ಶಿವಮೊಗ್ಗ: ಕಾರ್ಮಿಕ ಇಲಾಖೆಯಿಂದ ಪ್ರತಿ ವರ್ಷ ಮೇ 1ರಂದು ಕಾರ್ಮಿಕ ದಿನಾಚರಣೆ ನಡೆಸಬೇಕು ಎಂದು ಒತ್ತಾಯಿಸಿ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಕಾರ್ಮಿಕ ಇಲಾಖೆ ಮೂಲಕ ಸಚಿವ ಸಂತೋಷ್‌ಲಾಡ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಕಾರ್ಮಿಕರು ದೇಶದ ನಿರ್ಮಾತೃಗಳು. ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ತರ. ಆದರೆ ಕಾರ್ಮಿಕ ಇಲಾಖೆಯಿಂದ ಜಿಲ್ಲಾ ಕೇಂದ್ರಗಳಲ್ಲಿ ಮೇ 1ರಂದು ಕಾರ್ಮಿಕ ದಿನಾಚರಣೆ ಆಯೋಜಿಸುತ್ತಿಲ್ಲ. ಇದರಿಂದ ಕಾರ್ಮಿಕರನ್ನು ಕಡೆಗಣಿಸಿದಂತಾಗಿದೆ ಎಂದು ಮನವಿ ಮೂಲಕ ಆಕ್ಷೇಪಿಸಿದರು.
ಸರ್ಕಾರ ಹಲವು ದಿನಾಚರಣೆಗಳನ್ನು ಆಯೋಜಿಸುತ್ತಿದ್ದು, ಆದರೆ ಕಾರ್ಮಿಕರ ದಿನಾಚರಣೆಯನ್ನೇ ಮರೆತಿದೆ. ನಿಜಕ್ಕೂ ದೌರ್ಭಾಗ್ಯದ ಸಂಗತಿ. ಪ್ರತಿ ವರ್ಷ ಮೇ 1ರಂದು ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ಇಲಾಖೆ ಸಹಕಾರದೊಂದಿಗೆ ಕಾರ್ಮಿಕ ದಿನ ಆಚರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಸಂಸ್ಥಾಪಕ ಕುಪೇಂದ್ರ ಆಯನೂರು, ರಾಜ್ಯಾಧ್ಯಕ್ಷ ಪ್ರದೀಪ್ ಹೊನ್ನಪ್ಪ, ಪ್ರಮುಖರಾದ ಇಂದಿರಾ ಬಸವನಗೌಡ, ಚೇತನ್ ಲಕ್ಕಪ್ಪ, ಸುರೇಖಾ ಪಾಲಾಕ್ಷಪ್ಪ, ಪ್ರಕಾಶ್ ಚಾಮುಂಡಿಪುರ, ಚಂದ್ರಶೇಖರ್, ಪ್ರದೀಪ್, ಅಶ್ವಿನಿ ಗೌಡ, ರಮೇಶ್ ಬಂದಗದ್ದೆ, ಸುನೀತಾ ಇತರರಿದ್ದರು.