More

    ‘ನಮ್ಮ ಕ್ಲಿನಿಕ್’ಗಳಿಗೆ ಬೇಕು ‘ಚಿಕಿತ್ಸೆ’-ವಿವಿಧೆಡೆ ವೈದ್ಯರ ಕೊರತೆ

    ಬಳ್ಳಾರಿ: ಬಡವರ ಆರೋಗ್ಯ ಸುಧಾರಣೆಗಾಗಿ ರಾಜ್ಯ ಬಿಜೆಪಿ ಸರ್ಕಾರ ಆರಂಭಿಸಿದ್ದ ‘ನಮ್ಮ ಕ್ಲಿನಿಕ್’ಗಳಿಗೆ ಚಿಕಿತ್ಸೆ ನೀಡುವ ಸ್ಥಿತಿ ಬಂದೊದಗಿದೆ. ವೈದ್ಯರು, ಮೂಲಸೌಕರ್ಯ ಕೊರತೆ ಹಾಗೂ ಬಾಡಿಗೆ ಕಟ್ಟಡದಲ್ಲೇ ಕ್ಲಿನಿಕ್‌ಗಳು ನಡೆಯುತ್ತಿವೆ. ಅಲ್ಲದೆ ಸಿಬ್ಬಂದಿ ಮೂರು ತಿಂಗಳಿಂದ ಸಂಬಳ ಇಲ್ಲದೆ ಕಾರ್ಯನಿರ್ವಹಿಸುವಂತಾಗಿದೆ.

    ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲಾಯಿತು. ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 11 ಕಡೆ ತೆರೆಯಲು ಸೂಚಿಸಲಾಗಿತ್ತು. ಅದರಲ್ಲಿ ಎಂಟು ಮಾತ್ರ ಆರಂಭಗೊಂಡಿದ್ದು, ಐದು ತಿಂಗಳು ಕಳೆದರೂ ಮೂಲಸೌಲಭ್ಯ ಕಲ್ಪಿಸಿಲ್ಲ.ಬಳ್ಳಾರಿ ತಾಲೂಕು ವ್ಯಾಪ್ತಿಯಲ್ಲಿ ಐದು, ಕುರುಗೋಡು, ಕಂಪ್ಲಿ, ಸಿರಗುಪ್ಪದಲ್ಲಿ ತಲಾ ಒಂದು ನಮ್ಮ ಕ್ಲಿನಿಕ್‌ಗಳು 2022ರ ಡಿ. 14ರಿಂದ ಕಾರ್ಯನಿರ್ವಹಿಸುತ್ತಿವೆ. ಸಂಡೂರು ತಾಲೂಕು ವ್ಯಾಪ್ತಿಯಲ್ಲಿ ಮೂರು ಕ್ಲಿನಿಕ್‌ಗೆ ಅನುಮತಿ ನೀಡಿದ್ದರೂ ಕಾರ್ಯಾರಂಭಗೊಂಡಿಲ್ಲ.

    ಇದನ್ನೂ ಓದಿ: ನಮ್ಮ ಕ್ಲಿನಿಕ್ ಸೇವೆ ಸದ್ಬಳಕೆ ಮಾಡಿಕೊಳ್ಳಿ -ಶಾಸಕ ಎಂ.ಎಸ್.ಸೋಮಲಿಂಗಪ್ಪ ಸಲಹೆ

    ಮೂಲ ಸೌಕರ್ಯದ ಕೊರತೆ

    ನಮ್ಮ ಕ್ಲಿನಿಕ್‌ಗಳು ಆರ್ಥಿಕವಾಗಿ ಹಿಂದುಳಿದವರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ನೀಡಲಿವೆ. ಆ ಪೈಕಿ ಉಚಿತ ಆರೋಗ್ಯ ತಪಾಸಣೆ, ಔಷಧಗಳು, ಪ್ರಯೋಗಶಾಲೆಗಳು ಹಾಗೂ ಇತರ ಹದಿನಾಲ್ಕು ಪರೀಕ್ಷೆಗಳು ಇಲ್ಲಿರಬೇಕು. ಜತೆಗೆ ನಿರೀಕ್ಷಣಾ ಕೊಠಡಿ, ತಪಾಸಣಾ ಕೊಠಡಿ, ಪ್ರಯೋಗ ಶಾಲೆ, ಯೋಗ ಕೊಠಡಿ, ಔಷಧ ಕೊಠಡಿ ಒಳಗೊಂಡ ವಿಶಾಲವಾದ ಆರೋಗ್ಯ ಕೇಂದ್ರವಾಗಿರಬೇಕು.

    ಆದರೆ ಬಹುತೇಕ ಕಡೆ ಲ್ಯಾಬ್‌ಗಳಿಲ್ಲ. ಮುಂಡ್ರಗಿ, ಕುರುಗೋಡು ಮತ್ತು ಕಂಪ್ಲಿಯಲ್ಲಿ ವೈದ್ಯರೇ ಇಲ್ಲ. ಕೆಲ ಕ್ಲಿನಿಕ್‌ಗಳಲ್ಲಿ ಒಬ್ಬ ವೈದ್ಯಾಧಿಕಾರಿ, ನರ್ಸ್, ಲ್ಯಾಬ್‌ಟೆಕ್ನಿಷಿಯನ್, ಡಿ ದರ್ಜೆ ನೌಕರರೊಬ್ಬರನ್ನು ನೇಮಕ ಮಾಡಲಾಗಿದೆ. ಅವರಿಗೆ ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ. ಬಾಡಿಗೆ ಕಟ್ಟಡದಲ್ಲೇ ಕ್ಲಿನಿಕ್‌ಗಳನ್ನು ನಿರ್ವಹಣೆ ಮಾಡಲಾಗುತ್ತಿದೆ.

    ಗಗನ ಕುಸುಮವಾದ ಸೇವೆಗಳು

    ನಮ್ಮ ಕ್ಲಿನಿಕ್‌ನಲ್ಲಿ 12 ಆರೋಗ್ಯ ಸೇವೆಗಳನ್ನು ನೀಡಬೇಕಿದೆ. ಆದರೆ ಅವುಗಳಲ್ಲಿ ಬಹುತೇಕ ಸೇವೆಗಳು ಲಭ್ಯವಿಲ್ಲ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರೆಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣ, ಕುಟುಂಬ ಕಲ್ಯಾಣಗಳ ಗರ್ಭ ನಿರೋಧಕ ಸೇವೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಚಿಕಿತ್ಸೆ, ರಕ್ತದೊತ್ತಡ, ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ, ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮಾನಸಿಕ ಆರೋಗ್ಯ ಸಂಬಂಧಿಸಿದ ಸೇವೆಗಳು ಕ್ಲಿನಿಕ್‌ಗಳಲ್ಲಿ ದೊರಕಬೇಕು. ಆದರೆ ಇಲ್ಲಿ ಜ್ವರ, ನೆಗಡಿ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಪರೀಕ್ಷೆ ಮಾಡುವುದು ಬಿಟ್ಟರೆ ಬಹುತೇಕ ಸೇವೆಗಳು ಗಗನ ಕುಸುಮವಾಗಿವೆ.

    ಎಲ್ಲೆಲ್ಲಿ ಕಾರ್ಯಾರಂಭ

    ಬಳ್ಳಾರಿ ನಗರದ ವಾರ್ಡ್ ನಂ.5, ಮುಂಡ್ರಿಗಿ. ಬೆಳಗಲ್ ರಸ್ತೆ, ಗೌತಮ್ ನಗರ., ಶ್ರೀ ಸದ್ಗುರು ಮಹಾದೇವ ತಾತನವರ ಮಠ ಹತ್ತಿರ,. ವಿನಾಯಕ ನಗರ., ಬಿಸಿಲಹಳ್ಳಿ, ಕುರುಗೋಡು ವಾರ್ಡ್ ನಂ.1, ಕಂಪ್ಲಿಯ ವಾರ್ಡ್ ನಂ.4, ಸಣಾಪುರ ರಸ್ತೆ, ಅಂಬೇಡ್ಕರ್ ನಗರ ಸಿರಗುಪ್ಪದಲ್ಲಿ ನಮ್ಮ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ.

    ‘ನಮ್ಮ ಕ್ಲಿನಿಕ್’ಗಳಿಗೆ ಬೇಕು ‘ಚಿಕಿತ್ಸೆ’-ವಿವಿಧೆಡೆ ವೈದ್ಯರ ಕೊರತೆ

    ಬಳ್ಳಾರಿ ಜಿಲ್ಲೆಯ ಎಂಟು ಕಡೆ ನಮ್ಮ ಕ್ಲಿನಿಕ್‌ಗಳು ಆರಂಭಗೊಂಡಿವೆ. ವಿವಿಧೆಡೆ ವೈದ್ಯರ ಕೊರತೆಯಿದ್ದು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಲಾಗುವುದು. ಕೇಂದ್ರದ ಸಿಬ್ಬಂದಿಗೆ ಸಂಬಳ ವಿಳಂಬವಾಗಿದ್ದು, ಶೀಘ್ರ ಪಾವತಿಗೆ ಕ್ರಮವಹಿಸಲಾಗುವುದು.
    | ಡಾ.ಜನಾರ್ದನ್, ಡಿಎಚ್‌ಒ, ಬಳ್ಳಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts