ಹಬ್ಬಕ್ಕಾಗಿ ಸಾವಯವ ತರಕಾರಿ ಸಂತೆ

UDP-6-1-Santhe

ಮಲ್ಪೆಯ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಮಾರಾಟ ಮೇಳ

ವಿಜಯವಾಣಿ ಸುದ್ದಿಜಾಲ ಉಡುಪಿ:
ಹಬ್ಬಗಳ ಪರ್ವ ಆರಂಭಗೊಂಡಿದ್ದು ತರಕಾರಿ ಹಾಗೂ ಖಾದ್ಯಗಳಿಗೆ ಬೇಡಿಕೆಯೂ ಹೆಚ್ಚತೊಡಗಿದೆ. ಹಿಂದುಗಳಿಗೆ ಗಣೇಶ ಚತುರ್ಥಿ, ಕ್ರೈಸ್ತರಿಗೆ ಮೊಂತಿ ಫೆಸ್ಟ್​, ಮುಸ್ಲೀಮರಿಗೆ ಈದ್​ ಮಿಲಾದ್​ ಹಬ್ಬವಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಕೃಷಿಕರಿಗೆ ಸಹಾಯವಾಗಲೆಂದು ಸೆ.6 ಮತ್ತು 7ರಂದು ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿ ಸಾವಯವ ತರಕಾರಿ ಸಂತೆ ಆಯೋಜಿಸಲಾಗಿದೆ.

ಕೃಷಿಕರು ತಮ್ಮ ತೋಟದಲ್ಲಿ ಬೆಳೆದ ತಾಜಾ ತರಕಾರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ತೊಟ್ಟಂ, ತೆಂಕನಿಡಿಯೂರು, ಬಡಾನಿಡಿಯೂರು, ಮಲ್ಪೆ ಭಾಗದ ಹಲವಾರು ರೈತರು ಈ ಮಾರಾಟ ಮೇಳದಲ್ಲಿ ಪಾಲ್ಗೊಂಡು ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಮಧ್ಯವರ್ತಿಗಳಿಲ್ಲ

ಸಂತೆಯಲ್ಲಿ ಬೆಂಡೆಕಾಯಿ, ಹೀರೆ, ಹರಿವೆ, ಅಲಸಂಡೆ, ಬಸಳೆ ಹಾಗೂ ಇನ್ನಿತರ ತಾಜಾ ತರಕಾರಿಗಳು ಜನರಿಗೆ ಲಭಿಸುತ್ತಿವೆ. ಈ ಎಲ್ಲ ತರಕಾರಿಯನ್ನು ಸಾವಯವ ಗೊಬ್ಬರ ಬಳಕೆ ಮಾಡಿ ಬೆಳೆಸಲಾಗಿದೆ. ಇಲ್ಲಿ ಯಾವುದೇ ಮಧ್ಯವರ್ತಿಗಳು, ದಲ್ಲಾಳಿಗಳ ಕಿರಿಕಿರಿ ಇಲ್ಲ. ರೈತರಿಗೆ ತಾವು ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ನೇರವಾಗಿ ಅವಕಾಶ ನೀಡಲಾಗಿದೆ. ತೊಟ್ಟಂ ಚರ್ಚ್​ ವ್ಯಾಪ್ತಿಯಲ್ಲದೆ, ಪಕ್ಕದ ಚರ್ಚ್​ಗಳ ಸದಸ್ಯರೂ ಕೂಡ ಶುದ್ಧ ಹಾಗೂ ಸಾವಯವ ತರಕಾರಿ ಖರೀದಿಸಿದರು.

ತೆನೆ ಹಬ್ಬಆಚರಿಸಲು ಸಹಕಾರ

ಮೊಂತಿ ಫೆಸ್ಟ್​ ಅಥವಾ ತೆನೆ ಹಬ್ಬವನ್ನು ಕೆಸ್ತರು ಕುಟುಂಬದ ಹಬ್ಬವಾಗಿ ಆಚರಿಸುತ್ತಾರೆ. ಹೀಗಾಗಿ ಚರ್ಚ್​ನ ಸಂತ ವಿನ್ಸೆಂಟ್​ ದಿ ಪಾವ್ಲ್​ ಸೊಸೈಟಿ ಸದಸ್ಯರು ಚರ್ಚ್​ ವ್ಯಾಪ್ತಿಯ ಬಡ ಕುಟುಂಬಗಳಿಗೆ ಸಂತಸದಿಂದ ಹಬ್ಬ ಆಚರಿಸಲು ಬೇಕಾದ ವಸ್ತುಗಳನ್ನು ನೀಡಿ ಸಹಕಾರ ನೀಡಲಿದೆ.

ಮಾರುಕಟ್ಟೆಗಿಂತ ಕಡಿಮೆ ಬೆಲೆ

ತೊಟ್ಟಂ ದೇವಾಲಯದ ಕಥೊಲಿಕ್​ ಸಭಾ ಸಂಘಟನೆ ಆಯೋಜಿಸಿದ್ದ ಈ ಸಂತೆಗೆ ಸ್ಥಳೀಯ ಸರ್ವಧರ್ಮ ಸಮನ್ವಯ ಸಮಿತಿಯೂ ಸಹ ಕೈಜೋಡಿಸಿದೆ. ರೈತರಿಂದ ಗ್ರಾಹಕರಿಗೆ ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ತರಕಾರಿ ಲಭಿಸುತ್ತಿದೆ. ಗ್ರಾಹಕರಿಗೆ ನಗದು ವ್ಯವಹಾರಕ್ಕೆ ಮಾತ್ರ ಅವಕಾಶವಿದ್ದು, ಯಾವುದೇ ರೀತಿಯ ಡಿಜಿಟಲ್​ ಪೇಮೆಂಟ್​ಗೆ ಅವಕಾಶ ಇರಲಿಲ್ಲ. ಪ್ಲಾಸ್ಟಿಕ್​ ಮುಕ್ತವಾಗಿದ್ದ ಈ ಮಾರಾಟ ಮೇಳದಲ್ಲಿ ತರಕಾರಿ ಕೊಂಡೊಯ್ಯಲು ಕಡ್ಡಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ತರುವಂತೆ ಹಾಗೂ ಬಳಸುವಂತೆ ಸೂಚಿಸಿರುವುದು ಮತ್ತೊಂದು ವಿಶೇಷವಾಗಿತ್ತು.

UDP-6-1A-Santhe
ಮಲ್ಪೆ ಸಮೀಪದ ತೊಟ್ಟಂ ಸಂತ ಅನ್ನಮ್ಮ ದೇವಾಲಯದಲ್ಲಿತರಕಾರಿ ಖರೀದಿಸುತ್ತಿರುವ ಗ್ರಾಹಕರು.

ರೈತರಿಗೆ ಲಭಿಸಿತು ಉತ್ತಮ ದರ

ಹಲವಾರು ವರ್ಷದಿಂದ ಸಾವಯವ ಗೊಬ್ಬರ ಬಳಸಿ ವಿವಿಧ ತರಕಾರಿ ಬೆಳೆಸಿ ಸ್ಥಳೀಯ ಅಂಗಡಿಗಳಿಗೆ ರೈತರು ನೀಡುತ್ತಿದ್ದರು. ಆದರೆ, ಸೂಕ್ತ ದರ ಲಭಿಸುತ್ತಿಲ್ಲ. ದೂರದ ಮಾರುಕಟ್ಟೆಗೆ ಕೊಂಡೊಯ್ದರೆ ವಾಹನ ಬಾಡಿಗೆ ಹಾಗೂ ಇನ್ನಿತರ ಖರ್ಚು ಹೆಚ್ಚುತ್ತಿತ್ತು. ಈ ಬಾರಿ ಹತ್ತಿರದಲ್ಲೇ ಇಂತಹ ತರಕಾರಿ ಸಂತೆ ಆಯೋಜಿಸಿರುವುದರಿಂದ ನಾವು ಬೆಳೆದ ತರಕಾರಿಗೆ ಉತ್ತಮ ದರವೂ ಲಭಿಸಿದೆ ಎಂದು ಬಡಾನಿಡಿಯೂರು ಗ್ರಾಮದ ಕೃಷಿಕ ಗೋಪಾಲ ಕೆ. ಸಂತಸ ವ್ಯಕ್ತಪಡಿಸಿದ್ದಾರೆ.

ಗಣೇಶ ಚತುರ್ಥಿ, ಮೊಂತಿ ಫೆಸ್ಟ್​ ಹಬ್ಬಗಳು ಪರಿಸರಕ್ಕೆ ಸಂಬಂಧಪಟ್ಟ ಆಚರಣೆಯಾಗಿದೆ. ಹೀಗಾಗಿ ಸ್ಥಳೀಯ ಸರ್ವ ಧರ್ಮೀಯ ಕೃಷಿಕರನ್ನು ಪೋತ್ಸಾಹಿಸಲು ತರಕಾರಿ ಸಂತೆ ಆಯೋಜಿಸಲಾಗಿದೆ. ಸಾವಯವ ತರಕಾರಿ ಮತ್ತು ಆಹಾರೋತ್ಪನ್ನಕ್ಕೆ ಉತ್ತೇಜನ ನೀಡುವುದು, ಗ್ರಾಹಕರಿಗೆ ಬೆಳೆಗಾರರಿಂದ ನೇರವಾಗಿ ಖರೀದಿಗೆ ಅವಕಾಶ ಮಾಡಿಕೊಡುವುದು ಇದರ ಸದುದ್ದೇಶವಾಗಿದೆ.

| ವಂ.ಡೆನಿಸ್​ ಡೆಸಾ.
ಧರ್ಮಗುರು, ಸಂತ ಅನ್ನಮ್ಮ ದೇವಾಲಯ, ಮಲ್ಪೆ

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…