ ಪ್ರದೇಶಗಳಲ್ಲಿ ನೀರಾವರಿಗಾಗಿ ಇಟ್ಟಿರುವ ಹಣವು ರಾಜ್ಯಗಳಲ್ಲಿ ಒಟ್ಟು ಬಜೆಟ್ ಖರ್ಚಿನಲ್ಲಿ ಎಷ್ಟು ಎಂಬುದನ್ನು ಹುಡುಕಿ ನೋಡಿ, ಆಗ ನಿಮಗೆ ಗೊತ್ತಾಗುತ್ತದೆ ರೈತರ ಉದ್ಧಾರಕ್ಕೆ ಎಷ್ಟು ಕಾಲ ಬೇಕು, ರೈತರ ಬಗ್ಗೆ ಸರ್ಕಾರಗಳಿಗೆ ಇರುವ ಕಾಳಜಿ ಎಷ್ಟು ಎಂದು.

(ಲೇಖಕರು ಹಿರಿಯ ಪತ್ರಕರ್ತರು ಹಾಗೂ ಆರ್ಥಿಕ ಚಿಂತಕರು)
(ಪ್ರತಿಕ್ರಿಯಿಸಿ: [email protected])