ಬಿಜೆಪಿ ಬಗ್ಗೆ ಎಲ್ಲ ವರ್ಗದವರಲ್ಲೂ ಪ್ರೀತಿ, ಗೌರವ ಹೆಚ್ಚಾಗಿದೆ: ಇದಕ್ಕೆ ಸರ್ಕಾರದ ಅಭಿವೃದ್ಧಿ ಕಾರ್ಯ ಕಾರಣ

>

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಬಗ್ಗೆ ಎಲ್ಲ ವರ್ಗದವರಲ್ಲೂ ಪ್ರೀತಿ, ಗೌರವ ಹೆಚ್ಚಾಗಿದೆ. ತಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ಧಾರೆ. ಹೀಗಾಗಿ ಈ ಬಾರಿಯೂ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಜನ ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ಧಾರೆ.

ಬಿಜೆಪಿಯ 39ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಸಾಮಾಜಿಕ ಜಾಲತಾಣ ಟ್ವಿಟ್ಟರ್​ನಲ್ಲಿ ಟ್ವೀಟ್​ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಉತ್ತಮ ಸಮಾಜ ಸೇವೆ ಮೂಲಕ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಬದ್ಧತೆಯೊಂದಿಗೆ ಬಿಜೆಪಿ ಅಸ್ತಿತ್ವಕ್ಕೆ ಬಂದಿತು. ಈ ಕಾರ್ಯದಲ್ಲಿ ಅದು ಯಶಸ್ವಿಯಾಗಿರುವುದರಿಂದ ದೇಶದೆಲ್ಲಡೆ ಮೊದಲ ಆದ್ಯತೆ ಪಡೆದುಕೊಳ್ಳಲಾರಂಭಿಸಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಮತ್ತು ರಾಷ್ಟ್ರಭಕ್ತಿಯಿಂದಾಗಿ ಬಿಜೆಪಿ ಇಂದು ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಸಂಕಷ್ಟದ ಸಮಯದಲ್ಲಿ ಈ ಪಕ್ಷ ಮುಂಚೂಣಿಯಲ್ಲಿ ನಿಂತು ದೀನದಲಿತರ ಸೇವೆಯನ್ನು ಮಾಡುತ್ತದೆ. ನಮ್ಮ ಸರ್ಕಾರ ಕೈಗೊಂಡಿರುವ ಆಮೂಲಾಗ್ರ ಅಭಿವೃದ್ಧಿ ಕಾರ್ಯ ದೇಶದ ಎಲ್ಲ ವರ್ಗಗಳ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಟ್ವೀಟ್​ನಲ್ಲಿ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರು ದಿನರಾತ್ರಿ ಶ್ರಮವಹಿಸಿ, ಕೇಂದ್ರದಲ್ಲಿ ಈ ಬಾರಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಸರ್ಕಾರ ಸ್ಥಾಪನೆಗೆ ಮುಂದಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವೀಟ್​ ಜತೆಗೆ ಪಕ್ಷದ ಸಂಸ್ಥಾಪಕರಾದ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮತ್ತು ಲಾಲ್​ಕೃಷ್ಣ ಆಡ್ವಾನಿ ಸೇರಿ ಹಲವು ಮುಖಂಡರ ಭಾಷಣದ ವಿಡಿಯೋ ತುಣುಕುಗಳನ್ನು ಅಳವಡಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಕೂಡ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಂದು ಶುಭಾಶಯ ಕೋರಿ, ಟ್ವೀಟ್​ ಮಾಡಿದ್ದಾರೆ.

1980ರಲ್ಲಿ ಬಿಜೆಪಿ ಉದಯ

1977ರಲ್ಲಿ ಕಾಂಗ್ರೆಸ್​ ವಿರೋಧಿ ಬಣಗಳೆಲ್ಲ ಒಂದಾಗಿ ರಚಿಸಿಕೊಂಡಿದ್ದ ಜನತಾ ಪಕ್ಷದಲ್ಲಿ ಜನಸಂಘ ವಿಲೀನಗೊಂಡಿತ್ತು. ಆದರೆ, ಮುಖಂಡರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ 1980ರಲ್ಲಿ ಜನತಾ ಪಕ್ಷದಿಂದ ಹೊರಬಂದ ಅಂದಿನ ಜನಸಂಘ ನಾಯಕರು ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದರು.

1984ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಕೇವಲ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಅಲ್ಲಿಂದ ಮುಂದೆ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿರುವ ಪಕ್ಷ, ಕೇಂದ್ರದಲ್ಲಿ ಸರ್ಕಾರ ರಚನೆಗೆ ಅಗತ್ಯವಾದಷ್ಟು ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ. (ಏಜೆನ್ಸೀಸ್​)